ಮಂಡ್ಯ (ಫೆ.21): ಸಿದ್ದರಾಮಯ್ಯ ಭೇಟಿ ಬಳಿಕ ಇಂದು ಸಕ್ಕರೆ ನಾಡಿಗೆ ಆಗಮಿಸಿರುವ ಸುಮಲತಾ ಅಂಬರೀಶ್ ಚಿಕ್ಕರಸಿನಕರೆಯಲ್ಲಿರುವ ತಮ್ಮ ಮನೆ ದೇವರು ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಂಬರೀಶ್ ಅಭಿಮಾನಿಗಳ ಒತ್ತಾಯದ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸು ಇಂಗಿತ ವ್ಯಕ್ತಪಡಿಸಿರುವ ಅವರು, ಈ ಸಂಬಂಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೊಂದಿಗೆ ನಿನ್ನೆ ಚರ್ಚೆ ನಡೆಸಿದ್ದಾರೆ. ತಮ್ಮ ರಾಜಕೀಯ ಜೀವನ ಕುರಿತು ಮಂಡ್ಯ ಜನರ ಅಭಿಪ್ರಾಯವೇ ಅಂತಿಮ ಎನ್ನುವ ಮೂಲಕ ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಚಿಕ್ಕರಸಿನಕರೆಗೆ ಮಗ ಅಭಿಷೇಕ್ ಜೊತೆ ಆಗಮಿಸಿದ ಅವರು ಮನೆದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಭಾವುಕರಾದ ಅವರು, ಮಂಡ್ಯ ಜನರ ಪ್ರೀತಿ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿದೆ. ಅವರ ಪ್ರೀತಿ ಬಿಟ್ಟು ನಾವು ಎಲ್ಲಿ ಹೋಗಲು ಸಾಧ್ಯ.
ನಮ್ಮ ಯಜಮಾನರ ಊರು ಎಂದರೆ ನಮ್ಮ ಊರಿದು.ಅಂಬರೀಶ್ ಅವರಿಗೆ ಇಲ್ಲಿನ ಜನ ತೋರಿದ ಪ್ರೀತಿಗೆ ಋಣ ತೀರಿಸಲು ಅವಕಾಶ ಸಿಕ್ಕರೆ ಅದನ್ನು ಖಂಡಿತ ತೀರಿಸುವೆ. ರಾಜಕೀಯಕ್ಕೆ ಬರಬೇಕೆಂದು ಮಂಡ್ಯಕ್ಕೆ ಬಂದಿಲ್ಲ. ಚುನಾವಣೆಗೆ ಸಾಕಷ್ಟು ಆಫರ್ ಬರುತ್ತಿದೆ. ಸ್ಪರ್ಧಿಸುವುದಾದರೆ ಅದು ಮಂಡ್ಯದಿಂದ ಮಾತ್ರ ಎಂದರು
ಸಿದ್ದರಾಮಯ್ಯ ಭೇಟಿ ಕುರಿತು ಸ್ಪಷ್ಟಪಡಿಸಿದ ಅವರು, ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಮಂಡ್ಯದ ಜನರು ಒತ್ತಾಯಿಸಿದ್ದಾರೆ. ಇಲ್ಲಿನ ಜನರ ಆಶಯ ಇದಾಗಿದೆ ಎಂಬ ಕುರಿತು ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ಇಷ್ಟು ವರ್ಷ ಅಂಬರೀಶ್ ಅವರಿಗೆ ಇಲ್ಲಿನ ಜನರು ತೋರಿಸಿಕೊಂಡು ಬಂದಿರುವ ಪ್ರೀತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದರೆ ಅವರ ಮಾತಿನಂತೆ ನಡೆಯಬೇಕು ಎಂದು ತಿಳಿಸಿದ್ದೇನೆ ಎಂದರು.
ಇದನ್ನು ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸುಮಲತಾ ಅಂಬರೀಷ್; ಮಂಡ್ಯ ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ ಚರ್ಚೆ
ಅಂಬರೀಶ್ ಅವರು ಕಾಂಗ್ರೆಸ್ಗೆ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಆದ್ಯತೆ. ಅದರಿಂದಾಗಿ ಮೊದಲ ಹಂತವಾಗಿ ನಾನು ಈಗ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿ ಮಾಡಿ ಮಾತನಾಡುತ್ತಿದ್ದೇವೆ. ಪಕ್ಷದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎನ್ನುವುದಾದರೆ ಅಭಿಮಾನಿಗಳ ನಿರ್ಧಾರಕ್ಕೆ ಬದ್ದಳಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಯೋಧನಿಗೆ ನೀಡಬೇಕಾದ ಜಮೀನು ವೀಕ್ಷಣೆ ಮಾಡಿದ ಸುಮಲತಾ
ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯ ಯೋಧ ಎಚ್ ಗುರು ಕುಟುಂಬಕ್ಕೆ ದೊಡ್ಡರಸಿನಕೆರೆಯಲ್ಲಿರುವ ತಮ್ಮ ಅರ್ಧ ಎಕರೆ ಜಮೀನನ್ನು ನೀಡುವುದಾಗಿ ಸುಮಲತಾ ತಿಳಿಸಿದ್ದರು. ಈ ಮೂಲಕ ಯೋಧನ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಯೋಧನ ಕುಟುಂಬಕ್ಕೆ ನೀಡಲಾಗುವ ದೊಡ್ಡರಸಿನಕರೆಯ ಅಂಬರೀಶ್ ಅವರ ಜಮೀನನ್ನು ವೀಕ್ಷಣೆ ಮಾಡಿ, ಸಂಬಂಧಿಕರಿಂದ ಮಾಹಿತಿ ಪಡೆದರು. ಬಳಿಕ ಗುರು ಮನೆಗೆ ತೆರಳಿ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಮಂಡ್ಯ ಜನರ ಮಾತಿನಂತೆ ರಾಜಕೀಯ ಜೀವನ ನಿರ್ಧಾರ; ಸುಮಲತಾ ಅಂಬರೀಶ್
21 February, 2019 1:49 PM IST