ಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
Aadhaar Card| ಆಧಾರ್ ಕಾರ್ಡ್ನೊಂದಿಗೆ ಪಾನ್ಕಾರ್ಡ್ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card
1. ಮುಖ್ಯಮಂತ್ರಿ ಪುತ್ಥಳಿಗೆ ರಕ್ತ ಸುರಿದು ರೈತರ ಆಕ್ರೋಶ
2. ತೊಗರಿ ಬೆಳೆಗೆ ನೆಟೆ ರೋಗ: 1,500 ಕೋಟಿ ವಿಶೇಷ ಪ್ಯಾಕೇಜ್‌ಗೆ ಪ್ರಿಯಾಂಕ್ ಖರ್ಗೆ ಮನವಿ
3. ರೈತರ ಆದಾಯ ಕುಸಿತ: ವಿಧಾನಸಭೆಯಲ್ಲಿ ಚರ್ಚೆ
4. ಜಾನುವಾರುಗಳಿಗೆ ಚರ್ಮಗಂಟು ರೋಗ 37 ಕೋಟಿ ಪರಿಹಾರ: ಪ್ರಭು ಚೌವ್ಹಾಣ
5. ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಹಿಂಪಯಲು ಸಿದ್ದರಾಮಯ್ಯ ಆಗ್ರಹ
6. ಎಲೆಚುಕ್ಕಿ ರೋಗದಿಂದ ಹಾನಿ: 30 ಸಾವಿರ ಪರಿಹಾರ ನಿಗದಿ
7. ಕಡಲೆ ಬೆಳೆಗೆ ಸಿಡಿ ರೋಗ: ಸಂಕಷ್ಟದಲ್ಲಿ ನವಲಗುಂದ ರೈತರು
8. ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಬೆಂಕಿಗಾಹುತಿ
9. ಮಂಡ್ಯ ಘಟನೆ ಖಂಡಿಸಿ ರೈತರಿಂದ ವಿವಿಧೆಡೆ ಪ್ರತಿಭಟನೆ
10. Afc India Limited ವ್ಯವಸ್ಥಾಪಕ ನಿರ್ದೇಶಕ ಮಶರ್ ವೇಲಾಪುರತ್ KJ ಚೌಪಾಲ್‌ಗೆ ಭೇಟಿ
ಕುವೆಂಪು ಕವಿಮನೆ ದುರಸ್ತಿಗೆ 1 ಕೋಟಿ ಅನುದಾನ
-------------
1. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ, ಮಂಡ್ಯದಲ್ಲಿ ರೈತ ಸಂಘದ ಸದಸ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 52ನೇ ದಿನಕ್ಕೆ ಕಾಲಿರಿಸಿದ್ದು, ಹೋರಾಟಗಾರರು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ಥಳಿ ಮೇಲೆ ತಮ್ಮ ರಕ್ತ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ರೈತರು ಸಿರಿಂಜ್‌ನಿಂದ ರಕ್ತ ಸುರಿಸಿದ್ದಾರೆ. ಅಲ್ಲದೇ ರೈತರಿಗೆ ಮೋಸ ಮಾಡಿದ ಮುಖ್ಯಮಂತ್ರಿಗೆ ರಕ್ತ ಕೊಡುತ್ತಿದ್ದೇವೆ. ಸಿಹಿ ಸುದ್ದಿ ಕೊಡುವುದಾಗಿ ಹೇಳಿ ಅವರು ಮಾತು ತಪ್ಪಿದ್ದಾರೆ ಎಂದು ದೂರಿದ್ದಾರೆ. ಡಿ.30ರಂದು ಮನ್‌ಮುಲ್ ಆವರಣದಲ್ಲಿ ಮೆಗಾ ಡೇರಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬರಲಿರುವ ಹಿನ್ನೆಲೆಯಲ್ಲಿ, ಭದ್ರತೆ ಸಲುವಾಗಿ ಪೊಲೀಸರು ರೈತರ ಧರಣಿ ಸ್ಥಳ ತೆರವುಗೊಳಿಸಿದ್ದಾರೆ. ಅಲ್ಲದೇ ಹೋರಾಟಗಾರರನ್ನು ಬಂಧಿಸಿದ್ದಾರೆ.
-------------
-------------
2. ನೆಟೆ ರೋಗದಿಂದ ಹಾನಿಗೊಳಗಾದ ತೊಗರಿ ಬೆಳೆಗಾರರಿಗೆ 1, 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಏಷ್ಯಾ ಖಂಡದಲ್ಲೇ ಕಲಬುರಗಿಯಲ್ಲಿ ತೊಗರಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ ಇಲ್ಲಿನ ಜಮೀನಿಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆಯ ತೊಗರಿಯೂ ದೇಶದ ನಾನಾ ಭಾಗಗಳಿಗೆ ರವಾನೆಯೂ ಆಗುತ್ತಿದೆ.ಆದರೆ, ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಫಸಲು ಬರುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಸುಮಾರು 130 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಹಾಳಾಗಿದೆ. ಈಗ ನೆಟಿ ರೋಗ ಹೊಡೆತ ಕೊಟ್ಟಿದ್ದು ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೆಳೆಗಳು ಹಾನಿಯಾದಾಗ ವಿಶೇಷ ಪ್ಯಾಕೇಜ್ ನೀಡಲಾಗುತ್ತದೆ. ಅದೇ ರೀತಿ ಈಗ ನೆಟಿ ರೋಗದಿಂದ ಹಾನಿಗೊಳಗಾದ ತೊಗರಿ ಬೆಳೆಗಾರರಿಗೆ 1,500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪ್ರಿಯಾಂಕ ಖರ್ಗೆ ಅವರು ಆಗ್ರಹಿಸಿದ್ದಾರೆ.
-------------
3. ರೈತರ ಆದಾಯ ಕುಸಿಯುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಷಯ ಪ್ರಸ್ತಾಪಿಸಿದರು. ಕೇಂದ್ರ ಸರ್ಕಾರ 2023ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದೆ. ಆದರೆ, ರೈತರ ಆದಾಯ ದ್ವಿಗುಣ ಆಗುವುದಿರಲಿ, ಅವರ ಆದಾಯ ವೇಗವಾಗಿ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಬುಧವಾರ ಅತಿವೃಷ್ಟಿ ಮತ್ತು ಅನಾವೃಷ್ಟಿಯ ವಿಷಯವನ್ನು ಅವರು ಪ್ರಸ್ತಾಪಿಸಿದರು. ಇನ್ನು ಅಡಿಕೆ ಬೆಳೆಗಾರರ ಸಂಕಷ್ಟವನ್ನು ಪ್ರಸ್ತಾಪಿಸಿ, ಅಡಿಕೆ ಬೆಳೆಗಾರರನ್ನು ಸರ್ಕಾರವೇ ನಾಶ ಮಾಡಲು ಹೊರಟಂತಿದೆ. ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಅಡಿಕೆ ಬೆಲೆ ಕುಸಿದಿದೆ ಎಂದರು.
-------------
-------------
4. ಚರ್ಮಗಂಟು ರೋಗ ಸಮಸ್ಯೆ ಎದುರಿಸುತ್ತಿರುವ ರಾಸುಗಳಿಗೆ ಜನವರಿ ಮೊದಲ ವಾರದಲ್ಲಿ ಲಸಿಕೆ ಹಾಕಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಈವರೆಗೆ 92 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದ ಜಾನುವಾರುಗಳಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಇನ್ನು ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲಾಗುತ್ತಿದ್ದು, ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಈ ವರೆಗೆ ಒಟ್ಟು 37 ಕೋಟಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
-------------
5. ರೈತರ ನಿರಂತರ ಹೋರಾಟದ ನಂತರ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿಲ್ಲ. ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಶೀಘ್ರ ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಎಸ್‌ಪಿಯನ್ನು ಕೇವಲ 19 ಉತ್ಪನ್ನಗಳಿಗೆ ನೀಡಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕು. ರೋಗಗಳಿಂದ ನಷ್ಟಕ್ಕೀಡಾದ ತೊಗರಿ, ಅಡಿಕೆ, ರಾಗಿ,- ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
-------------
-------------
6. ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ವಿಧಾನಸಭೆಯಲ್ಲಿ ಶಾಸಕ ಸಂಜೀವ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರ ಜೊತೆ ಚರ್ಚೆ ನಡೆಸಿದೆ. ಎಲೆ ಚುಕ್ಕಿ ರೋಗ 1962ರಿಂದಲೂ ಇದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಕಳೆದ ಎರಡು ವರ್ಷದಿಂದ ಇದರ ತೀವ್ರತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸುವ ಅವಶ್ಯಕತೆ ಇದೆ. ಇನ್ನು ಎಲೆಚುಕ್ಕಿ ರೋಗಕ್ಕೆ ತುತ್ತಾದ ಅಡಿಕೆ ಮರಕ್ಕೆ ನರೇಗಾ ಯೋಜನೆ ಅಡಿ ಮೂವತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.
-------------
7. ನವಲಗುಂದ ಭಾಗದಲ್ಲಿ ರೈತರು ಬೆಳೆದ ಕಡಲೆ ಬೆಳೆಗೆ ಸಿಡಿ ರೋಗದ ಹಾವಳಿ ಎದುರಾಗಿದ್ದು, ರೈತರಿಗೆ ದೊಡ್ಡ ತಲೆನೋವಾಗಿದೆ. ಕಡಲೆ ಬೆಳೆಯಲ್ಲಿ ಸಿಡಿ ರೋಗ ಕಾಣಿಸಿಕೊಂಡಿದ್ದು, ಜಮೀನುಗಳಲ್ಲಿ ಎಲ್ಲಿ ನೋಡಿದರೂ ಬೆಳೆಗಳ ನಡುವೆ ಒಣಗಿದ ಗಿಡಗಳೇ ಕಾಣುತ್ತಿವೆ. ಔಷಧಿ ಸಿಂಪಡಣೆಯನ್ನು ಸರಿಯಾಗಿ ಮಾಡಿದರೂ ಸಹ ಬೆಳೆಗೆ ಸಿಡಿ ರೋಗ ಅಂಟಿಕೊಳ್ಳುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು, ಕೃಷಿ ತಜ್ಞರು ರೈತರ ಸಮಸ್ಯೆಗೆ ಸ್ಪಂದಿಸಬೇಕು. ರೈತರ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಸೂಚನೆ ನೀಡಿ ಬೆಳೆಗಳನ್ನು ಕಾಪಾಡಬೇಕು ಎಂದು ಯುವ ರೈತ ಮೈಲಾರಪ್ಪ ವೈದ್ಯ ಆಗ್ರಹಿಸಿದ್ದಾರೆ.
-------------
8. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಸಮೀಪದ ಸೋಮನಕಾಡು ಪ್ರದೇಶದಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಅಂದಾಜು 60 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ ಆಗಿದೆ. ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡ್ಗಿಚ್ಚಿನಿಂದ ಸುಮಾರು 60 ಎಕರೆ ಅರಣ್ಯ ನಾಶವಾಗಿದ್ದು, ಬೆಂಕಿಯಿಂದ ಸರೀಸೃಪಗಳು, ಕೀಟಗಳು, ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳು ಮೃತಪಟ್ಟಿರುವ ಸಾಧ್ಯತೆ ಇದೆ.
-------------
9. ಮಂಡದ್ಯದಲ್ಲಿ ರೈತರ ಹೋರಾಟವನ್ನು ಪೊಲೀಸರು ಮೊಟಕುಗೊಳಿಸಿರುವುದಕ್ಕೆ ರಾಜ್ಯದ ವಿವಿಧೆಡೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ,ಮಂಡ್ಯದಲ್ಲಿ ನಿರಂತರವಾಗಿ ಕಬ್ಬು ಬೆಲೆ, ಹಾಲಿನ ಬೆಲೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವಂತೆ ರೈತರು ಹೋರಾಟ ಮಾಡುತ್ತಿದ್ದಾರೆ.ಆದರೆ, ರೈತರ ಸಮಸ್ಯೆಯನ್ನು ಪರಿಹರಿಸಲು ವಿಫಲವಾದ ರಾಜ್ಯ ಸರ್ಕಾರ ಪೊಲೀಸರ ದಬ್ಬಾಳಿಕೆಯ ಮೂಲಕ ರೈತ ಚಳುವಳಿಯನ್ನು ಹತ್ತಿಕ್ಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಳವಳಿ ನಡೆಸುತ್ತಿದ್ದ ವೇದಿಕೆಯನ್ನು ಕಿತ್ತು ಎಸೆದು ರೈತರ ಬಂಧಿಸಿರುವುದು ಸರ್ಕಾರದ ಹೇಡಿತನದ ವರ್ತನೆ, ಇಂಥ ಬೆದರಿಕೆಗೆ ರೈತರು ಬಗುವುದಿಲ್ಲ ಎಂದಿದ್ದಾರೆ -------------
10. ಎಎಫ್‌ಸಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಾಶರ್ ವೇಲಾಪುರತ್ ಅವರು ಬುಧವಾರ ಕೃಷಿ ಜಾಗರಣದ ಕೆಜೆ ಚೌಪಲ್‌ಗೆ ಭೇಟಿ ನೀಡಿದರು. ವಿಶೇಷ ಅತಿಥಿಯಾಗಿ ಭೇಟಿ ನೀಡಿದ ಅವರು, ರೈತರಿಗೆ ಮಾಹಿತಿ ನೀಡಲು ಕೃಷಿ ಜಾಗರಣ ತಂಡದ ನಡೆಯುತ್ತಿರುವ ಪ್ರಯತ್ನ ಮತ್ತು ಎಫ್‌ಪಿಒ (FPO) ಕಾಲ್ ಸೆಂಟರ್ ಪರಿಚಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅತಿಥಿಗಳನ್ನು ಕೃಷಿ ಜಾಗರಣದ ವತಿಯಿಂದ ಗೌರವಿಸಲಾಯಿತು.
-------------