ಡೈರಿ ಸ್ಪೋಟದಿಂದಾಗಿ ಸರಿಸುಮಾರು 18 ಸಾವಿರ ಹಸುಗಳು ಸಾವನ್ನಪ್ಪಿದ ಘಟನೆ ಅಮೇರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.
ಅಮೆರಿಕದ ಟೆಕ್ಸಾಸ್‌ನ ಪಶ್ಚಿಮ ಭಾಗದಲ್ಲಿರುವ ಡೈರಿ ಫಾರ್ಮೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಸುಮಾರು 18,000 ಹಸುಗಳು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇದು ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ಹಸುಗಳು ಸಾವಿಗೀಡಾಗಿರುವ ಅತಿದೊಡ್ಡ ಪ್ರಕರಣ ಎನಿಸಿಕೊಂಡಿದೆ.
ಟೆಕ್ಸಾಸ್‌ನ ಸೌತ್ ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಸೋಮವಾರ ಈ ಸ್ಫೋಟ ಸಂಭವಿಸಿದ್ದು, ಡೈರಿಯ ಮೇಲ್ಭಾಗದಲ್ಲಿ ಗಂಟೆಗಳ ಕಾಲ ಕಪ್ಪು ಮೋಡ ಆವರಿಸಿತ್ತು.
ಸ್ಫೋಟದ ಬಳಿಕ ಫಾರ್ಮ್‌ನಲ್ಲಿ ಭೀಕರವಾದ ಬೆಂಕಿ ಹೊತ್ತಿಕೊಂಡಿದ್ದು, ಈ ಬೆಂಕಿಯ ಕೆನ್ನಾಲಿಗೆಗೆ 18 ಸಾವಿರ ಹಸುಗಳು ಬಲಿಯಾಗಿವೆ.
ಇವುಗಳಲ್ಲಿ ಬಹುತೇಕ ಹೋಲಿಸ್ಟೈನ್ ಮತ್ತು ಜೆರ್ಸಿ ತಳಿಗೆ ಸೇರಿದ ಹಸುಗಳಾಗಿವೆ. ಡೈರಿ ಫಾರ್ಮ್‌ನಲ್ಲಿದ್ದ ಶೇ.90ರಷ್ಟು ಹಸುಗಳು ದುರ್ಘಟನೆಯಲ್ಲಿ ಸಾವನ್ನಪ್ಪಿವೆ.
ಈ ಘಟನೆಯಲ್ಲಿ ಯಾವುದೇ ಮಾನವರು ಸಾವಿಗೀಡಾಗಿಲ್ಲ. ಆದರೆ ಇಲ್ಲಿಯವರೆಗೂ ಈ ಸ್ಫೋಟಕ್ಕೆ ಕಾರಣವೇನು ಎಂಬುದು ಬೆಳಕಿಗೆ ಬಂದಿಲ್ಲ.
ಈ ದುರ್ಘಟನೆಯಿಂದ ಉಂಟಾದ ನಷ್ಟದ ಪ್ರಮಾಣವೂ ಸಹ ದೊಡ್ಡದಾಗಿದೆ. ಅಮೆರಿಕ ಟುಡೇ ವರದಿಯ ಪ್ರಕಾರ ಪ್ರತಿ ಹಸುವೂ ಸುಮಾರು 1.63 ಲಕ್ಷ ರು. ಬೆಲೆ ಬಾಳುತ್ತಿತ್ತು ಎಂದು ತಿಳಿದುಬಂದಿದೆ.