ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ ಬಸವಣ್ಣನ ಐಕ್ಯಸ್ಥಳದಲ್ಲಿನ ಶಿವಲಿಂಗ ಬಿರುಕು ಬಿಟ್ಟಿದ್ದರಿಂದ ಭಕ್ತರು ಆತಂಕಗೊಂಡಿದ್ದಾರೆ.
ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ಈ ಮೂರು ನದಿಗಳ ತ್ರಿವೇಣಿ ಸಂಗಮ ಎಂದು ಕರೆಸಿಕೊಳ್ಳುವ ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯಮಂಟಪ ಇದೆ. ಈ ಐಕ್ಯ ಮಂಟಪ ವೀಕ್ಷಣೆಗೆ ನಿತ್ಯ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಆಗಮಿಸುತ್ತಿರುವ ಭಕ್ತರು ಶಿವಲಿಂಗಕ್ಕೆ ನಾಣ್ಯಗಳನ್ನು ಎಸೆಯುತ್ತಿರುವುದರಿಂದ ಬಿರುಕು ಬಿಟ್ಟಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಇತ್ತೀಚೆಗೆ ಕೆಲ ಪಟ್ಟಭದ್ರರು ಐಕ್ಯಸ್ಥಳದ ಸುತ್ತಮುತ್ತ ಮೌಢ್ಯತೆ ಬಿತ್ತರಿಸುವ ಕಾರ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿ ಬಂದಿದ್ದು, ಬಸವಣ್ಣನ ಐಕ್ಯಸ್ಥಳದ ಶಿವಲಿಂಗದ ಸಂರಕ್ಷಣೆಗೆ ಬಸವ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರ ಗಮನ ಹರಿಸಬೇಕು. ಐಕ್ಯಸ್ಥಳದ ಶಿವಲಿಂಗದ ಸುತ್ತಲೂ ಫೈಬರ್ ಗ್ಲಾಸ್ ಅಳವಡಿಸುವಂತೆ ಭಕ್ತರು ಒತ್ತಾಯ ಮಾಡಿದ್ದಾರೆ.