News

ಕೊನೆಗೂ ಕರ್ನಾಟಕದ ವಿರೋಧ ಪಕ್ಷದ ನಾಯಕನ ಆಯ್ಕೆ!

18 November, 2023 5:24 PM IST By: Hitesh
ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೃಷಿಮೇಳವು ನವೆಂಬರ್‌ 17ರಿಂದ ನವೆಂಬರ್‌ 20ರ ವರೆಗೆ ನಡೆಯಲಿದೆ. ಇದು ಸೇರಿದಂತೆ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

1. ಬೆಂಗಳೂರು ಜಿಕೆವಿಕೆ ಕೃಷಿ ಮೇಳಕ್ಕೆ ಅಭೂತಪೂರ್ವ ಪ್ರತಿಕ್ರಿಯೆ: 1 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ!
2. ಕೃಷಿ ಮೇಳಕ್ಕೆ ಬರುವವರಿಗೆ ಉಚಿತ ಪ್ರವೇಶ
3. ಪಿಎಂ ಕಿಸಾನ್‌ 15ನೇ ಕಂತಿನ ಹಣ ಬಿಡುಗಡೆಗೆ ವಿರೋಧ ಪಕ್ಷಗಳ ವಿರೋಧ
4. ರಾಜ್ಯದ ವಿವಿಧೆಡೆ ಸಾಧಾರಣ ಮಳೆ
5. ಪಿಂಚಣಿದಾರರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ
6.‌ ರಾಜ್ಯದ ವಿರೋಧ ಪಕ್ಷದ ನಾಯಕನ ಆಯ್ಕೆ

ಇಂದಿನ ಪ್ರಮುಖ ಸುದ್ದಿಗಳ ವಿವಿವರ ಈ ರೀತಿ ಇದೆ.
1. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳ- 2023ಕ್ಕೆ ರೈತರು

ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೃಷಿ ಮೇಳ ಶುಕ್ರವಾರ ಪ್ರಾರಂಭವಾಗಿದ್ದು, ಮೊದಲ ದಿನವೇ ಮೇಳಕ್ಕೆ 1.31 ಲಕ್ಷಕ್ಕೂ ಹೆಚ್ಚು ಜನ ಭೇಟಿ

ನೀಡಿದ್ದು, ಬರೋಬ್ಬರಿ 80 ಲಕ್ಷ ರೂಪಾಯಿ ವಹಿವಾಟು ನಡೆದಿದೆ. 

ರಾಜ್ಯಕ್ಕೆ ಇನ್ನೂ ಐದು ವರ್ಷ ವಿರೋಧ ಪಕ್ಷದ ನಾಯಕ ಇರಲ್ವಾ?!

ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿ ಮಾತನಾಡಿದರು, ಹಸಿರುಕ್ರಾಂತಿ ನಿರಂತರವಾಗಿರಬೇಕಾದರೆ

ರೈತರಿಗೆ ಹೊಸ ತಳಿಗಳು ಸಿಗಬೇಕು ಉತ್ತಮ ಮಣ್ಣಿನ ಫಲವತ್ತತೆ, ತಂತ್ರಜ್ಞಾನ, ರೈತರಿಗೆ ನ್ಯಾಯಯುತ ಬೆಲೆ

ಮತ್ತು ಆಹಾರ ಸಂಗ್ರಹಣೆಗೆ ಗೋದಾಮುಗಳ ಸೌಲಭ್ಯ ಇರಬೇಕು. ಆಗಮಾತ್ರ ಸುಸ್ಥಿರ ಕೃಷಿ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. 
-------------------
2. ಬೆಂಗಳೂರು ಕೃಷಿ ಮೇಳಕ್ಕೆ ಬರುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬೆಂಗಳೂರಿನ ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ

ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಇರಲಿದೆ. ಅಲ್ಲದೇ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸಹ ಇರಲಿದೆ.

ಇನ್ನು ಈ ಬಾರಿಯ ವಿಶೇಷವೆಂದರೆ ಬೀಜಸಂತೆ ಆಯೋಜಿಸಿರುವುದು. ಅಲ್ಲದೇ ಮೇಳದಲ್ಲಿ ಮಣ್ಣಿನ ಫಲವತ್ತತೆ ಹಾಗೂ

ರಸಗೊಬ್ಬರದ ಮಾಹಿತಿಗೆ ಧರ್ತಿ ಮಿತ್ರ ಮೊಬೈಲ್‌ ಆಯಪ್‌ ಪರಿಚಯಿಸಲಾಗಿದೆ. ಈ ಆಯಪ್‌ ಬೆಂಗಳೂರು ಗ್ರಾಮಾಂತರ,

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲಾ

ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ.
-------------------
3. ಪಿಎಂ ಕಿಸಾನ್‌ನ 15ನೇ ಕಂತಿನ ಹಣ ಬಿಡುಗಡೆ ಮಾಡಿರುವುದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಇದಕ್ಕೆ ಮುಖ್ಯ ಕಾರಣ ಇನ್ನು ಕೆಲವೇ ದಿನಗಳಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದು. 

ಕರ್ನಾಟಕದ ವಿರೋಧ ಪಕ್ಷದ ನಾಯಕ ಯಾರು ಎನ್ನುವುದಕ್ಕೆ ಉತ್ತರವೇ ಇಲ್ಲ!

ಕೇಂದ್ರ ಸರ್ಕಾರದ ಪಿಎಂ- ಕಿಸಾನ್ ಯೋಜನೆಯ 15ನೇ ಕಂತಿನ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಚೆಗೆ ಬಿಡುಗಡೆ

ಮಾಡಿದ್ದು, ಇದರಿಂದ 8 ಕೋಟಿ ರೈತರಿಗೆ ಅನುಕೂಲವಾಗಲಿದೆ. ಆದರೆ, ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಚುನಾವಣೆ ಮುಗಿದಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಂತದಲ್ಲಿದೆ.

ಈ ಸಂದರ್ಭದಲ್ಲಿ ಪಿಎಂ ಕಿಸಾನ್‌ ಯೋಜನೆಯ 15ನೇ ಕಂತಿನ ಹಣವನ್ನು ರೈತರ ಖಾತೆಗೆ ಈ ಹಂತದಲ್ಲಿ

ಬಿಡುಗಡೆ ಮಾಡಿರುವುದು ಉದ್ದೇಶಪೂರ್ವಕವೇ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.
------------------
4. ರಾಜ್ಯದ ವಿವಿಧೆಡೆ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶನಿವಾರ ಹಾಗೂ ಭಾನುವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ

ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ

ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಸಾಧಾರಣ ಮಳೆಯಾಗಲಿದೆ.
------------------    
5. ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ವಿಶೇಷ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ. ಪಿಂಚಣಿದಾರರು

ಅಥವಾ ಕುಟುಂಬದ ಪಿಂಚಣಿದಾರರಿಗೆ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ಅವರ ಮನೆ ಬಾಗಿಲಿಗೇ ತಲುಪಿಸಲು

ಮುಂದಾಗಿದ್ದು, ಈ ಸಂಬಂಧ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದರಿಂದಾಗಿ 5.4 ಲಕ್ಷಕ್ಕೂ ಹೆಚ್ಚು  ಪಿಂಚಣಿದಾರರ ಮನೆ ಬಾಗಿಲಿಗೆ ಪ್ರಮಾಣಪತ್ರ ತಲುಪಲಿದೆ.

ಅಲ್ಲದೇ ಪೋಸ್ಟ್‌ಮ್ಯಾನ್ ಮೂಲಕ ಆಧಾರ್‌, ಮೊಬೈಲ್‌ ಸಂಖ್ಯೆ, ಪಿಂಚಣಿದಾರರ ಬ್ಯಾಂಕ್ ಖಾತೆಯ

ವಿವರಗಳನ್ನು ಸಲ್ಲಿಸುವ ಮೂಲಕ ಬಯೋಮೆಟ್ರಿಕ್ ದೃಢೀಕರಣ ನೀಡಿ, ಪ್ರಮಾಣಪತ್ರ ಸಹ ಪಡೆಯಬಹುದಾಗಿದೆ. 


------------------

6. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ನಾಯಕ ಆರ್.ಅಶೋಕ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಆರ್‌. ಅಶೋಕ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಆರ್‌. ಅಶೋಕ ಅವರು ಏಳು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ.