ದೇಶದ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಜುಲೈ ಅಂತ್ಯದ ವೇಳೆಗೆ 5.5 ಲಕ್ಷಕ್ಕೇರಬಹುದು ಎಂಬ ವರದಿಗಳ ಬೆನ್ನಲ್ಲೆ ವಿಶ್ವದ ಅತೀದೊಡ್ಡ ಕೋವಿಡ್ ಆಸ್ಪತ್ರೆಯೊಂದು ನಿರ್ಮಾಣಗೊಂಡಿದೆ. ಏಕಕಾಲಕ್ಕೆ 10,000 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ.
ದಕ್ಷಿಣ ದೆಹಲಿಯ ಛತ್ತರಪುರ್ದಲ್ಲಿರುವ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್ ಕೇಂದ್ರದ 300 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್ನ (ಐಟಿಬಿಪಿ) ಹಾಗೂ ಇತರ ಕೇಂದ್ರೀಯ ಪಡೆಗಳ ವೈದ್ಯರು, ನರ್ಸ್ಗಳು ಸೇರಿ 3,000ಕ್ಕೂ ವೈದ್ಯಕೀಯ ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸಲಿದ್ದಾರೆ. ವಿಶ್ವದ ಅತೀದೊಡ್ಡ ಆರೈಕೆ ಕೇಂದ್ರ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಈ ಕೇಂದ್ರವನ್ನು ಭಾನುವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಲ್ ಉದ್ಘಾಟಿಸಿದರು.
ಲಕ್ಷಣರಹಿತಿ ಕೊರೋನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಮನೆಯಲ್ಲಿ ಪ್ರತ್ಯೇಕ ವಾಸ ಮಾಡಲು ಸಾಧ್ಯವಾಗುವಂತಹ ಲಕ್ಷಣರಹಿತ ಸೋಂಕಿತರಿಗೂ ಇಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.ಈ ಆರೈಕೆ ಕೇಂದ್ರವು 1700 ಅಡಿ ಉದ್ದ 700 ಅಗಲ- ಸರಿಸುಮಾರು 20 ಫುಟ್ಬಾಲ್ ಮೈದಾನಗಳಷ್ಟು ವಿಸ್ತಾರವಾಗಿದೆ. ಅಲ್ಲದೆ ಒಟ್ಟು 200 ಅಂಕಣಗಳನ್ನು ಒಳಗೊಂಡಿದ್ದು, ಇದರಲ್ಲಿ ತಲಾ 50 ಹಾಸಿಗೆಗಳನ್ನು ಹಾಕಲಾಗಿದೆ.
ಜಗತ್ತಿನಲ್ಲಿಯೇ ಅತಿ ಚಿಕಿತ್ಸಾ ಕೇಂದ್ರದ ವಿಶೇಷತೆಗಳು
* ಕೋವಿಡ್ ಚಿಕಿತ್ಸಾ ಕೇಂದ್ರವನ್ನು 300 ಎಕರೆಯಲ್ಲಿ ಸ್ಥಾಪಿಸಲಾಗಿದೆ. 70 ಎಕರೆಯನ್ನು ಕ್ವಾರಂಟೈನ್ ಉದ್ದೇಶಕ್ಕೆ ಮೀಸಲಾಗಿರಿಸಲಾಗಿದೆ.
* 10,200 ಹಾಸಿಗೆಗಳಿವೆ. ಈ ಪೈಕಿ ಶೇ.10ಕ್ಕೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗಾಗಿ ಮೀಸಲಿಟ್ಟಿದ್ದು, ಆಮ್ಲಜನಕ ಪೂರೈಕೆ ಸೌಲಭ್ಯವಿದೆ.
* ಎಲ್ಲ ಮಂಚಗಳನ್ನು ರಟ್ಟಿನಿಂದ ಮಾಡಲಾಗಿದ್ದು, ಪರಿಸರ ಸ್ನೇಹಿಯಾಗಿವೆ. ಫೋಮ್ ಹಾಸಿಗೆಯನ್ನು ಹೊಂದಿವೆ.
* ರೋಗಿಗಳ ಚಿಕಿತ್ಸೆಗಾಗಿ 1,000 ವೈದ್ಯರು 2,000 ನರ್ಸ್ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ರನ್ನು ನಿಯೋಜಿಸಲಾಗುತ್ತಿದೆ.
* 500 ಮೂತ್ರಗೃಹ, 450 ಸ್ನಾನದ ಮನೆ ಹಾಗೂ ಬಯೋ ಟಾಯ್ಲೆಟ್ಗಳು ಇಲ್ಲಿವೆ.
* ಅಂದಾಜು 60 ಅಂಬುಲೆನ್ಸ್ಗಳು, 50 ಇ-ರಿಕ್ಷಾಗಳು ಸ್ಥಳದಲ್ಲಿರಲಿವೆ.