News

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಬೇಳೆಕಾಳು ದಿನಾಚರಣೆ

10 February, 2021 7:36 PM IST By:
pulses

ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ, ಕೃಷಿ ಇಲಾಖೆ ಹಾಗೂ ಮೈರಾಡ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ವಿಶ್ವ ಬೇಳೆಕಾಳು ದಿನಾಚರಣೆಯನ್ನು ಆಚರಿಸಲಾಯಿತು.

ಬೇಳೆಕಾಳುಗಳನ್ನು ಗಡಿಗೆಯಲ್ಲಿ ಸುರಿಯುವುದರ ಮೂಲಕ ವಿಶ್ವ ಬೆಳೆ ಕಾಳು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್‍ರಾದ ಡಾ. ಸುರೇಶ ಎಸ್. ಪಾಟೀಲ್ ಅವರು, ಕಲಬುರಗಿಯು ಕರ್ನಾಟಕದ ಬೇಳೆಕಾಳುಗಳ ಬಟ್ಟಲು ಎಂದು ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ, ರೈತರು ತಮ್ಮ ಮಕ್ಕಳಲ್ಲಿ ಪ್ರೋಟೀನ್ ಕೊರತೆ ಆಗದಂತೆ ನೋಡಿಕೊಳ್ಳಲು ಹೆಚ್ಚು-ಹೆಚ್ಚು ಬೇಳೆಕಾಳುಗಳನ್ನು ಸೇವಿಸಲು ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಲಬುರಗಿ ಕೃಷಿ ಇಲಾಖೆಯ ಉಪ ನಿರ್ದೇಶಕಿ ಡಾ ಅನುಸೂಯ ಹೂಗಾರ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ  ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಮ್.ಎಮ್. ಧನೋಜಿ ಅವರು ಬೆಳೆ ಕಾಲು ದಿನಾಚರಣೆ ಹಿನ್ನೆಲೆ ಹಾಗೂ ಮಹತ್ವದ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ. ಮುನಿಸ್ವಾಮಿ ಎಸ್. ರವರು ತೊಗರಿ, ಹೆಸರು ಹಾಗೂ ಉದ್ದು ಬೆಳೆಗಳಲ್ಲಿ ನೆಟೆರೋಗದ ನಿಯಂತ್ರಣದ ಕುರಿತು ಮಾಹಿತಿ ನೀಡಿದಲ್ಲದೇ   ಬೇಸಿಗೆ ಕಾಲದಲ್ಲಿ ಹೆಸರು ಹಾಗೂ ಉದ್ದು ತಳಿಗಳ ಬಿತ್ತನೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.

ಕಲಬುರಗಿ ಕೃಷಿ ಮಹಾವಿದ್ಯಾಲಯ ಗೃಹ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಭವಾನಿ ಅವರು ಬೆಳೆ ಕಾಳು ಬಳಕೆಯಿಂದ ಲಾಭಗಳ ಕುರಿತು ಹಾಗೂ ರದ್ದೆವಾಡಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ವಿಜ್ಞಾನಿಗಳಾದ ಡಾ. ವಿಕ್ರಮ ಸಿಂಹ ಎಚ್.ವಿ. ಅವರು ಬೆಳೆ ಕಾಳುಗಳಲ್ಲಿ ಕೋಯ್ಲೋತ್ತರದ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮುನಿಸ್ವಾಮಿ ಎಸ್. ಕಾರ್ಯಕ್ರಮ ನಿರೂಪಿಸಿದರು. ಡಾ. ಮಂಜುನಾಥ ಪಾಟೀಲ್ ವಂದಿಸಿದರು.

ಕಾರ್ಯಕ್ರಮದಲ್ಲಿ ಶಹಾಬಾದ ತಾಲೂಕಿನ ಭಂಕೂರ, ತರನಳ್ಳಿ, ಆಳಂದ ತಾಲೂಕಿನ ಸುಂಟನೂರ ಮತ್ತು ಗೋಳಾ (ಬಿ) ಗ್ರಾಮಗಳ ಸುಮಾರು 50 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದರು.