News

ಒಂಟಿ ಸಲಗಕ್ಕೆ ಗುಂಡಿಟ್ಟು ಕೊಂದು ದಂತ ಕಳ್ಳತನ: ಇನ್ನೂ ಪತ್ತೆಯಾಗಿಲ್ಲ ಆರೋಪಿಗಳು

20 February, 2019 4:09 PM IST By:
ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಕೊತ್ತನೂರು ಅರಣ್ಯ ವಲಯದಲ್ಲಿ ಒಂಟಿ ಸಲಗಕ್ಕೆ ನಾಡ ಬಂದೂಕಿನಿಂದ ಗುಂಡಿಕ್ಕಿ ದಂತ ಕದ್ದಿದ್ದ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ.

ಪ್ರಕರಣ ಸಂಬಂಧ ಈಟಿವಿ ಭಾರತದೊಂದಿಗೆ ಉನ್ನತ ಮೂಲಗಳು ಪ್ರತಿಕ್ರಿಯಿಸಿದ್ದು, ವೃತ್ತಿ ಬೇಟೆಗಾರರು ಚಿಕ್ಕಲ್ಲೂರು ಜಾತ್ರಾ ಸಮಯದಲ್ಲಿ ಹೊಂಚುಹಾಕಿ ಆನೆಯನ್ನು ಕೊಂದಿದ್ದಾರೆ. ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲ ಉತ್ಸವದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ 5 ಕಿ.ಮೀ. ದೂರದ ಕೊತ್ತನೂರು ವಲಯದಲ್ಲಿ ಗುಂಡಿಟ್ಟು ಆನೆ ಕೊಂದಿದ್ದಾರೆ. ಇಲಾಖೆಯ ಸಿಬ್ಬಂದಿ ಪಟಾಕಿ ಶಬ್ದ ಇರಬಹುದು ಎಂದು ನಿರ್ಲಕ್ಷ್ಯಿಸುವುದನ್ನೇ ಬೇಟೆಗಾರರು ಬಂಡವಾಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆನೆ ಕಳೇಬರ ಕಳ್ಳ ಬೇಟೆ ತಡೆ ಕ್ಯಾಂಪಿನಿಂದ 1.5 ಕಿ.ಮೀ. ದೂರದಲ್ಲಿ ಸಿಕ್ಕಿದ್ದು, ಅದು ಕೂಡ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇನ್ನು, ಆನೆ ಕಳೇಬರ ಸಿಕ್ಕ 5 ಕಿ.ಮೀ. ದೂರದ ಕಾಡಿನಲ್ಲಿ ನಾಡ ಬಂದೂಕೊಂದು ಪತ್ತೆಯಾಗಿದ್ದು, ಬೇಟೆಗಾರರು ಮತ್ತೆ ಬಾಲ ಬಿಚ್ಚಿರುವ ಶಂಕೆ ವ್ಯಕ್ತವಾಗಿದೆ.

ಆನೆಯನ್ನು ಕೊಂದು ಕೊಡಲಿಯಿಂದ ದಂತ ಕೀಳದೇ ಆ್ಯಸಿಡ್ ಬಳಸಿ ದಂತ ಕಿತ್ತಿರುವುದು ಬೇಟೆಗಾರರ ಮತ್ತೊಂದು ಜಾಣ ನಡೆಗೆ ಸಾಕ್ಷಿಯಾಗಿದೆ‌. ಕೂಡಲೇ, ದಂತ ಚೋರರನ್ನು ಹಿಡಿಯುವಂತೆ ಸ್ಥಳೀಯರು ಹಾಗೂ ಪರಿಸರವಾದಿಗಳು ಒತ್ತಾಯಿಸಿದ್ದಾರೆ.