News

ರಾಜ್ಯ ಸರ್ಕಾರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

21 January, 2023 6:16 PM IST By: Kalmesh T
Zero interest rate loan to 33 lakh farmers from state government

ಇಲ್ಲಿವೆ ಕೃಷಿ ಜಾಗರಣ ನಿಮಗಾಗಿ ತಂದ ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

1 - One

ರಾಜ್ಯ ಸರ್ಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲದ ನೆರವು ನೀಡಿದ್ದು ಇದೊಂದು ದಾಖಲೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ "ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ" ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಸಾಲ ಪದ್ದತಿ ಬದಲಾಗಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರಿಗೆ ಒತ್ತಾಯ ಮಾಡಿದ್ದು, ನಬಾರ್ಡ್  ಈ ಸಾಲ ಪದ್ದತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ರಾಜ್ಯ ಸರ್ಕಾರ ಈ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲದ ನೆರವು ನೀಡಿದ್ದು, ಇದೊಂದು ದಾಖಲೆ.

ರೈತಶಕ್ತಿ  ಯೋಜನೆ ಪ್ರಾರಂಭಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರುಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.  10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.

2 – Two

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ  ಸಂಘದ ವತಿಯಿಂದ ಬೆಂಗಳೂರಿನ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿರುವ 11 ದಿನಗಳ 213ನೇ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಬೆಂಗಳೂರು ನಗರದ ಇತಿಹಾಸವನ್ನು ಲಾಲ್‌ಬಾಗ್‌ ಗಾಜಿನಮನೆಯಲ್ಲಿ ಹೂಗಳ ಕಲಾಕೃತಿಗಳಿಂದ ನಿರ್ಮಿಸಲಾಗಿದೆ.

ಬೃಹತ್‌ ಲಾಲ್‌ಬಾಗ್‌ ಬಂಡೆ, ವೃಷಭಾವತಿ ನದಿಯ ಮೂಲ, ಬೆಂಗಳೂರು ಪ್ರದೇಶದಲ್ಲಿ ಪ್ರಾರಂಭವಾದ ಜನವಸತಿ ಪ್ರದೇಶ, ರೋಮನ್‌ ಕಾಲದ ನಾಣ್ಯಗಳು, ಬೆಂಗಳೂರಿನ ಹೆಸರನ್ನು ಮೊದಲು ಉಲ್ಲೇಖಿಸುವ ಬೇಗೂರು ಶಾಸನದ ಪ್ರತಿಕೃತಿ, ಕೆಂಪೇಗೌಡರ ಕಾಲದ ಬೆಂಗಳೂರಿನ ಗಡಿ ಗೋಪುರಗಳು, ದೇವಾಲಯಗಳು, ಟಿಪ್ಪು ಕಾಲದ ಬೇಸಿಗೆ ಅರಮನೆ, ಬ್ರಿಟಿಷ್‌ ಆಡಳಿತಾವಧಿಯ ಹೈಕೋರ್ಟ್‌, ಮೈಸೂರು ಒಡೆಯರ ಆಡಳಿತಾವಧಿಯ ಬೆಂಗಳೂರು ಅರಮನೆ ಸೇರಿ ಸುಮಾರು 30 ಸಾವಿರಕ್ಕೂ ಹೆಚ್ಚು ವಿವಿಧ ಆಕರ್ಷಕ ಹೂಗಳನ್ನು ಬಳಸಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ದರ ವಯಸ್ಕರಿಗೆ 70 ರೂಪಾಯಿ. 12 ವರ್ಷದೊಳಗಿನ ಮಕ್ಕಳಿಗೆ ಹಾಗೂ 30 ಶಾಲಾ ಮಕ್ಕಳಿಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ಈ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು, ಮತ್ತೊಮ್ಮೆ ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸುವಂತೆ ಸರ್ಕಾರ ಕ್ರಮ ವಹಿಸಲಾಗುವುದು ಎಂದರು.

ಬಿಬಿಎಂಪಿ ನಿರ್ವಹಿಸುವ ಹೊಸ ಉದ್ಯಾನಗಳಲ್ಲಿ ಹೆಚ್ಚಿನ ಸಸ್ಯ ಸಂಪತ್ತನ್ನು ಬೆಳೆಸುವುದು ಹಾಗೂ ಹೊರವಲಯದಲ್ಲಿ ಹೊಸ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಉದ್ಯಾನ ನಗರ ಹೆಸರನ್ನು ಖಾಯಂ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

3 – Three

ರೈತರ ಬದುಕಿನ ಸಂದಿಗ್ಧತೆ ಹೋಗಲಾಡಿಸಲು  ವೈಜ್ಞಾನಿಕ ಔಟ್ ಲುಕ್ ವರದಿ ಅಗತ್ಯವಾಗಿದೆ ಸಿಎಂ ಬೊಮ್ಮಾಯಿ ಹೇಳಿದರು. 

ಮುಂದುವರೆದ ರಾಷ್ಟ್ರಗಳಲ್ಲಿ ಯಾವ ಋತುವಿಗೆ ಎಷ್ಟು ಮಳೆಯಾಗಬಹುದು ಎಂದು ಕಳೆದ 10 ವರ್ಷಗಳ ಮಳೆ  ಮಾದರಿಯನ್ನು ಆಧರಿಸಿ, ಬಿತ್ತನೆ, ಉತ್ಪಾದನೆಅಂತರರಾಷ್ಟ್ರೀಯ ಮಾರುಕಟ್ಟೆ, ಸ್ಥಳೀಯ ಮಾರುಕಟ್ಟೆಗಳನ್ನು ಪರಿಶೀಲಿಸಿಒಂದು ಬೆಲೆಯನ್ನು ನಿಗದಿ ಮಾಡುವ ಔಟ್‍ಲುಕ್  ವರದಿ ತಯಾರಿಸುತ್ತಾರೆ.  

ಇಂಥ ವರದಿಯನ್ನು ನಮ್ಮಲ್ಲಿಯೂ ತಯಾರಿಸುವ ಅಗತ್ಯವಿದೆ ಎಂದರು.

 4 -Four

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಈ ವರ್ಷ ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ ಎಂದು ಘೋಷಣೆ ಮಾಡಿದ್ದರಿಂದ ರಾಜ್ಯದಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕೇಂದ್ರ ಸರ್ಕಾರ ಸಿರಿ ಧಾನ್ಯ ಬೆಳೆಗೆ ಹೆಚ್ಚಿನ ಪ್ರೋತ್ಸಾಹ  ಹಾಗೂ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಜನರಿಗೆ ಆರೋಗ್ಯ ಹಾಗೂ ರೈತರಿಗೆ ಲಾಭ ತರುವಂತಹ ಸಿರಿಧಾನ್ಯ ಕೃಷಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಲು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ ನವಣಿ, ಸಾವೆ, ರಾಗಿ ಜೋಳ ಸೇರಿದಂತೆ ಎಲ್ಲ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಆಗ ಕೃಷಿ ಕೇವಲ ಆಹಾರ ಉತ್ಪಾದನೆಗೆ ಮಾತ್ರ  ಸೀಮಿತವಾಗಿತ್ತು.ಈಗ ವಾಣಿಜ್ಯ ಉದ್ದೇಶಕ್ಕೆ ಕೃಷಿ ಮಾಡಲಾಗುತ್ತಿದೆ.

ಆಹಾರ ಧಾನ್ಯ ಉತ್ಪಾದನೆ ಹಾಗೂ ವಾಣಿಜ್ಯ ಬೆಳೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತೆಗೆ ತೊಂದರೆಯುಂಟಾಗಬಹುದು. ಬರುವ ದಿನಮಾನದಲ್ಲಿ ಆಹಾರ ಕೊರತೆ ಉಂಟಾಗಬಹುದೆಂದು ವಿಶ್ವ ಆಹಾರ ತಜ್ಞರು  ತಿಳಿಸಿದ್ದಾರೆ ಎಂದರು.

ರಾಜ್ಯದಲ್ಲಿ ಜೋಳ ಮತ್ತು ರಾಗಿಯನ್ನು ಜನ ಹೆಚ್ಚಾಗಿ ಬಳಸುತ್ತಾರೆ. ಕಳೆದ ಮೂರು ವರ್ಷದಿಂದ ಜೋಳ ಮತ್ತು ರಾಗಿಯನ್ನು  ನಮ್ಮ ಪಡಿತರದಲ್ಲಿ ನೀಡಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ದೊರೆಯುತ್ತದೆ. ರಾಗಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಇದ್ದು, ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸುವದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.

5 – Five

ಕಳೆದ ಕೆಲ ವರ್ಷಗಳಿಂದ ಮಾನವ-ಪ್ರಾಣಿ ಸಂಘರ್ಷಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಸಂಪೂರ್ಣ ಯಶಸ್ವಿಯಾಗಿಲ್ಲ.

ಇದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲ ಜನರು ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಈ ಹಾವಳಿಯಲ್ಲಿ ಮುಖ್ಯ ದಾಳಿ ಮಾಡುತ್ತಿದ್ದ ಆನೆಗಳಿಂದ ಮುಕ್ತಿ ನೀಡಲು

ಇದೀಗ ಹೊಸ ಪ್ರಯೋಗ ಒಂದನ್ನು ಮಾಡಲಾಗುತ್ತಿದೆ. ಇದು ರೈತರಿಗೆ ಸದ್ಯ ಬಹುದೊಡ್ಡ ಸಮಾಧಾನದ ಸಂಗತಿಯಾಗಿದೆ.

ಹೌದು, ಆನೆಗಳ ಹಾವಳಿಯಿಂದ ರೈತರನ್ನು ಮತ್ತು ಬೆಳೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇದೀಗ ಹೊಸ ಪ್ರಯೋಗವೊಂದಕ್ಕೆ ಕರ್ನಾಟಕದ ರೈತರು ಮುಂದಾಗಿದ್ದಾರೆ.

ಈ ಪ್ರಯೋಗ ಯಶಸ್ವಿಯಾದರೆ ಬಹುಪಾಲು ರೈತರಿಗೆ ಆನೆಗಳ ಹಾವಳಿಯಿಂದ ಮುಕ್ತಿ ದೊರೆಯಲಿದೆ.

ಆನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇರಿಸುವುದೇ ಇದೀಗ ಹೊಸ ಯೋಜನೆ. ತೋಟ-ಗದ್ದೆ-ಹೊಲಗಳ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸುವುದು. ಅವುಗಳನ್ನ ತಂತಿಗಳ ಮೂಲಕ ಪರಸ್ಪರ ಕಟ್ಟಲಾಗುತ್ತದೆ.

ಆನೆಗಳು ಹೊಲಗಳಿಗೆ ನುಗ್ಗುವ ವೇಳೆ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ಅವು ತಾಗಿದರೆ ಎಲ್ಲ ಜೇನು ಪೆಟ್ಟಿಗೆಗಳು ಏಕಕಾಲಕ್ಕೆ ಅಲುಗಾಡುತ್ತವೆ. ಇದರಿಂದ ವಿಚಲಿತಗೊಂಡ ಜೇನು ನೊಣಗಳು ಗೂಡನಿಂದ ಎದ್ದು

ಗುಂಪಾಗಿ ಗುಂಯ್‌ಗುಡಲು ಆರಂಭಿಸುತ್ತವೆ. ಈ ಸದ್ದು ಆನೆಗಳಿಗೆ ಕಿರಿಕಿರಿ ಉಂಟು ಮಾಡುವುದರಿಂದ ಮತ್ತೆ ಆನೆಗಳು ಈ ಕಡೆ ಬರಲಾರವು. ಮುಂದೆಯೂ ಕೂಡ ಇಂತಹ ಪೆಟ್ಟಿಗೆಗಳನ್ನು ಆನೆಗಳು ಕಂಡರೆ ಹಿಂದೆ ಸರಿಯುತ್ತವೆ.

 ಇದು ಯೋಜನೆಯ ಮುಖ್ಯ ಪ್ಲಾನ್‌. ಅಷ್ಟೇ ಅಲ್ಲದೇ ಜೇನು ಪೆಟ್ಟಿಗೆಗಳ ಜತೆಗೆ ಸಿಸಿ ಕೆಮರಾ ಕೂಡ ಅಳವಡಿಸಲಾಗಿದ್ದು, ಕಾಡಾನೆಗಳ ಚಲನ ವಲನಗಳ ಬಗ್ಗೆಯೂ ನಿಗಾವಹಿಸಲಾಗುತ್ತಿದೆ. ಈಗಾಗಲೇ ಈ ಪ್ರಯೋಗವನ್ನು ಅಸ್ಸಾಂ, ಮೇಘಾಲಯಗಳಲ್ಲಿ ಮಾಡಲಾಗಿದ್ದು ಅಲ್ಲಿನ ರೈತರು ಯಶಸ್ವಿಯಾಗಿದ್ದಾರೆ.

 6 -

ಇದು ಕನ್ನಡ ಮನಸ್ಸುಗಳೆಲ್ಲ ಖುಷಿಪಡುವ ವಿಷಯ. ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಪರೀಕ್ಷೆಗಳನ್ನು ಇನ್ಮುಂದೆ ಕನ್ನಡದಲ್ಲೂ ಬರೆಯಬಹುದು. ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ, ಕೇಂದ್ರದ ಪರೀಕ್ಷೆಗಳನ್ನ ನಡೆಸಬೇಕೆಂಬ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.

ಇದೇ ಮೊದಲ ಬಾರಿಗೆ ಇಂಗ್ಲಿಷ್‌, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಷೆಗಳನ್ನ ನಡೆಸಲು ಸಿಬ್ಬಂದಿ ನೇಮಕಾತಿ ಆಯೋಗ ಮುಂದಾಗಿದೆ.

 7 – Seven

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಆದರೆ, ಇದಕ್ಕೂ ಮೊದಲು ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಸೂಚನೆಯೊಂದು ಇದೆ. ಪಿಎಂ ಕಿಸಾನ್‌ 13ನೇ ಕಂತು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮೊದಲು ರೈತರು ಪಿಎಂ ಕಿಸಾನ್‌ ಇಕೆವೈಸಿ ಮಾಡಿಸಬೇಕು.

ಇದುವರೆಗೂ ಇಕೆವೈಸಿ ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಈ ಸಬ್ಸಿಡಿ ಹಣ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ನವೀಕರಿಸಿದ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು,

ಇದನ್ನು ನೀವು ಪರಿಶೀಲಿಸಿ ನಿಮ್ಮ ಹೆಸರನ್ನು ಖಚಿತ ಪಡಿಸಿಕೊಳ್ಳಲು ಸೂಚಿಸಲಾಗಿದೆ.

8 – Eight

ರಾಗಿ ಧಾನ್ಯಗಳು ಮತ್ತು ರಾಗಿ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬದ್ಧವಾಗಿರುವ ಭಾರತದ ಮೊದಲ ಅಗ್ರಿಟೆಕ್ ಸ್ಟಾರ್ಟ್ಅಪ್, ಮಿಲೆಟ್ ಮಾರ್ಟ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ ಗ್ರಾಮೀಣಾಭಿವೃದ್ಧಿ ಮತ್ತು ರಾಗಿ 2023 ರ ರಾಷ್ಟ್ರೀಯ ಸಮ್ಮೇಳನ ದೆಹಲಿಯಲ್ಲಿ ಪ್ರಾರಂಭವಾಗಿದೆ. ಕಾನ್ಫರೆನ್ಸ್ ಕಮ್ ಎಕ್ಸ್‌ಪೋ ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಅಭಿವೃದ್ಧಿಯನ್ನು

ಉತ್ತೇಜಿಸಲು ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಮೂಲಕ ಸಹಕಾರಿ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಂದ ವರ್ಧಿಸಲ್ಪಟ್ಟ ರಾಗಿ ಆಧಾರಿತ ಜೀವನೋಪಾಯವನ್ನು ಉತ್ತೇಜಿಸುವ ಗುರಿಯೊಂದಿಗೆಎರಡು ದಿನಗಳ ಸಮ್ಮೇಳನ ನಡೆಯುತ್ತಿದೆ. ಅಪೇಡಾ ಕಾರ್ಯದರ್ಶಿ ಡಾ.ಸುಧಾಂಶು ಈವೆಂಟ್‌ನಲ್ಲಿ ಮಾತನಾಡಿದರು.

9 – Nine

ಹನಿ ಮಿಷನ್ ಕಾರ್ಯಕ್ರಮದಡಿ  ಜೇನುನೊಣಗಳು ಸೇರಿದಂತೆ 300 ಜೇನು ಪೆಟ್ಟಿಗೆಗಳನ್ನು ವಿತರಿಸಲಾಯಿತು. ಜೇನು ಸಾಕಾಣಿಕೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಜೇನು ಪೆಟ್ಟಿಗೆಗಳು, ಯಂತ್ರಗಳು ಮತ್ತು ಜೇನು ಕಾಲೋನಿಗಳನ್ನು ವಿತರಿಸುವುದರಿಂದ ಹೊಸ ಉದ್ಯೋಗಾವಕಾಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್  ಹೇಳಿದರು.

ಕಳೆದ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ “ಹನಿ ಮಿಷನ್” ​​ಕಾರ್ಯಕ್ರಮದಡಿಯಲ್ಲಿ 80 ಜೇನುಸಾಕಣೆದಾರರಿಗೆ ಕೆವಿಐಸಿ 800 ಜೇನು ಪೆಟ್ಟಿಗೆಗಳು, ಉಪಕರಣಗಳು ಮತ್ತು ಜೇನುನೊಣಗಳ ಕಾಲೋನಿಗಳನ್ನು ವಿತರಿಸಿದೆ ಎಂದರು.

 10- Ten

ದೇಶದ ಮೊದಲ ಮಿಲೆಟ್ಸ್ ಕೆಫೆಯನ್ನು ಕೃಷಿ ಸಚಿವ ರವೀಂದ್ರ ಚೌಬೆ ಉದ್ಘಾಟಿಸಿದರು. ಛತ್ತೀಸ್‌ಗಢದ ರಾಯ್‌ಪುರನ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ  ಮಿಲೆಟ್ಸ್ ಕೆಫೆಯನ್ನು ಆರಂಭಿಸಲಾಗಿದೆ.

ಈ ಮಿಲೆಟ್ಸ್‌ ಕೆಫೆಯಲ್ಲಿ ಸಿರಿಧಾನ್ಯಗಳಿಂದ ತಯಾರಾದ ರುಚಿಕರ ಭಾರತೀಯ ತಿನಿಸುಗಳನ್ನು ಸವಿಯಬಹುದು. ಈ ಮಿಲೆಟ್‌ ಕೆಫೆಯ ಮೂಲಕ ಸಿರಿಧಾನ್ಯ ಬೆಳೆಗಳಿಂದ ತಯಾರಿಸಿದ ಇತರ ಉತ್ಪನ್ನಗಳನ್ನು ಕೂಡ ಇಲ್ಲಿ  ಖರೀದಿಸಲು ಲಭ್ಯವಿರುತ್ತದೆ.