subsidy for sowing seeds in Monsoon: ಈ ಬಾರಿ ಮುಂಗಾರಿನಲ್ಲಿ ರೈತರಿಗೆ 10000 ರೂಪಾಯಿ ಬಿತ್ತನೆ ಬೀಜದ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಳೆದ ವರ್ಷ 47 ಲಕ್ಷ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗಿದೆ. ಈ ಬಾರಿ ಮುಂಗಾರಿನಲ್ಲಿ 10000 ರೂ. ಬಿತ್ತನೆ ಬೀಜದ ಸಬ್ಸಿಡಿ ನೀಡುತ್ತಿದ್ದೇವೆ.
ರೈತರ ಮಕ್ಕಳೂ ವಿದ್ಯೆ ಪಡೆಯಬೇಕು ಎನ್ನುವ ಸಲುವಾಗಿ ರೈತರ ವಿದ್ಯಾನಿಧಿ ಯೋಜನೆ ತಂದು 11 ಲಕ್ಷ ಮಕ್ಕಳಿಗೆ ಸುಮಾರು 700 ಕೋಟಿ ರೂಗಳ ಸ್ಕಾಲರ್‌ಶಿಪ್ ನೀಡಿದ್ದೇವೆ.
ಅಲ್ಲದೇ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದೇವೆ. ರೈತರಿಗೆ ಜೀವ ವಿಮಾ ಸೌಲಭ್ಯ ನೀಡಿದ್ದೇವೆ. ಹೀಗೆ ರೈತರಿಗೆ ಭದ್ರತೆ ನೀಡಿದ್ದೇವೆ.
ರೈತನ ದುಡಿಮೆಗೆ ಬೆಲೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ ಎಂದರು.
ನೀರಾವರಿಗೆ ದೊಡ್ಡ ಪ್ರಮಾಣದಲ್ಲಿ ಆದ್ಯತೆ ನೀಡಿದ್ದೇವೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿದ್ದು ನೀತಿ ಸಂಹಿತೆ ಕಾರಣಕ್ಕೆ ಟೆಂಡರ್ ಪ್ರಕಿಯೆ ಬಾಕಿ ಆಗಿದೆ.
ಟೆಂಡರ್ ಪ್ರಕ್ರಿಯೆ ಮುಗಿದ ಮೇಲೆ ಸುಮಾರು 500 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇವೆ. ಬಜೆಟ್ಟಿನಲ್ಲಿ ಇದಕ್ಕೆ 1000 ಕೋಟಿ ರೂ ಮೀಸಲಿಟ್ಟಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂ ನೀಡಿದೆ.
ಇಷ್ಟು ದೊಡ್ಡ ಮೊತ್ತ ಕೇಂದ್ರದಿಂದ ಇದೇ ಮೊದಲ ಬಾರಿಗೆ ನೀಡಿದೆ. ಇದರ ಸಂಪೂರ್ಣ ಬಳಕೆ ಮಾಡಿ ಸುಮಾರು 1.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಹಾಗೂ ಅದರ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಕೆಲಸವನ್ನು ನಾನು ಮಾಡಲಿದ್ದೇನೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಅಣೆಕಟ್ಟೆಯ ಎತ್ತರ ಮಾಡಲು ರೈತರು ಜಮೀನು ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರ ನೀಡಿ 524.5 ಅಡಿ ವರೆಗೂ ನೀರನ್ನು ನಾವು ಸಂಗ್ರಹಿಸುವ ಸಾಮರ್ಥ್ಯ ಸೃಷ್ಟಿ ಮಾಡುತ್ತೇವೆ ಎಂದರು.
ಈ ಬಾರಿಯ ಚುನಾವಣೆ ಮತ್ತು ಸರ್ಕಾರ, ಹಲವಾರು ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಚುನಾವಣೆ. ಈ ಸಕಾರಾತ್ಮಕವಾಗಿ ಮತ್ತು ನಮ್ಮ ಸರ್ಕಾರದ ಸಾಧನೆಗಳನ್ನು ಬಿಜೆಪಿ ಮುಂದಿಟ್ಟುಕೊಂಡು ನಮ್ಮ ಸರ್ಕಾರದ ರಿಪೋರ್ಟ್ ಕಾರ್ಡನ್ನು ಮುಂದಿಟ್ಟುಕೊಂಡು ಮತಗಳನ್ನು ಕೇಳುತ್ತಿದ್ದೇವೆ.
ಡಬಲ್ ಇಂಜಿನ್ ಸರ್ಕಾರವು ಜನರ ಬದುಕನ್ನು ಹಸನುಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಿದ್ದು ನಾವು ಇದನ್ನು ಪ್ರಸ್ತಾಪಿಸಿದ್ದೇವೆ ಎಂದರು.
ಪ್ರತೀ ಪಡಿತರ ಕಾರ್ಡಿಗೆ ಐದು ಕೆಜಿ ಆಹಾರ ಧಾನ್ಯವನ್ನು ಯಾವುದೇ ವೆಚ್ಚವಿಲ್ಲದೇ ಸಬ್ಸಿಡಿ ದರದಲ್ಲಿ ಪೂರೈಸುತ್ತಿದೆ. 17ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಮಗೆ ನೀಡಿದೆ.
12 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದ್ದು, 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ನೇರ ವರ್ಗಾವಣೆ ಮೂಲಕ ರೈತರಿಗೆ ಖಾತೆಗೆ ಸಂದಾಯವಾಗಿದೆ.
1.5 ಕೋಟಿ ಆಯುಷ್ಮಾನ್ ಕಾರ್ಡಗಳನ್ನು ನಾವು ವಿತರಿಸಿದ್ದು, 5 ಲಕ್ಷ ರೂ ವರೆಗೂ ವೈದ್ಯಕೀಯ ಚಿಕಿತ್ಸೆಗೆ ಅವಕಾಶ ನೀಡಲಾಗಿದ್ದು ಇದು ಡಬಲ್ ಇಂಜಿನ್ ಸರ್ಕಾರದ ಕೊಡುಗೆ ಎಂದರು.
73 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ಕುಡಿಯುವ ಸಾಧ್ಯವಾಗಿತ್ತು. ಪ್ರಧಾನಮಂತ್ರಿ ಮೋದಿಯವರು ಜಾರಿಗೆ ತಂದ ಮನೆಮನೆಗೆ ಗಂಗೆ ಯೋಜನೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ನೀಡಿದ್ದೇವೆ.
ಇದು ಬಹಳ ದೊಡ್ಡ ದಾಖಲೆ, ಯಾವುದು ಯಪಿಎ ಸರ್ಕಾರದಲ್ಲಿ ಸಾಧ್ಯವಿಲ್ಲ ಎಂದು ಕೈಬಿಡಲಾಗಿತ್ತೋ ಅಂತಹ ಎಲ್ಲಾ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಮಾಡಲು ಸಾಧ್ಯವಾಗಿದೆ.
ಹಿಂದೆ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕಿಳಿದ ಕಾರಣ ಸುಮಾರು 17 ಲಕ್ಷ ಮನೆಗಳ ನಿರ್ಮಾಣದಿಂದ ನಮ್ಮ ರಾಜ್ಯ ವಂಚಿತವಾಗಿತ್ತು. ಕೇವಲ ಸಾಫ್ಟ್ ವೇರ್ ಸುಧಾರಣೆಯಿಂದ ನಮಗೆ ಈಗ 17 ಲಕ್ಷ ಮನೆಗಳು ದೊರೆತಿದೆ.