ಕರ್ನಾಟಕ ಚುನಾವಣೆಯಲ್ಲಿ ಲಿಂಗಾಯತರು ಪ್ರಮುಖ ಪಾತ್ರವನ್ನು ವಹಿಸಿದ್ದು, ಬಿಜೆಪಿಯಿಂದ ಹಿರಿಯ ನಾಯಕರು ನಿರ್ಗಮಿಸುತ್ತಿದ್ದಂತೆಯೇ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ.
ಬಿಜೆಪಿ ಲಿಂಗಾಯಿತ ಸಮುದಾಯದವರಿಗೆ ಪ್ರಾಮುಖ್ಯತೆ ನೀಡಿದೆ. ಈಗಾಗಲೇ ಈ ಸಮುದಾಯದ ಮೂವರನ್ನು ಮುಖ್ಯಮಂತ್ರಿ ಮಾಡಲಾಗಿದೆ.
ಇನ್ಮುಂದೆಯೂ ಲಿಂಗಾಯಿತ ಸಮುದಾಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪಕ್ಷವಿದ್ದರೆ,
ಅದು ಬಿಜೆಪಿ ಮಾತ್ರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಿರಿಯ ನಾಯಕರಾಗಿದ್ದು, ಅವರನ್ನು ಪಕ್ಷ ಈ ಎತ್ತರಕ್ಕೆ ಬೆಳೆಸಿದೆ.
ಅವರಿಗೆ ಎಲ್ಲ ರೀತಿಯ ಗೌರವ ಹಾಗೂ ಹುದ್ದೆಗಳನ್ನು ನೀಡಲಾಗಿತ್ತು. ಅವರು ರಾಜ್ಯ ಮಟ್ಟದ ನಾಯಕರಾಗಿ ಬೆಳೆಯುವಲ್ಲಿ ಬಿಜೆಪಿ ಕೊಡುಗೆ ಅಪಾರವಾಗಿದೆ ಎಂದರು.
ಇನ್ನು ಅವರು ಶಾಸಕರಾಗಿ, ಸಚಿವರಾಗಿ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ.
ಜಗದೀಶ ಶೆಟ್ಟರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೇಂದ್ರದ ನಾಯಕರು ಅವರ ಮನೆಗೆ ಹೋಗಿ ಮಾತನಾಡಿದ್ದಾರೆ.
ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರೂ ಅವರು ಬಿಜೆಪಿಯಿಂದ ಹೊರ ನಡೆದಿದ್ದಾರೆ.
ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಏನು ಎಂದು ಅವರಿಗೆ ಶೀಘ್ರ ತಿಳಿಯಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಯುವ ಲಿಂಗಾಯತ ನಾಯಕರನ್ನು ಬೆಳೆಸುತ್ತೇವೆ
ಕರ್ನಾಟಕದಲ್ಲಿ ಯುವ ಲಿಂಗಾಯತ ನಾಯಕರನ್ನು ಬೆಳೆಸುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ನಾಯಕರಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಇತರರು ಪಕ್ಷ ತೊರೆದು ಹೋಗಿದ್ದಕ್ಕೆ ಯಾವುದೇ ಬೇಸರವಿಲ್ಲ.
ಅವರ ಸ್ಥಾನದಲ್ಲಿ ಯುವ ಲಿಂಗಾಯತ ನಾಯಕರಿಗೆ ಟಿಕೆಟ್ ನೀಡಲಿದ್ದೇವೆ ಎಂದರು.
ಇಬ್ಬರೂ ನಾಯಕರು ಪಕ್ಷ ಬಿಟ್ಟು ಹೋಗಿದ್ದರಿಂದ ಪಕ್ಷದ ಓಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಬಿಜೆಪಿ ಸಮರ್ಥವಾಗಿ ಇದೆಲ್ಲವನ್ನು ನಿಭಾಯಿಸಲಿದೆ ಎಂದಿದ್ದಾರೆ.