News

ಉದ್ದು, ಹೆಸರು ಬೆಳೆಗೆ ತಗಲುವ ರೋಗ ಕೀಟಕ್ಕೆ ಪರಿಹಾರ

24 July, 2020 5:17 PM IST By:

ಜಿಲ್ಲೆಯಲ್ಲಿ ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಾಗೂ ಆಧ್ರ್ರತೆಯುಕ್ತ ತಂಪು ವಾತಾವರಣದಿಂದಾಗಿ ಹೆಸರು (green gram) ಮತ್ತು ಉದ್ದು ಬೆಳೆಯಲ್ಲಿ ರೋಗ ಮತ್ತು ಕೀಟಗಳು ಬರುವ ಸಾಧ್ಯತೆಗಳಿದ್ದು, ಈ ಕೆಳಗಿನಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ.

ಜಮೀನಿನಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ ನೀರು ಹೋರಹಾಕಬೇಕು.  ಮುಂಜಾಗ್ರತ ಕ್ರಮವಾಗಿ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು (3 ಗ್ರಾಂ. ಪ್ರತಿ ಲೀ. ನೀರಿಗೆ) ಹಾಗೂ ಕಾರ್ಬನ್‍ಡೈಜಿಮ್‍ನ್ನು (3 ಗ್ರಾಂ. ಪ್ರತಿ ಲೀ. ನೀರಿಗೆ) ಬೆಳೆಗಳಿಗೆ ಸಿಂಪರಣೆ ಕೈಗೊಳ್ಳಬೇಕು.

 ಹಳದಿ ಎಲೆ ನಂಜಾಣು ರೋಗ(yellow leaf toxins):ಮೊದಲು ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆ ಆಕಾರದ ಚಿಹ್ನೆಗಳು ಕಂಡುಬರುತ್ತವೆ, ನಂತರದಲ್ಲಿ ಒಂದಕ್ಕೊಂದು ಚುಕ್ಕೆಗಳು ಕೂಡಿ ಸಂಪೂರ್ಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ತದನಂತರ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಈ ನಂಜಾಣು ಬಿಳಿ ನೊಣದಿಂದ ಪ್ರಸರಣಗೊಳ್ಳುತ್ತದೆ.

ಹತೋಟಿ ಕ್ರಮಗಳು (control): ಪ್ರತಿ ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು.ಒಂದು ಮಿ.ಲೀ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.. (ಸೂ: ಯಾವುದೇ ರಾಸಾಯನಿಕ ಕೀಟನಾಶಕದೊಂದಿಗೆ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಬಾರದು). ಇಮಿಡಾಕ್ಲೋಪ್ರಿಡ್ 0.5 ಮಿ. ಲೀ. ಯನ್ನು  ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ನುಸಿಗಳ ನಿರ್ವಹಣೆ: ಮಳೆ ಬಂದ ಎರಡು ಮೂರು ದಿನಗಳ ನಂತರ ಥ್ರೀಪ್ಸ ಹಾಗೂ ಬೋರಾನ್ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆಯಲ್ಲಿ ಗಿಡದ ತುತ್ತ ತುದಿ (ನೆತ್ತಿ) ಸುಡುವುದು ಕಂಡು ಬಂದರೆ ರೈತರು ಥಿಯೋಮಿಥಾಕ್ಸಮ್ 0.5 ಗ್ರಾಂ. ಮತ್ತು ಬೋರಾನ್ 1 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತುಕ್ಕು ರೋಗ (ಕಬ್ಬಿಣ/ಇಟ್ಟಂಗಿ/ತಾಮ್ರ ರೋಗ): ಸಾಫ್ (SAAF)  2ಗ್ರಾಂ. ಹೆಕ್ಸಾಕೋನಾಜೋಲ್ 1 ಮೀ.ಲೀ. ಅಥವಾ ಪ್ರೋಪಿಕೊನಾಜೋಲ್ 1 ಮಿ.ಲೀ. ಅನ್ನು ಪ್ರತಿ ಲೀಟರ ನೀರಿಗೆ ಬೆರೆಸಿ  ಸಿಂಪಡಿಸಬೇಕು.

ಮಳೆ ನಿಂತ ನಂತರ ಮಣ್ಣು ಹದವಾದಾಗ ಎಡೆಗುಂಟೆ ಹಾಯಿಸುವುದರಿಂದ ಬೆಳೆಗಳು ಸಧೃಢವಾಗಿರುತ್ತವೆ ಎಂದು ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ