News

ಉಡುಪಿ ಜಿಲ್ಲೆಯಲ್ಲಿ 'ಪ್ರಮಿಳೆಯರ ಪ್ರಭುತ್ವ' !

21 February, 2019 8:48 PM IST By:
ಹೆಪ್ಸಿಬಾ, ನಿಶಾ, ಸಿಂಧು, ವಿದ್ಯಾಕುಮಾರಿ

ಉಡುಪಿ, ಫೆ.21: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಶಾ ಜೇಮ್ಸ್ ಅವರು ನೇಮಕಗೊಳ್ಳುವ ಮೂಲಕ ಇದೀಗ ಉಡುಪಿ ಜಿಲ್ಲೆಯ ಆಡಳಿತದ ಚುಕ್ಕಾಣಿಗಳೆಲ್ಲವೂ ಮಹಿಳೆಯರ ಕೈಯಲ್ಲೇ ಇರುವಂತಾಗಿದೆ.

ಉಡುಪಿ ಜಿಲ್ಲಾಧಿಕಾರಿಯಾಗಿ ಸುಮಾರು ಒಂದೂವರೆ ವರ್ಷ ಆಡಳಿತ ನಡೆಸಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆ ಗೊಂಡರೂ ಅವರ ಸ್ಥಾನಕ್ಕೆ ಬಂದವರು ಮತ್ತೊಬ್ಬ ಐಎಎಸ್ ಮಹಿಳಾ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ. ಇದಕ್ಕೆ ಕೆಲ ಸಮಯ ಮೊದಲು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮೈಸೂರು ಮೂಲದ ಐಎಸ್ ಅಧಿಕಾರಿ ಸಿಂಧು ಬಿ.ರೂಪೇಶ್ ನೇಮಕಗೊಂಡಿದ್ದರು. ಅಪರ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ಕೆ. ಮೊದಲೇ ಕಾರ್ಯ ನಿರ್ವಹಿಸುತಿದ್ದಾರೆ.

ಇದೀಗ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಅಧಿಕಾರವೂ ಮಹಿಳೆಗೆ ಸಿಕ್ಕಿದೆ. ಇನ್ನು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಇರುವವರೂ ಸಚಿವೆ ಡಾ. ಜಯಮಾಲ. ಜಿಲ್ಲೆಯ ಸಂಸದೆಯಾಗಿ ಶೋಭಾ ಕರಂದ್ಲಾಜೆಯೇ ಇದ್ದಾರೆ.

ಒಟ್ಟಿನಲ್ಲಿ ಇದೀಗ ಉಡುಪಿ ಜಿಲ್ಲೆಯ ಮಟ್ಟಿಗಂತೂ ಮಹಿಳೆಯರ ಪ್ರಭುತ್ವವೇ ನಡೆಯುವಂತಾಗಿದೆ. ಪ್ರಾಯಶ: ಮಹಿಳಾ ಸಬಲೀಕರಣಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆಲ್ಲೂ ಸಿಗುವ ಸಾಧ್ಯತೆ ಇಲ್ಲ.