ಮುಂಬೈ: ಒಂದು ವೇಳೆ ಪಾಕ್ ವಿರುದ್ಧ ಪಂದ್ಯ ಆಡಕೂಡದು ಎಂದು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡರೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಹಿರಿಯ ವಕ್ತಾರರು ಬುಧವಾರ ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಪಾಕ್ ವಿರುದ್ಧ ಆಡದಿದ್ದರೆ ಸರಣಿಯ ನಿಯಮಗಳ ಅನ್ವಯ ಪಾಕ್ ತಂಡಕ್ಕೆ ಪೂರ್ಣ ಅಂಕ ಸಿಗುತ್ತದೆ. ಆದರೆ ಇದುವರೆಗೂ ನಾವು ಪಂದ್ಯದ ನಿಷೇಧದ ಬಗ್ಗೆ ಐಸಿಸಿಗೆ ಯಾವುದೇ ಮಾಹಿತಿ ತಿಳಿಸಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ವಿಶ್ವಕಪ್ ಆರಂಭಕ್ಕೂ ಮುನ್ನವೇ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದ್ದು, ಒಂದೊಮ್ಮೆ ಪಂದ್ಯದಲ್ಲಿ ಭಾರತ ಆಡದಿದ್ದರೆ ಪಾಕ್ ಅಂಕಗಳನ್ನು ಪಡೆದುಕೊಳ್ಳಲಿದೆ. ಆದರೆ ಫೈನಲ್ ಪಂದ್ಯದಲ್ಲಿ ನಾವು ಆಡದಿದ್ದರೆ ನಿಯಮದಂತೆ ಪಾಕಿಸ್ತಾನ ಕಪ್ ಪಡೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಫೆ.27 ರಂದು ಐಸಿಸಿ ಸಭೆ ನಿಗದಿಯಾಗಿದ್ದು, ಈ ವೇಳೆ ಇಂಡೋ ಪಾಕ್ ಪಂದ್ಯದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ, ಕಾರ್ಯದರ್ಶಿ ಅಮಿತಾಬ್ ಚೌಧರಿ ಭಾಗವಹಿಸಲಿದ್ದಾರೆ.
ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಜೂನ್ 16 ರಂದು ಪಂದ್ಯ ನಡೆಯಲಿದೆ. ಆದರ ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 44 ಸೈನಿಕರು ಸಾವನ್ನಪ್ಪಿರುವುದು ಎರಡು ದೇಶಗಳ ನಡುವೆ ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡುವಂತೆ ಮಾಡಿದೆ. ದಾಳಿಯನ್ನು ಜೈಶ್ ಇ ಮಹಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಪಾಕ್ ವಿರುದ್ಧ ವಿಶ್ವಕಪ್ ಪಂದ್ಯ ಆಡುವುದಕ್ಕೆ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಫೈನಲ್ ಗೆ ಬಂದರೂ ಭಾರತ ಪಾಕ್ ವಿರುದ್ಧ ಪಂದ್ಯ ಆಡಬಾರದು. ಈ ಮೂಲಕ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಮುಜುಗರವನ್ನು ಉಂಟುಮಾಡಬೇಕು. ಕ್ರೀಡೆಗೆ ಗಡಿ ಇಲ್ಲದೇ ಇದ್ದರೂ ಉಗ್ರರನ್ನು ಛೂ ಬಿಟ್ಟು ಪದೇ ಪದೇ ಭಾರತಕ್ಕೆ ಕಿರಿಕ್ ಮಾಡುತ್ತಿರುವ ಪಾಕಿಸ್ತಾನಕ್ಕೆ ಈ ಮೂಲಕ ಟೀ ಇಂಡಿಯಾ ತಂಡ ವಿಶ್ವಕಪ್ ನಲ್ಲಿ ಪಾಠ ಕಲಿಸಬೇಕು ಎನ್ನುವ ಅಭಿಪ್ರಾಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಹೊಂದಿದೆ. ಒಂದೊಮ್ಮೆ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧದ ಆಡದಿದ್ದರೆ ಈ ದಾಖಲೆಯೂ ಕೂಡ ಅಳಿಯಲಿದೆ.
ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಪಂದ್ಯವಾಡಬೇಕೇ? ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.
ವಿಶ್ವಕಪ್ ಕ್ರಿಕೆಟ್: ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಇಂಡೋ-ಪಾಕ್ ಮ್ಯಾಚ್!
20 February, 2019 3:17 PM IST