Horticulture

"ಆರೋಗ್ಯ ವೃದ್ದಿಗೆ-ಪೌಷ್ಠಿಕ ಕೈತೋಟ"

11 June, 2022 3:07 PM IST By: Kalmesh T
Nutritional Garden for Health Care

ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ವೃದ್ದಿಗಾಗಿ ಹೇಗೆ “ಪೌಷ್ಠಿಕ ಕೈತೋಟ” ವನ್ನು ಬೆಳೆಸುವುದು ಎನ್ನುವದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಡಾ.ಸೌಮ್ಯ ಕುಮಾರಿ (ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ) ,  ಡಾ.ಸಚಿನ್ ಯು.ಎಸ್.( ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ).

ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದು ಇಲ್ಲ. ಪೌಷ್ಠಿಕ ಆಹಾರ ಸೇವನೆಯು ದೈನಂದಿನ ಚಟುವಟಿಕೆಗಳಿಗೆ ಸಮರ್ಪಕ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪೌಷ್ಠಿಕಾಂಶ ಇರುವ ಆಹಾರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಜೀವಸತ್ವಗಳು, ಪ್ರೋಟೀನ್ ಗಳು, ಶರ್ಕರ ಪಿಷ್ಠಗಳು ಹಾಗೂ ಖನಿಜಾಂಶಗಳಿರಬೇಕು.

ಇವುಗಳ ಪರಿಪೂರ್ಣ ದೊರಕುವಿಕೆಯು ಮನುಷ್ಯನ ದೇಹದ ಬೆಳವಣಿಗೆ ಹಾಗೂ ಕಾರ್ಯ ಚಟುವಟಿಕೆಗಳ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಇವುಗಳ ಕೊರತೆ ಕೂಡ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ.

ಇದನ್ನೂ ಓದಿರಿ: 

ಕೆ.ಜಿ ಜೇನು ತುಪ್ಪಕ್ಕೆ 8.8 ಲಕ್ಷ ಎಂದರೆ ನೀವು ನಂಬುತ್ತೀರಾ? ಹೌದು! ಇಲ್ಲಿದೆ “ಮೇ 20 - ವಿಶ್ವ ಜೇನು ದಿನ”ದ ನಿಮಿತ್ತ ಕುತೂಹಲಕಾರಿ ಲೇಖನ

ತರಕಾರಿ ಹಾಗೂ ಹಣ್ಣುಗಳಲ್ಲಿ ಪ್ರಮುಖವಾಗಿ ಈ ಎಲ್ಲಾ ಅಂಶಗಳು ದೊರೆಯುವುದರಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಾರ ದಿನ ನಿತ್ಯ ಆಹಾರ ಸೇವನೆಯಲ್ಲಿ ಸರಾಸರಿ 300 ಗ್ರಾಂ ಹಾಗೂ 100 ಗ್ರಾಂ ಪ್ರತಿ ಮನುಷ್ಯ ಪ್ರತಿ ದಿನಕ್ಕೆ ಬೇಕಾಗುತ್ತದೆ.

ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಒಂದು ವಾರಕ್ಕೆ ದೊರಕುವ ಪೌಷ್ಠಿಕತೆಯ ಪ್ರಮಾಣವಾಗಿದೆ. ಈ ನಿಟ್ಟಿನಲ್ಲಿ ಪೌಷ್ಠಿಕ ಕೈತೋಟ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. 

ಅಲ್ಲದೇ, ಮಾರುಕಟ್ಟೆಯಲ್ಲಿ ಅಧಿಕ ಬೆಲೆ ತೆತ್ತು ಖರೀದಿಸಿದ ತರಕಾರಿ ಮತ್ತು ಹಣ್ಣುಗಳು ತಮ್ಮ ಹೊಸತನವನ್ನು ಹಾಗೂ ಪೋಷಕ ಗುಣಗಳನ್ನು ಕಳೆದುಕೊಂಡಿರುತ್ತವೆ.  ಆದ ಕಾರಣ ತಮ್ಮದೇ ಆದ ಪೌಷ್ಠಿಕ-ಕೈತೋಟದಲ್ಲಿ ಬೆಳೆದ ಉತ್ಪನ್ನಗಳನ್ನು ಕೊಯ್ಲು ಮತ್ತು ಬಳಕೆಯ ಸಮಯದ ಅಂತರ ಕಡಿಮೆಯಾಗಿರುವ ಕಾರಣ ಉತ್ತಮ ದರ್ಜೆಯಾಗಿದ್ದು ಪೋಷಕಾಂಶಗಳು ಪೋಲಾಗುವುದಿಲ್ಲ.

ಇದರಿಂದ ಪೌಷ್ಠಿಕ ಆಹಾರದ ಸಮಸ್ಯೆ ನಿವಾರಣೆ ಮಾಡಬಹುದು. ಅಲ್ಲದೆ ಬಿಡುವಿನ ವೇಳೆಗಳಲ್ಲಿ ಇಂತಹ ಕೈತೋಟದ ಕೆಲಸಗಳಲ್ಲಿ ನಿರತರಾಗುವುದರಿಂದ ಕುಟುಂಬದ ಸದಸ್ಯರೆಲ್ಲರೂ ಒಳ್ಳೆಯ ಅಭಿರುಚಿಯಿಂದ ಭಾಗಿಗಳಾಗಬಹುದು, ಸಸಿಮಡಿ, ನೀರಾವರಿ, ಕೊಯ್ಲು, ಇತ್ಯಾದಿ ಬೇಸಾಯದ ಕ್ರಮಗಳನ್ನು ಶ್ರದ್ಧೆಯಿಂದ ಮಾಡಲು ಸಾಧ್ಯವಾಗುತ್ತದೆ.

ಪೌಷ್ಠಿಕ-ಕೈತೋಟದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಬೇರೆ ಬೇರೆ ಯಾಗಿ ಅಥವಾ ಒಟ್ಟುಗೂಡಿಸಿ ಬೆಳೆಯಬಹುದು. ಆದುದರಿಂದ ಇವುಗಳ ಬೇಸಾಯವನ್ನು ಲಾಭದಾಯಕವಾಗಿರಿಸಲು ಬಹಳ ಸಮಗ್ರ ರೀತಿಯಲ್ಲಿ ರೂಪಿಸುವುದು ಮುಖ್ಯ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಇದರ ವಿಸ್ತೀರ್ಣವು ಅಲ್ಲಿ ಸಿಗುವ ಸ್ಥಳ, ತರಕಾರಿ ಹಾಗೂ ಹಣ್ಣುಗಳ ದಿನದ ಬೇಡಿಕೆ, ಉಸ್ತುವಾರಿಯ ಸಮಯ ಇವುಗಳ ಮೇಲೆ ಅವಲಂಬಿಸಿದೆ. ಸರಾಸರಿ 5-6 ಸದಸ್ಯರಿರುವ ಕುಟುಂಬಕ್ಕೆ ತರಕಾರಿಗಳನ್ನು ಒದಗಿಸಲು 200-300 ಚದರ ಮೀಟರಗಳ ವಿಸ್ತೀಣದ ಸ್ಥಳ ಅವಶ್ಯಕ.

ಅಂದರೆ, ಪ್ರತೀಯೊಬ್ಬರಿಗೂ 50 ಚದರ ಮೀಟರ್ ಅಷ್ಟು ಸ್ಥಳದ ಅಗತ್ಯತೆ ಇರುತ್ತದೆ ಮತ್ತು ಕುಟುಂಬದ ಸದಸ್ಯರ ಸಂಖ್ಯೆಯ ಮೆಲೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈತೋಟಗಳನ್ನಾಗಿ ಯೋಜಿಸಿ ಬೆಳೆಸಬಹುದು.

ತೋಟದ ರಚನೆ ಮಾಡುವಾಗ ತರಕಾರಿ ಬೆಳೆಯ ಪೂರ್ಣ ಬೆಳವಣಿಗೆಗೆ ಅವಶ್ಯಕವಾದ ಸೂರ್ಯನ  ಶಾಖ ಸಿಗುವಂತಾಗಲು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ಜಾಗಗಳನ್ನು ತರಕಾರಿ ಬೆಳೆಗಳಿಗೆ ಮೀಸಲಿಡುವುದು ಉತ್ತಮ,  ಆದಷ್ಟು ಚೌಕಾಕಾರದ ಮಡಿಗಳನ್ನಾಗಿ ವಿಂಗಡಿಸುವುದು ಸೂಕ್ತ. 

15-20 ಅಡಿ ಅಂತರದಲ್ಲಿ ಕಲ್ಲು ಕಂಬಗಳನ್ನು ನೆಟ್ಟು 3-4 ಸಾಲುಗಳ ಮೇಲೆ ತಂತಿಯನ್ನೆಳೆದು ತೋಟದ ದಾರಿಗಳಿಗೆ ಮತ್ತು ಬದುಗಳಿಗೆ ಕಡಿಮೆ ಸ್ಥಳವನ್ನು ಉಪಯೋಗಿಸಿ ಬೆಳೆಯುವ ಬಹುವಾರ್ಷಿಕ ಗಿಡಗಳ ಮಧ್ಯದ ಜಾಗದಲ್ಲಿ ಕಡಿಮೆ ಅವಧಿ ಬೆಳೆಗಳನ್ನು ಬೆಳೆಯಬಹುದು.  ಮನೆಯ ಬಳಕೆಯಲ್ಲಿ ವ್ಯರ್ಥವಾಗುವ ನೀರನ್ನು ಕಾಲುವೆ ಮೂಲಕ ಹರಿಸಿ ಸದುಪಯೋಗ ಪಡಿಸಿಕೊಳ್ಳಬಹುದು.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಮಣ್ಣು:

ತರಕಾರಿ ಹಾಗು ಹಣ್ಣುಗಳನ್ನು ಬೆಳೆಯಲು ನೀರು ಬಸಿದು ಹೋಗುವ ಫಲವತ್ತಾದ ಮಣ್ಣು, ಗೋಡು ಮತ್ತು ಮರಳು ಮಿಶ್ರಿತ ಮಣ್ಣು ಅತೀ ಸೂಕ್ತ. ನಗರ ಪ್ರದೇಶಗಳಲ್ಲಿ ಜಾಗದ ಅಭಾವವಿರುವುದರಿಂದ ಈ ಬೆಳೆಗಳನ್ನು ಕುಂಡಗಳಲ್ಲಿ ಮನೆಯ ಛಾವಣಿ ಮೇಲೆ ಬೆಳೆಯಬಹುದಾಗಿದೆ.

ತೋಟದ ಸ್ಥಳದ ಪೂರ್ಣ ಲಾಭ ಪಡೆಯಲು ಈ ಕೆಳಗಿನ ಅಂಶಗಳನ್ನು ಅನುಸರಿಸಬೇಕು

  1. ಬಹುವಾರ್ಷಿಕ ಸಸ್ಯಗಳು ಕೈತೋಟದ ಒಂದು ಪಕ್ಕದಲ್ಲಿರಬೇಕು. ಇದರಿಂದ ಬೇರೆ ಬೆಳೆಗಳಿಗೆ ನೆರಳಾಗುವುದಿಲ್ಲ. ಇವುಗಳಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇರುವುದಿಲ್ಲ ಅಲ್ಲದೇ, ಪ್ರತೀ ವರ್ಷವೂ ತರಕಾರಿಗಳನ್ನು ಕೊಡುತ್ತಿರುತ್ತದೆ.
  2. ಮುಂಗಾರು ಮತ್ತು ಬೇಸಿಗೆಯಲ್ಲಿ ಬೇಲಿಯ ಮೂರು ಕಡೆಗಳಲ್ಲೂ ಕುಂಬಳ ಜಾತಿ ಬಳ್ಳಿಗಳನ್ನು ಹಾಗೂ ಇನ್ನೊಂದು ಕಡೆ ಬಹುವಾರ್ಷಿಕ ಹುರುಳಿ ಬಳ್ಳಿಯನ್ನು ಹಬ್ಬಿಸಬಹುದು.
  3. ಅನುಕ್ರಮ ಬೆಳೆ ಮಾದರಿಯನ್ನು ಅನುಸರಿಸುವುದು ಉತ್ತಮ.
  4. ಬದುಗಳನ್ನು ಗೆಡ್ಡೆ ತರಕಾರಿಗಳ ಬೇಸಾಯಕ್ಕಾಗಿ ಉಪಯೋಗಿಸಿ.
  5. ನೇರವಾಗಿ ಬೆಳೆಯುವ ಟೊಮ್ಯಾಟೋ ಬೆಳೆಯನ್ನು ರಸ್ತೆಯ ಒಂದು ಪಕ್ಕದಲ್ಲಿ ಹಾಗೂ ಸೊಪ್ಪಿನ ತರಕಾರಿಗಳನ್ನು ಇನ್ನೊಂದು ಪಾಶ್ರ್ವದಲ್ಲಿ ಬೆಳೆಯುವುದು. ಸೊಪ್ಪು ತರಕಾರಿಗಳನ್ನು ಮಳೆಗಾಲದಲ್ಲಿ ಬಿಟ್ಟು ಬೇರೆ ಎಲ್ಲಾ ಸಮಯದಲ್ಲೂ ಬೆಳೆಬಹುದಾಗಿದೆ.
  6. ಯಾವ ಬೆಳೆಗಳನ್ನು ಯಾವ ಕಾಲದಲ್ಲಿ ಹಾಕಬೇಕು ಎಂದು ನಿರ್ಧರಿಸಬೇಕು ಮತ್ತು ಬೆಳೆ ಸರದಿಯ ಮಹತ್ವಗಳನ್ನು ಅನುಷ್ಠಾನಕ್ಕೆ ತರಬೇಕು.

ಒಂದೆರಡು ಕಾಂಪೋಸ್ಟ್ ಗುಂಡಿಗಳನ್ನು ತೋಟದಲ್ಲಿ ನೆರಳಿರುವ ಕಡೆ ತೋಡಿಸಿ ತೋಟದ ಹಾಗೂ ಮನೆಯ ವ್ಯರ್ಥ ವಸ್ತುಗಳನ್ನೆಲ್ಲಾ ಸಂಗ್ರಹಿಸಿ, ಸಸಿಮಡಿಗೆ ಹಾಗೂ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ತಯಾರಾಗಲು ವ್ಯವಸ್ಥೆ ಮಾಡಬೇಕು.

ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…

ಹೀಗೆ ತಯಾರಿಸಿದ ಗೊಬ್ಬರವನ್ನು ನೂರು ಚದರ ಅಡಿಗೆ ನೂರು ಕಿಲೋಗ್ರಾಂ ನಂತೆ ಸೇರಿಸಬೇಕು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದರ ಜೊತೆಗೆ ಪ್ರತೀ ನೂರು ಚದರ ಅಡಿಗೆ 1.5 ಕಿಲೋಗ್ರಾಂನಷ್ಟು ಸಾರಜನಕ, ರಂಜಕ, ಪೋಟ್ಯಾಶ ಮಿಶ್ರಣವನ್ನು ಉಪಯೋಗಿಸುವುದರಿಂದ ಬೆಳೆಗಳು ಚನ್ನಾಗಿ ಆರೋಗ್ಯಕರವಾಗಿ ಹುಲುಸಾಗಿ ಬೆಳೆಯುತ್ತದೆ.

ಬೆಳೆಗಳಿಗೆ ಕಾಲಕಾಲಕ್ಕೆ ನೀರುಣಿಸುತ್ತಿರಬೇಕು ಹಾಗೂ ಕಳೆ ತೆಗೆಯುವುದು, ಗಿಡದ ಬುಡಕ್ಕೆ ಮಣ್ಣು ಹಾಕುವುದು, ಆಧಾರ ನೀಡುವುದು, ಒಣಗಿದ ಭಾಗಗಳನ್ನು ಕಾಲಕಾಲಕ್ಕೆ ತೆಗೆಯುವುದು, ಅಲ್ಲದೇ ರೋಗ ಅಥವಾ ಕೀಟ ಭಾದೆ ಕಂಡುಬಂದರೆ ಸಾವಯವ ಕೀಟನಾಶಕಗಳನ್ನು ಬಳಸುವುದು ಸೂಕ್ತವಾಗಿದೆ. 

ಕೈತೋಟದಲ್ಲಿ ಬೆಳೆಸಬಹುದಾದ ತರಕಾರಿಗಳು ಹಾಗೂ ಅವುಗಳನ್ನು ಬೆಳೆಯಬಹುದಾದ ಋತುಮಾನದ ವಿವರಗಳು ಇಂತಿವೆ.

ಕ್ರ. ಸಂ

ತರಕಾರಿಗಳು         

ಬೆಳೆಯುವ ಕಾಲ

1

ಎಲೆಕೋಸು         

ಜುಲೈ – ಅಕ್ಟೋಬರ್, ಅಕ್ಟೋಬರ್ - ಫೆಬ್ರವರಿ

2

ಹುರುಳಿಕಾಯಿ      

ಜನವರಿ – ಮಾರ್ಚ್, ಜೂನ್ – ಆಗಸ್ಟ್, ನವಂಬರ್ – ಡಿಸೆಂಬರ್

3

ಟೊಮ್ಯಾಟೊ      

 

ಜೂನ್ – ಜುಲೈ – ಆಗಸ್ಟ್

ನವೆಂಬರ್ - ಫೆಬ್ರವರಿ

4

ಮೂಲಂಗಿ          

 

ಫೆಬ್ರವರಿ – ಮಾರ್ಚ್, ಮೇ – ಆಗಸ್ಟ್,  ಸೆಪ್ಟೆಂಬರ್ – ಅಕ್ಟೋಬರ್

5

ದಂಟು   

ಮಾರ್ಚ್ – ಮೇ, ಮೇ – ಜುಲೈ

6

ಫಾಲಕ್  

ಫೆಬ್ರವರಿ–ಜೂನ್, ಅಕ್ಟೋಬರ್–ಜನವರಿ

7

ಕ್ಯಾರೆಟ್

ನವಂಬರ್–ಜನವರಿ, ಆಗಸ್ಟ್–ಅಕ್ಟೋಬರ್, ಅಕ್ಟೋಬರ್–ಜನವರಿ

8

ಮೆಂತ್ಯ

ನವೆಂಬರ್-ಫೆಬ್ರವರಿ, ಅಕ್ಟೋಬರ್-ಸೆಪ್ಟೆಂಬರ್

9

ಬಸಳೆ

ನವೆಂಬರ್-ಫೆಬ್ರವರಿ,  ಅಕ್ಟೋಬರ್ –ಸೆಪ್ಟೆಂಬರ್

10

ಅಲಸಂದೆ

ಮಾರ್ಚ್–ಜೂನ್, ಜೂನ್–ಆಗಸ್ಟ್

11

ಬಟಾಣಿ

ಜುಲೈ–ಅಕ್ಟೋಬರ್, ಅಕ್ಟೋಬರ್–ಜನವರಿ

12

ಗೋರಿಕಾಯಿ        

ಜನವರಿ–ಏಪ್ರಿಲ್, ಏಪ್ರಿಲ್–ಜುಲೈ

13

ಕುಂಬಳಕಾಯಿ     

ಏಪ್ರಿಲ್–ಜುಲೈ, ಮೇ–ಆಗಸ್ಟ್

14

ಸೌತೆಕಾಯಿ          

ಏಪ್ರಿಲ್–ಜುಲೈ, ಜನವರಿ–ಮಾರ್ಚ್

15

ಮೆಣಸಿನ ಕಾಯಿ

ಫೆಬ್ರವರಿ–ಜೂನ್,  ಸೆಪ್ಟೆಂಬರ್ –ಜನವರಿ

16

ದೊಣ್ಣೆ ಮೆಣಸಿನಕಾಯಿ      

ಜೂನ್-ಅಕ್ಟೋಬರ್, ಸೆಪ್ಟೆಂಬರ್-ಜನವರಿ

17

ಹಾಗಲಕಾಯಿ       

ಡಿಸೆಂಬರ್-ಏಪ್ರಿಲ್, ಮೇ-ಸೆಪ್ಟೆಂಬರ್

18

ಈರುಳ್ಳಿ 

ನವೆಂಬರ್-ಮಾರ್ಚ್, ಜುಲೈ-ಅಕ್ಟೋಬರ್

19

ಬೆಳ್ಳುಳ್ಳಿ

ಫೆಬ್ರವರಿ-ಮೇ, ಅಕ್ಟೋಬರ್-ಸೆಪ್ಟೆಂಬರ್

20

ಆಲೂಗಡ್ಡೆ

ನವೆಂಬರ್-ಫೆಬ್ರವರಿ, ಮೇ-ಸೆಪ್ಟೆಂಬರ್

21

ಸಿಹಿ ಗೆಣಸು         

ಮೇ-ಸೆಪ್ಟೆಂಬರ್

22

ಹೂಕೋಸು

ಫೆಬ್ರವರಿ-ಏಪ್ರಿಲ್, ಜೂನ್-ಸೆಪ್ಟೆಂಬರ್

23

ಗೆಡ್ಡೆಕೋಸು

ನವೆಂಬರ್-ಜನವರಿ, ಜುಲೈ- ಸೆಪ್ಟೆಂಬರ್

24

ಬೀಟ್‍ರೂಟ್

ಸೆಪ್ಟೆಂಬರ್-ಡಿಸೆಂಬರ್

25

ಕಲ್ಲಂಗಡಿ

ನವೆಂಬರ್-ಡಿಸೆಂಬರ್

26

ಸಾಸಿವೆ

ಅಕ್ಟೋಬರ್-ಜನವರಿ

Nutritional Garden for Health Care

ಕೈತೋಟ ಬೆಳೆಯುವ ಬೆಳೆಗಳನ್ನು ಮೊದಲೇ ತೀರ್ಮಾನಿಸಿ ಅದಕ್ಕೆ ಬೇಕಾದ ಅವಶ್ಯಕ ವಸ್ತುಗಳಾದ ಬಿತ್ತನೆ ಬೀಜ, ಗೊಬ್ಬರ, ಆಧಾರ ಕೊಡಲು ಕೋಲು ಹಾಗೂ ಬೇರೆ ಅಗತ್ಯತೆಗಳನ್ನು ಹೊಂದಿಸಿಕೊಳ್ಳಬೇಕು. ಅಲ್ಲದೇ ಸದಾ ತರಕಾರಿಗಳನ್ನು ಒದಗಿಸುವ ಬೆಳೆಗಳನ್ನು ಆಯ್ಕೆ ಮಾಡಬೇಕು.

ಇವುಗಳಲ್ಲದೇ ಬಹುವಾರ್ಷಿಕ ತರಕಾರಿ ಬೆಳೆಗಳಾದ ನುಗ್ಗೆ ಹಾಗೂ ಕರಿಬೇವುಗಳನ್ನು ತೋಟದ ಅಂಚಿನಲ್ಲಿ ಬೆಳೆಬಹುದಾಗಿದೆ.

ಹಣ್ಣಿನ ಬೆಳೆಗಳು:

ತೋಟದ ಅಂಚಿನಲ್ಲಿ ಬೆಳೆಯಬಹುದಾದ ಬೆಳೆಗಳು- ಬಾಳೆ, ನಿಂಬೆ, ಪಪಾಯ, ಹಲಸು, ಪೇರಲ, ನೆಲ್ಲಿಕಾಯಿ, ಚಿಕ್ಕು, ಪ್ಯಾಷನ್ ಪ್ರೂಟ್ ಇತ್ಯಾದಿ ಹಣ್ಣಿನ ಬೆಳೆಗಳನ್ನು ನಾಟಿಮಾಡುವುದರಿಂದ ಎಲ್ಲಾ ಸಮಯದಲ್ಲೂ ತಾಜಾ ಹಣ್ಣುಗಳನ್ನು ಪಡೆಯಬಹುದಾಗಿದೆ.    

ತರಕಾರಿ ಬೆಳೆಗಳಲ್ಲಿ ಬೀಜ ಬಿತ್ತಿ ಮತ್ತು ಸಸಿಗಳನ್ನು ನಾಟಿ ಮಾಡಿ ಬೆಳೆಯಬಹುದಾಗಿದೆ. ಬೀಜಗಳನ್ನು ಬಿತ್ತಿ ಬೆಳೆಯುವಂತಹ ಬೆಳೆಗಳು: ಕ್ಯಾರೆಟ್, ಮೂಲಂಗಿ, ಬೀಟ್ ರೂಟ್, ಈರುಳ್ಳಿ, ಸೌತೆಕಾಯಿ, ಕುಂಬಳಕಾಯಿ, ಹೀರೆಕಾಯಿ, ಬೆಂಡೆ, ಅಲಸಂಡೆ, ಜವಳಿಕಾಯಿ ಎಲ್ಲಾ ವಿಧದ ಸೊಪ್ಪು ತರಕಾರಿಗಳು ಇತ್ಯಾದಿ.

ಸಸಿಗಳನ್ನು ತಯಾರಿಸಿ ನಾಟಿ ಮಾಡುವ ಬೆಳೆಗಳು: ಟೊಮ್ಯಾಟೋ, ಮೆಣಸಿನಕಾಯಿ, ಬದನೆ, ಎಲೆಕೋಸು, ಹೂಕೋಸು, ಗಡ್ಡೆಕೋಸು ಇತ್ಯಾದಿ.

ಕೈತೋಟದಿಂದ ದೊರಕುವ ಪೋಷಕಾಂಶ ಮತ್ತು ಇತರೆ ಉಪಯೋಗಗಳು

  1. ಮನೆಯವರೆಲ್ಲರಿಗೂ ತರಕಾರಿ ಬೆಳೆಯುವ ಕೆಲಸದಲ್ಲಿ ತೊಡಗಲು ಅವಕಾಶ ದೊರೆಯುತ್ತದೆ ಮತ್ತು ವಿರಾಮ ವೇಳೆಯನ್ನು ಸುಲಭವಾಗಿ ಕಳೆಯಬಹುದು.
  2. ಕೈತೋಟವು ಪ್ರತಿನಿತ್ಯ ತಾಜಾ ಹಣ್ಣು ತರಕಾರಿಗಳನ್ನು ಒದಗಿಸುತ್ತದೆ ಹಾಗೂ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ದುಬಾರಿಯಾಗಿರುವುದರಿಂದ ಹಣ ಉಳಿತಾಯವಾಗುವುದಲ್ಲದೆ ಇದು ಮನೆಯ ಎಲ್ಲಾ ಕುಟುಂಬ ವರ್ಗದವರಿಗೆ ಒಂದು ಆರೋಗ್ಯಕರವಾದ ಹವ್ಯಾಸವಾಗಿ ಪರಿವರ್ತಿಸುತ್ತದೆ.
  3. ಆಗತಾನೆ ಕೈತೋಟದಿಂದ ಕೊಯಿಲು ಮಾಡಿ ಉಪಯೋಗಿಸುವ ತಾಜಾ ತರಕಾರಿಗಳಿಂದ ಸಂಪೂರ್ಣ ಪೋಷಕಾಂಶಗಳನ್ನು ಪಡೆಯಬಹುದು.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಇತರ ಉಪಯೋಗಗಳು

  1. ಸುಲಭವಾಗಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಬಹುದು.
  2. ಅನುಪಯುಕ್ತ ಅಡಿಗೆ ಮನೆಯ ಪದಾರ್ಥಗಳನ್ನು ಸಸ್ಯ ಪೋಷಕಾಂಶಗಳಾಗಿ ಬಳಸಬಹುದು.
  3. ಮನೆಯಲ್ಲಿ ಬಳಸಿ ಹರಿದುಹೋಗುವ ಅನುಪಯುಕ್ತ ನೀರನ್ನು ಕೈತೋಟದಲ್ಲಿ ಬಳಸಬಹುದು.
  4. ತಾಜಾ ಹಣ್ಣು ಮತ್ತು ತರಕಾರಿಗಳೂ ದೊರೆಯುತ್ತವೆ.
  5. ನಮಗೆ ಬೇಕಾದ ಸಮಯದಲ್ಲಿ ಕೊಯಿಲು ಮಾಡಿ ಬಳಸಬಹುದು.
  6. ಪೌಷ್ಟಿಕಾಂಶದ ಕೊರತೆ ನಿವಾರಣೆಯಾಗಿ ಆರೋಗ್ಯ ವೃದ್ದಿಯಾಗುತ್ತದೆ.
  7. ಮನೆಯ ಸುತ್ತಲಿನ ವಾತಾವರಣ ಹಸನಾಗಿಡಲು ಸಹಾಯಕವಾಗಿದೆ.
  8. ಆರ್ಥಿಕ ಮಟ್ಟ ಸುಧಾರಿಸಲು ಸಹಾಯಕವಾಗಿದೆ.
  9. ಪೌಷ್ಠಿಕ ಕೈತೋಟ ನಮ್ಮೆಲ್ಲರ ಮನೆಯಂಗಳದ ಅವಿಭಾಜ್ಯ ಅಂಗವಾಗಿಸಲು ದೃಢ ಸಂಕಲ್ಪ ಮಾಡಬೇಕು.

ಲೇಖಕರು :

ಡಾ.ಸೌಮ್ಯ ಕುಮಾರಿ(ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ) ,  

ಡಾ.ಸಚಿನ್ ಯು.ಎಸ್.( ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ)