Agripedia

Lady Finger: ಲಾಭದಾಯಕ ಬೆಳೆಯಾಗಿ ಬೆಂಡೆಕಾಯಿ ಕೃಷಿ!

31 May, 2022 4:30 PM IST By: Kalmesh T
Lady Finger farming as a profitable crop! - Santosh rao Permuda

ತರಕಾರಿಗಳು ಮನುಷ್ಯನ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಿದರೆ ಇನ್ನು ಕೆಲವು ಆರೋಗ್ಯಕ್ಕೆ ಔಷಧಿಯಾಗಿಯೂ ಕೆಲಸ ನಿರ್ವಹಿಸುತ್ತವೆ. ತರಕಾರಿಗಳಲ್ಲಿ ರೋಗ ನಿರೋಧಕ ಜೀವಸತ್ವಗಳು ಮತ್ತು ಖನಿಜಾಂಶಗಳು ಹೇರಳವಾಗಿದ್ದು ಇವು ಆರೋಗ್ಯವನ್ನು ಕಾಪಾಡುವಲ್ಲಿಯೂ ಸಹಕಾರಿಯಾಗಿವೆ.

ಅವುಗಳ ಪೈಕಿ ‘ಬೆಂಡೆಕಾಯಿ’ಯಲ್ಲಿ (ಲೇಡಿಸ್ ಫಿಂಗರ್) ಇಂತಹ ಅನೇಕ ಆರೋಗ್ಯವರ್ಧಕ ಅಂಶಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಬೆಂಡೆಕಾಯಿಗೆ ‘ಅಬೆಲ್‍ಮಾಸ್ಕಸ್ ಎಸ್ಕ್ಯುಲೆಂಟನ್ ಮಾಂಕ್’ ಎಂಬ ವೈಜ್ಞಾನಿಕ ಹೆಸರಿದ್ದು, ಇದು ‘ಮ್ಯಾಲೋ’ ಪ್ರಬೇಧಕ್ಕೆ ಸೇರಿದ ಹೂವನ್ನು ಬಿಡುವ ಸಸ್ಯದ ಜಾತಿಗೆ ಸೇರಿದೆ.

ಇದನ್ನು ತಿನ್ನಬಹುದಾದ ಹಸಿರು ಬೀಜಕೋಶಗಳಿರುವ ತರಕಾರಿಯೆಂದೂ ಕರೆಯಲಾಗುತ್ತದೆ. ಇದರ ಮೂಲ ಯಾವುದೆಂಬ ಸ್ಪಷ್ಟವಾದ ಉಲ್ಲೇಖವಿಲ್ಲದಿದ್ದರೂ ಇದು ಪ್ರಮುಖವಾಗಿ ಕಂಡುಬಂದಿದ್ದು ‘ದಕ್ಷಿಣ ಏಷ್ಯಾ’, ‘ಇಥಿಯೋಪಿಯಾ’ ಮತ್ತು ‘ಪಶ್ಚಿಮ ಆಫ್ರಿಕಾ’ದಲ್ಲಿ ಎನ್ನಲಾಗಿದೆ.

ಉತ್ತಮ ಆರೋಗ್ಯಕ್ಕೆ ವರದಾನ ಡ್ರ್ಯಾಗನ್ ಹಣ್ಣು! ಇಲ್ಲಿದೆ ಡ್ರ್ಯಾಗನ್ ಹಣ್ಣಿನ ಮಾಹಿತಿ…

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಬೆಂಡೆಕಾಯಿಯನ್ನು ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ‘ಭಿಂಡಿ’, ಗುಜರಾತಿಯಲ್ಲಿ ‘ಬಿಂಡ’, ಬಂಗಾಲಿ ಭಾಷೆಯಲ್ಲಿ ‘ಧೆನ್‍ರೋಷ್’, ತೆಲುಗು ಮತ್ತು ತಮಿಳಿನಲ್ಲಿ ‘ಬೆಂಡಿಕಾಯಿ’, ಒರಿಯಾದಲ್ಲಿ ‘ವೆಂಡಿ’, ಮಲಯಾಳಂನಲ್ಲಿ ‘ವೆಂಡ’, ಅಸ್ಸಾಂ ಮತ್ತು ಮರಾಠಿಯಲ್ಲಿ ‘ಭೇಂಡಿ’ ಎಂದು ಕರೆಯಲಾಗುತ್ತದೆ.

ಬೆಂಡೆಕಾಯಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ಸತು, ಕ್ಯಾಲ್ಸಿಯಂ ಹೀಗೆ ಮೂವತ್ತು ಕ್ಯಾಲೊರಿಗಳನ್ನು ಹೊಂದಿದ 75 ಮಿ.ಗ್ರಾಂ ಜೀವಸತ್ವವಿದೆ. ಒಂದು ಬೆಂಡೆ ಕಾಯಿಯನ್ನು ತಿಂದರೆ ದೇಹಕ್ಕೆ ಒಂದು ಕಪ್ ಟೊಮೆಟೋದಲ್ಲಿರುವಷ್ಟು ಜೀವಸತ್ವ ದೊರೆಯುತ್ತದೆ.

ಬೆಂಡೆಯಲ್ಲಿ 7.6% ಕಾರ್ಬೋಹೈಡ್ರೇಟ್, 3.2% ನಾರು, 2% ಪ್ರೊಟೀನ್, 75ಮಿ.ಗ್ರಾಂ ಕ್ಯಾಲ್ಸಿಯಂ ಮತ್ತು ಮೆಗ್ನೇಷಿಯಂ ಪೋಲೇಟ್‍ಗಳಿದ್ದು, 57 ಮಿ.ಗ್ರಾಂ ‘ಎ ಜೀವಸತ್ವ’ವೂ ಇದೆ.

ಮೂರರಿಂದ ನಾಲ್ಕು ಬೆಂಡೆಕಾಯಿಯನ್ನು ಪ್ರತೀ ದಿನ ಕತ್ತರಿಸಿ ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಮರುದಿನ ಖಾಲಿ ಹೊಟ್ಟೆಯಲ್ಲಿ ಕುಡಿದಾಗ ಈ ಕೆಳಕಂಡ ವಿಶೇಷ ಲಾಭಗಳಿವೆ.

ಈ ರೀತಿ ನಿಯಮಿತವಾಗಿ ಬೆಂಡೆಯನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಹೆಚ್ಚುತ್ತಾ ಹೋಗಿ ಹಲವು ರೀತಿಯ ರೋಗಗಳಿಂದ ರಕ್ಷಿಸಿಕೊಳ್ಳಲು ಸಾಧ್ಯ. ಇದರಲ್ಲಿರುವ ನಾರಿನಂಶವು ಗ್ಯಾಸ್ಟಿಕ್, ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.

Cucumber Farming ನಿಂದ ರೈತರು ಇಡೀ ವರ್ಷ ಗಳಿಸಬಹುದು!!

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ

ಬೆಂಡೆಕಾಯಿಯ ನಿರಂತರ ಬಳಕೆಯಿಂದಾಗಿ ಇದರಲ್ಲಿರುವ ‘ವಿಟಮಿನ್ ಸಿ’ ಅಂಶವು ಕರುಳಲ್ಲಿ ಧನಾತ್ಮಕ ಬ್ಯಾಕ್ಟೀರಿಯಾವನ್ನು ಸೃಷ್ಟಿಸಿ ಕರುಳನ್ನು ಶುದ್ಧವಾಗಿಡುತ್ತದೆ. ಬೆಂಡೆಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದಲ್ಲಿ ದೇಹದಲ್ಲಿ ರಕ್ತವು ವೃದ್ಧಿಯಾಗುತ್ತದೆ.

ಇದರಲ್ಲಿರುವ ‘ವಿಟಮಿನ್-ಎ’, ‘ಲ್ಯುಟೈನ್’, ‘ಕ್ಸಂಟೈನ್’, ‘ಬೆಟಾಕ್ಯಾರೋಟೀಸ್’ ಅಂಶಗಳಿದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಬೆಂಡೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆಯಿದ್ದು ಇದು ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ದೇಹದಲ್ಲಿರಬಹುದಾದ ವಿಷಕಾರಿ ಅಂಶಗಳನ್ನು ಹಾಗೂ ಕೊಲೆಸ್ಟ್ರಾಲ್‍ನ್ನು ಬೆಂಡೆಕಾಯಿ ಹೊರಹಾಕುತ್ತದೆ.

ಬೆಂಡೆಯನ್ನು ನೇರವಾಗಿ ತಿನ್ನಲು ಇಷ್ಟವಿಲ್ಲದಿದ್ದಲ್ಲಿ ನೆನೆಸಿದ ಬೆಂಡೆಕಾಯಿಯ ನೀರನ್ನು ಕುಡಿಯುವುದು ಉತ್ತಮ. ಮಾರಕವಾದ ‘ಐಬಿಸಿಸ್’ ಮತ್ತು ‘ಅಲ್ಸರ್’ ಕಾಯಿಲೆಯನ್ನು ಗುಣಪಡಿಸುವಲ್ಲಿ ಬೆಂಡೆಕಾಯಿಯು ಪರಿಣಾಮಕಾರಿಯಾದ ಔಷಧಿಯಾಗಿದೆ. ಇದರಲ್ಲಿರುವ ‘ಆಂಟಿ ಆಕ್ಸಿಡೆಂಟ್’ ಹಾಗೂ ‘ವಿಟಮಿನ್-ಸಿ’ ಇರುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಚೆನ್ನಾಗಿ ಬೆಳೆದ ಬೆಂಡೆಕಾಯಿಯು ಸುಮಾರು 15 ಇಂಚು ಉದ್ದವಿದ್ದು, 15 ಕಾಯಿಗಳು ಒಂದು ಕಿಲೋ ತೂಗುತ್ತವೆ. ಇದು ವಾರ್ಷಿಕ ಸಸ್ಯವಾಗಿದ್ದು 9 ರಿಂದ 10 ಮೀ ಎತ್ತರದವರೆಗೂ ಬೆಳೆಯುವುದರೊಂದಿಗೆ ಇದರಲ್ಲಿ ಅಲ್ಲಲ್ಲಿ ಕೊಂಬೆಗಳಿದ್ದು, ಎಲೆಯನ್ನು ಪಕ್ಕನೆ ನೋಡಿದಾಗ ಮನುಷ್ಯನ ಅಂಗೈಯಂತೆ ಗೋಚರಿಸುತ್ತದೆ.

ಎಲೆ, ಕಾಂಡ ಮತ್ತು ಕಾಯಿಗಳಲ್ಲಿ ಬಿಳಿ ಬಣ್ಣದ ಬೂದಿಯಂತಿದ್ದು, ಕಾಯಿ ಬಿಡುವ ಪೂರ್ವದಲ್ಲಿ ಹಳದಿ ಬಣ್ಣದ ಹೂವನ್ನು ಬಿಟ್ಟು ನಂತರದಲ್ಲಿ ಕಾಯಿಯಾಗುತ್ತದೆ. ಇದರ ಕಾಯಿಗಳನ್ನಷ್ಟೇ ತರಕಾರಿಯಾಗಿ ಅಡುಗೆಯಲ್ಲಿ ಬಳಸುತ್ತಿದ್ದು, ಒಳಗಡೆ ಸಣ್ಣ ಸಣ್ಣ ಬೀಜಗಳಿರುತ್ತವೆ.

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಇದರ ಬೀಜಗಳನ್ನು ಕೆಲವೊಂದು ದೇಶಗಳಲ್ಲಿ ಕಾಫಿಯಲ್ಲಿ ಬಳಸುತ್ತಾರೆ. ಒಣಗಿಸಿದ ಬೆಂಡೆಯ ಬೀಜದಲ್ಲಿ 16-17% ಎಣ್ಣೆ, 18-19% ಪ್ರೊಟೀನ್, 21% ನಾರಿನಂಶವಿದೆ. ಇದರಲ್ಲಿನ ಎಣ್ಣೆಯ ಅಂಶವನ್ನು 1920ರಲ್ಲಿ ಜಮೈಸನ್ ಮತ್ತು ಬಾಗ್‍ಮಾನ್ ಎಂಬವರು ಕಂಡುಹಿಡಿದರೆಂಬ ಉಲ್ಲೇಖವಿದೆ.

ಇದರ ಎಣ್ಣೆಯಲ್ಲಿ 0.2% ಮಿರಿಸ್ಟಿಕ್ ಆಮ್ಲ, 32% ವಾಮಿಟಿಕ್ ಆಮ್ಲ, 4-5% ಸ್ಟಿಯರಿಕ್ ಆಮ್ಲ, 0.4% ಪಾಮಿಟೊಲಿಕ್ ಆಮ್ಲ, 23-29% ಒಲಿಕ್ ಆಮ್ಲ, 34-39% ಲಿನೋಲಿಕ್ ಆಮ್ಲ, 2% ಸೈಕ್ಲೋಪೊಪೇನ್ ಆಮ್ಲದ ಅಂಶಗಳು ಹೇರಳವಾಗಿದೆ.

ಬೆಂಡೆಯಿಂದ ಎಣ್ಣೆಯನ್ನು ತೆಗೆಯುವಿಕೆ ಹಾಗೂ ಅವುಗಳ ಬಳಕೆಯು ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಬೃಹತ್ ಪ್ರಮಾಣದ ಉತ್ಪಾದನೆಯ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ಪರಿಸರ ಸ್ನೇಹಿ ಜೈವಿಕ ಇಂಧನವಾಗಿಯೂ ವಾಹನಗಳಲ್ಲಿ ಬಳಸಬಹುದಾಗಿದ್ದು, ಈ ಎಣ್ಣೆಯನ್ನು ಸಂಸ್ಕರಿಸಿ ಅಡುಗೆಯಲ್ಲೂ ಬಳಸಬಹುದಾಗಿದೆ.

ಬೆಂಡೆಯನ್ನು ಎಲ್ಲಾ ಮಣ್ಣಿನಲ್ಲಿ ಹಾಗೂ ಹವಾಮಾನದಲ್ಲೂ ಬೆಳೆಯಬಹುದಾಗಿದ್ದು, ನೀರು ಸಮರ್ಪಕವಾಗಿ ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಬಲ್ಲುದು. ಇದರಲ್ಲಿ ಸುಮಾರು 4 ವಿಧದ ತಳಿಗಳಿದ್ದು, ಅವುಗಳಲ್ಲಿ ‘ಪೂಸಾಸವಾನಿ’, ‘ಅರ್ಕಾಅಭಯ್’, ‘ಅರ್ಕಾಅನಾಮಿಕಾ’, ‘ವೈಟ್‍ವೆಲ್ವೆಟ್’ (ಹಾಲುಬೆಂಡೆ) ಪ್ರಮುಖವಾದವುಗಳು.

ಪೂಸಾಸವಾನಿ ತಳಿಯು ಎಲ್ಲ ಮಣ್ಣು ಹಾಗೂ ಹವಾಮಾನದಲ್ಲೂ ಬೆಳೆಯುವ ಗುಣವನ್ನು ಹೊಂದಿದ್ದು, ಹಳದಿ ಕಾಮಾಲೆ ರೋಗವನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಅರ್ಕಾಅಭಯ್ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಕೆಂದ್ರ ಬೆಂಗಳೂರು ಅಭಿವೃದ್ಧಿಪಡಿಸಿದ್ದು ಇದು ಎತ್ತರವಾಗಿ ಬೆಳೆದು ಕವಲು ರೆಂಬೆಗಳನ್ನು ಹೊಂದಿರುತ್ತವೆ.

ಕಾಯಿಗಳು ಕಡು ಹಸಿರು ಬಣ್ಣವನ್ನು ಹೊಂದಿದ್ದು ಉದ್ದ ಹಾಗೂ ಮೃದುವಾಗಿರುತ್ತವೆ. ನಾಟಿಯ 120 ರಿಂದ 130 ದಿನಗಳ ನಂತರ ಇವುಗಳಿಂದ ಇಳುವರಿಯನ್ನು ನಿರೀಕ್ಷಿಸಬಹುದಾಗಿದ್ದು, 2.5 ಎಕ್ರೆ ಜಮೀನಿನಲ್ಲಿ ಸುಮಾರು 20 ಟನ್ ಇಳುವರಿಯನ್ನು ಪಡೆಯಬಹುದಾಗಿದೆ.

ಅರ್ಕಾಅನಾಮಿಕಾ ತಳಿಯೂ ಅರ್ಕಾಅಭಯ್ ತಳಿಯ ಗುಣವನ್ನೇ ಹೊಂದಿದ್ದು, ವೈಟ್‍ವೆಲ್ವೆಟ್ ತಳಿಯನ್ನು ಸ್ಥಳೀಯ ಭಾಷೆಯಲ್ಲಿ ‘ಹಾಲು ಬೆಂಡೆ’ಯೆಂದು ಕರೆಯುವುದರೊಂದಿಗೆ ಇದನ್ನು ಸ್ಥಳೀಯ ರೈತರು ಯಥೇಚ್ಛವಾಗಿ ಬೆಳೆಯುತ್ತಾರೆ.

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

ನಾಟಿ ಮತ್ತು ಆರೈಕೆ:

ಬೆಂಡೆಯ ಬೀಜದಿಂದಲೇ ಸಸ್ಯೋತ್ಪಾದನೆಯನ್ನು ಮಾಡಬೇಕಿದ್ದು, 2.5 ಎಕ್ರೆ ಜಮೀನಿನ ನಾಟಿಗೆ ಸುಮಾರು 7.5 ಕೆ.ಜಿ ಬೀಜದ ಅವಶ್ಯಕತೆಯಿದೆ. ಇದರ ಬಿತ್ತನೆಗೆ ಒಣ ಪ್ರದೇಶಗಳಲ್ಲಿ ಜೂನ್-ಜುಲೈ ಅಥವಾ ಜನವರಿ-ಫೆಬ್ರವರಿ, ಗುಡ್ಡಗಾಡು ಪ್ರದೇಶದಲ್ಲಿ ಜನವರಿ-ಫೆಬ್ರವರಿ, ಕರಾವಳಿ ಪ್ರದೇಶದಲ್ಲಿ ಜೂನ್-ಜುಲೈ ಅತ್ಯಂತ ಪ್ರಶಸ್ತವಾದ ಅವಧಿಯಾಗಿದೆ.

ಬಿತ್ತನೆಗೆ ಭೂಮಿಯನ್ನು 60ಸೆಂ.ಮೀ ತಗ್ಗಾದ ಪಾತಿ ಅಥವಾ ದಿನ್ನೆಗಳನ್ನಾಗಿ ಮಾಡಿ ಸಂಪೂರ್ಣ ಸಾವಯವ ಗೊಬ್ಬರ (ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರ, ಕಾಂಪೋಸ್ಟ್, ತರಗೆಲೆ, ಸುಡುಮಣ್ಣು ಇತ್ಯಾದಿ.) 50% ಸಾರಜನಕ, ರಂಜಕ ಹಾಗೂ ಪೊಟ್ಯಾಷ್‍ನ್ನು ಮಣ್ಣಿಗೆ ಸೇರಿಸಬೇಕು. ಬಿತ್ತನೆಗೆ 15 ತಾಸು ಮುಂಚಿತವಾಗಿ ಬೀಜವನ್ನು ನೀರಿನಲ್ಲಿ ನೆನೆಸಿಡಬೇಕು.

ಬೀಜವನ್ನು ಸುಮಾರು 30ಸೆಂ.ಮೀ ಅಂತರದಲ್ಲಿ ಬಿತ್ತಿ ಗಿಡವಾದ ನಾಲ್ಕು ವಾರದ ನಂತರ ಮತ್ತೆ 50% ಸಾರಜನಕವನ್ನು ಮೇಲು ಗೊಬ್ಬರವಾಗಿ ಹಾಕಬೇಕು. ಪ್ರತೀ 2.5 ಎಕ್ರೆ ಜಮೀನಿನ ಬೆಳೆಗೆ ಸುಮಾರು 25 ಟನ್‍ನಷ್ಟು ಸಾವಯವ ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರ, ಕಾಂಪೋಸ್ಟ್‍ಗಳನ್ನು ನೀಡಬೇಕು. ಜೊತೆಗೆ 125 ಕಿ.ಗ್ರಾಂ ಸಾರಜನಕ, 75 ಕಿ.ಗ್ರಾಂ ರಂಜಕ, 63 ಕಿ.ಗ್ರಾಂ ಪೊಟ್ಯಾಷ್ ನೀಡಬೇಕು. ಭೂಮಿಯ ಲಕ್ಷಣಕ್ಕನುಗುಣವಾಗಿ 5 ರಿಂದ 7 ದಿನಕ್ಕೊಮ್ಮೆ ನೀರನ್ನು ಹಾಯಿಸಬೇಕು.

ರೋಗ ಮತ್ತು ರೋಗ ಹತೋಟಿ:

ಬೆಂಡೆಗೆ ಸಾಮಾನ್ಯವಾಗಿ ಹಳದಿ ನಂಜು ರೋಗ, ಬೂದಿ ರೊಗ, ಎಲೆಚುಕ್ಕಿ ರೋಗ ಮತ್ತು ಬೇರು ಗಂಟು ಜಂತು ರೋಗಗಳು ಬಾಧಿಸುತ್ತವೆ. ‘ಬೂದಿ ರೋಗ’ ಮತ್ತು ‘ಎಲೆಚುಕ್ಕಿ ರೋಗ’ ಕಂಡುಬಂದಲ್ಲಿ 1ಲೀ ನೀರಿಗೆ 1ಗ್ರಾಂ ‘ಕಾರ್ಬೆಂಡಜಿಂ’ನ್ನು ಸೇರಿಸಿ ಸಿಂಪಡಿಸಬೇಕು.

‘ಹಳದಿ ನಂಜು ರೋಗ’ ಕಂಡುಬಂದಲ್ಲಿ ರೋಗ ಪೀಡಿತ ಎಲೆಗಳನ್ನು ಸಂಪೂರ್ಣವಾಗಿ ಕಿತ್ತು ನಾಶಪಡಿಸಬೇಕು. ಹಾಗೂ ಪ್ರತೀ ಲೀಟರ್ ನೀರಿಗೆ 0.5 ಮಿ.ಲೀ ‘ಇಮಿಡೋಕ್ಲೊಪ್ರಿಡ್’ನ್ನು ಬೆರೆಸಿ ಸಿಂಪಡಿಸಬೇಕು. ರೋಗ ಸಂಪೂರ್ಣ ಹತೋಟಿಗೆ ಬರದಿದ್ದಲ್ಲಿ ಮತ್ತೆ ಹದಿನೈದು ದಿನಗಳಲ್ಲಿ ಇದೇ ದ್ರಾವಣವನ್ನು ಸಿಂಪಡಿಸಬೇಕು. 

ಈ ಬೆಳೆಗೆ ಕೀಟಗಳು, ಜಿಗಿಹುಳು, ಕೆಂಪು ಹತ್ತಿ ತಿಗಣೆ, ಹೇನು, ಕಾಯಿ ಕೊರೆಯುವ ಹುಳು ಮತ್ತು ಬಿಳಿ ನೊಣದ ಬಾಧೆ ಜಾಸ್ತಿ ಇರುತ್ತದೆ. ಬೀಜ ಬಿತ್ತನೆಯಾದ ಎರಡು ವಾರಗಳ ನಂತರ ಪ್ರತೀ ಲೀಟರ್ ನೀರಿಗೆ 2ಮಿ.ಲೀ ‘ಆಕ್ಸಿಡೆಮೆಟಾನ್ ಮೀಥೈಲ್’ ಮತ್ತು 3 ಗ್ರಾಂ ನೀರಿನಲ್ಲಿ ಕರಗುವ ಗಂಧಕದೊಂದಿಗೆ ಸೇರಿಸಿ ಸಿಂಪಡಿಸಬೇಕು. ಪ್ರತೀ 2.5 ಎಕ್ರೆ ಬೆಳೆಗೆ ಸುಮಾರು 450-530 ಲೀ ದ್ರಾವಣದ ಅವಶ್ಯಕತೆಯಿದೆ.

ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

ಸಸಿಗೆ ಕಾಯಿ ಕೊರೆತದ ಬಾಧೆ ಕಂಡುಬಂದಲ್ಲಿ ಪ್ರತೀ ಲೀಟರ್ ನೀರಿಗೆ 2ಮಿ.ಲೀ ಎಂಡೋಸಲ್ಫಾನೆ ಅಥವಾ 4ಗ್ರಾಂ ‘ಕಾರ್ಬಾರಿಲ್’ನ್ನು ಬೆರೆಸಿ ಸಿಂಪಡಿಸಬೇಕು. ಬೀಜ ಬಿತ್ತನೆಯಾದ ಆರು ವಾರಗಳಲ್ಲಿ ಬೆಂಡೆಯು ಹೂ ಬಿಟ್ಟು ಕಾಯಿಯನ್ನು ಬಿಡಲಾರಂಭಿಸುವುದರೊಂದಿಗೆ ಪ್ರಥಮ ಕಟಾವನ್ನು ಪಡೆಯಬಹುದು. ನಂತರದಲ್ಲಿ ನಿರಂತರ ಆರರಿಂದ ಎಂಟು ವಾರಗಳವರೆಗೂ ಇಳುವರಿಯನ್ನು ಪಡೆಯಬಹುದು.

‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತಿನಂತೆ ಕೃಷಿಕನು ತನ್ನ ಕೃಷಿ ಭೂಮಿಯಲ್ಲಿ ಪಾರಂಪರಿಕ ಬೆಳೆಗಳನ್ನೇ ಬೆಳೆದು ಕೈಸುಟ್ಟುಕೊಳ್ಳುವುದಕ್ಕಿಂತ ವೈವಿಧ್ಯಮಯವಾದ ಕಡಿಮೆ ಖರ್ಚಿನೊಂದಿಗೆ ಲಾಭದಾಯಕವಾದ ಬೆಂಡೆಕಾಯಿ ಕೃಷಿಯನ್ನೂ ಬೆಳೆದು ಸೈ ಎನಿಸಿಕೊಳ್ಳಬಹುದಾಗಿದೆ.

ಲೇಖನ: ಸಂತೋಷ್ ರಾವ್ ಪೆರ್ಮುಡ

ಪಟ್ರಮೆ ಗ್ರಾಮ ಮತ್ತು ಅಂಚೆ

ಬೆಳ್ತಂಗಡಿ ತಾಲೂಕು, ದ.ಕ

ಫೋ:9742884160