News

ತೌಕ್ತೇ ನಂತರ ಯಾಸ್ ಚಂಡಮಾರುತದ ಆತಂಕ- ಕರ್ನಾಟಕದ ಕರಾವಳಿಗೂ ಆಗಮಿಸಲಿದೆ ಚಂಡಮಾರುತ

20 May, 2021 11:08 AM IST By:

ಪಶ್ಚಿಮ ಕರಾವಳಿಯಲ್ಲಿ ತೌಕ್ತೇ ಚಂಡಮಾರುತದ ಅಬ್ಬರ ಸಂಪೂರ್ಣವಾಗಿ ಇಳಿಯುವ ಮುನ್ನವೇ ಮತ್ತೊಂದು ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆಯಿದೆ. ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ ನಲ್ಲಿ ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದೆ. ಅಪಾರ ಹಾನಿ, ಸಾವು ಸಂಭವಿಸಿ ನಷ್ಟವನ್ನುಂಟು ಮಾಡಿತ್ತು. ತೌಕ್ತೇ ಚಂಡಮಾರತದಿಂದ ತತ್ತರಿಸಿದ ಬೆನ್ನಲ್ಲೇ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತದ ಆತಂಕ ಆರಂಭವಾಗಿದೆ.

ಇದರ ಪರಿಣಾಮ ಮುಂದಿನ ವಾರದಿಂದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮೇ  23 ರಂದು ಬಂಗಾಳಕೊಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಇದು ಕೆಲವೇ ದಿನಗಳಲ್ಲಿ ಚಂಡಮಾರುತವಾಗಿ ಮಾರ್ಪಡಾಗುವ ಸಾಧ್ಯತೆಯಿದೆ.

ಮೇ 26ರ ವೇಳೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಕ್ಕೆ ತಲುಪುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಪ. ಬಂಗಾಳ, ಒಡಿಶಾ, ಮೇಘಾಲಯ ಮತ್ತು ಅಂಡಮಾನ್‌ ನಿಕೋಬರ್‌ ದ್ವೀಪಗಳಲ್ಲಿ ಮಳೆಯಾಗಲಿದೆ ಮಳೆ ಮತ್ತು ಗಾಳಿಯ ಅಬ್ಬರ ಜೋರಾಗಲಿದೆ ಎಂದು ಇಲಾಖೆ ತಿಳಿಸಿದೆ.

ಚಂಡಮಾರುತಕ್ಕೆ ಯಾಸ್ ಎಂಬ ಹೆಸರನ್ನು ಓಮಾನ್ ಸರ್ಕಾರ ನೀಡಿದೆ. ಯಾಸ್ ಎಂದರೆ ನಿರಾಶೆ ಎಂದರ್ಥ. ಸರದಿಯ ಅನುಸಾರ ಈ ಬಾರಿ ಓಮಾನ್ ಗೆ ಈ ಅವಕಾಶ ಒದಗಿ ಬಂದಿತ್ತು. ಅದರನ್ವಯ ಅದು ಈ ಹೆಸರನ್ನು ನೀಡಿದೆ. ಇದೀಗ ಅಪ್ಪಳಿಸಿರುವ ತೌಕ್ತೆ ಚಂಡಮಾರುತಕ್ಕೆ ಮ್ಯಾನ್ಮಾರ್ ಹೆಸರನ್ನು ನೀಡಿತ್ತು.

ಮುಂಗಾರಿಗೆ ಇನ್ನೇನು ದಿನಗಣನೆ ಆರಂಭವಾಗಿದ್ದು, ಐಎಂಡಿ ಪ್ರಕರಾ ಮೇ 31 ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಪಡೆಯಲಿದೆ. ಬಳಿಕ ಒಂದು ದಿನಗಳಲ್ಲಿ ರಾಜ್ಯ ಕರಾವಳಿಗೆ ಆಗಮಿಸಲಿದೆ. ಇದಕ್ಕೂ ಮುಂಚೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಇದು ಮುಂಗಾರಿನ ಮೇಲೆ ಪರಿಣಾಮಬೀರುವ ಸಾಧ್ಯತೆಯಿದೆ.

ಎಲ್ಲೆಲ್ಲಿ ಯಾಸ್ ಚಂಡಮಾರುತದ ಪರಿಣಾಮ

ಪ.ಬಂಗಾಳ, ಒಡಿಶಾ, ಅಸ್ಸಾಂ, ತಮಿಳುನಾಡು, ಆಂಧ್ರ, ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪಗಳು, ಸೇರಿದಂತೆ ಪೂರ್ವ ಕರಾವಳಿಯ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 'ಯಾಸ್‌' ಪ್ರಭಾವ ಕಾಣಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೌಕ್ತೇ ಚಂಡಮಾರುತವು ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಮಹಾರಾಷ್ಟ್ರ ಮತ್ತು ಗುಜರಾತ ರಾಜ್ಯಗಳಲ್ಲಿ ಒಟ್ಟು 33 ಜನ ಸಾವನ್ನಪ್ಪಿದ್ದಾರೆ. 90ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮುನ್ಸೂಚನೆಯಿಂದಾಗಿ ಅಪಾಯದ ಪ್ರದೇಶದಲ್ಲಿನ ಸುಮಾರು ಎಱಡು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ ಸಾವು ನೋವಿನ ಪ್ರಮಾಣ ಕಡಿಮೆಯಾಯಿತು.