News

ಹುತಾತ್ಮ ಯೋಧನ ಪುಣ್ಯತಿಥಿ ವೆಚ್ಚವನ್ನು ನಾನೇ ಭರಿಸುತ್ತೇನೆ: ಸಚಿವ ಡಿಸಿ ತಮ್ಮಣ್ಣ

22 February, 2019 7:37 PM IST By:
ಮಂಡ್ಯ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮದ ಖರ್ಚು ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ಜಿಲ್ಲೆಯ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ಸಚಿವರು, ಗುರು ನಮ್ಮ ಊರಿನ ಯೋಧ ಆಗಿರುವುದರಿಂದ ನಾನೇ ಖರ್ಚು ಭರಿಸುತ್ತೇನೆ. ನಮ್ಮ ಬೆಂಬಲಿಗರು ಕೂಡ ಎಲ್ಲ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ ಎಂದರು.

ಗುರು ಸ್ಮಾರಕ:
ಪುಣ್ಯಕಾರ್ಯದಂದು ಸುಮಾರು 4 ರಿಂದ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸಂಪ್ರದಾಯದಂತೆ ಏನೆಲ್ಲಾ ಊಟ ಮಾಡಬೇಕೆಂದು ನಿಗದಿ ಆಗಿಂದೆಯೋ ಎಲ್ಲವನ್ನೂ ಮಾಡುತ್ತೇವೆ. ಸದ್ಯದಲ್ಲೇ ಹುತಾತ್ಮ ಯೋಧ ಗುರು ಸ್ಮಾರಕ ಕೂಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಜೆಡಿಎಸ್‍ಗೆ ನಷ್ಟವಿಲ್ಲ: ಇದೇ ವೇಳೆ ಸುಮಲತಾ ಅಂಬರೀಶ್ ಅವರ ಲೋಕಸಭಾ ಸ್ಪರ್ಧೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸುಮಲತಾ ಅವರು ನಮ್ಮ ಸಂಬಂಧಿಕರೇ ಆಗಿದ್ದಾರೆ. ಆದರೆ ಸಂಬಂಧ ಅಥವಾ ಪಕ್ಷ ಎಂದು ಬಂದಾಗ ನನಗೇ ಪಕ್ಷವೇ ಮುಖ್ಯವಾಗುತ್ತದೆ ಎಂದರು.

ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಸುಮಲತಾ ಅವರ ಸಂಬಂಧಿಕರ ಮೂಲಕ ಸಿಎಂ ಜೊತೆ ಮಾತನಾಡಿ ನಿರ್ಧಾರ ಮಾಡುವ ಬಗ್ಗೆ ಅವರಿಗೆ ತಿಳಿಸಲು ಹೇಳಿದ್ದೆ. ಆದರೆ ಅವರು ಬರಲಿಲ್ಲ. ಯಾರಿಗೆ ಅವಶ್ಯಕವಾಗಿದೆಯೋ ಅವರು ಮಾತುಕತೆಗೆ ಮುಂದಾಗಬೇಕು. ಆದರೆ ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಂಡ್ಯ ಲೋಕಸಭೆಗೆ ದೇವೇಗೌಡರೇ ಬಂದರೆ ಯಾವುದೇ ವಿವಾದ ಇಲ್ಲದಂತಾಗುತ್ತದೆ. ನಿಖಿಲ್ ಸ್ಪರ್ಧೆ ಮಾಡಿದರು ಕೂಡ ಸಂತೋಷ. ನನ್ನ ಮಗನಿಗೆ ಟಿಕೆಟ್ ಸಿಗದಿದ್ದಾಗಲೂ ನಾನು ಪಕ್ಷ ನಿಷ್ಠೆ ಮೆರೆದಿದ್ದೇನೆ. ಒಂದು ವೇಳೆ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೂ ಜೆಡಿಎಸ್ ಗೆ ಏನೂ ಆಗುವುದಿಲ್ಲ ಎಂದು ಡಿಸಿ ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಅಂಬರೀಶ್ ಹಾಗೂ ಡಿಸಿ ತಮ್ಮಣ್ಣ ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡ ದೊಡ್ಡರಸಿನಕೆರೆ ಗ್ರಾಮದವರಾಗಿದ್ದ ಪರಿಣಾಮ ಹೆಚ್ಚು ಆತ್ಮೀಯರಾಗಿದ್ದರು. ದೊಡ್ಡರಸಿನಕೆರೆ ಗ್ರಾಮಕ್ಕೆ ಬರುವ ಸಮಯದಲ್ಲಿ ಹೆಚ್ಚು ಸಲ ಸಚಿವ ಡಿಸಿ ತಮ್ಮಣ್ಣ ಅವರ ಕಾರಿನಲ್ಲೇ ಅಂಬರೀಶ್ ಆಗಮಿಸುತ್ತಿದ್ದರು.