ಚಾಟಿಂಗ್, ವೀಡಿಯೋ ಕಾಲ್ ಸೇರಿದಂತೆ ಹಲವಾರು ರೀತಿಯಲ್ಲಿ ಪ್ರತಿಯೊಬ್ಬರ ಬಾಯಲ್ಲಿ ವಾಟ್ಸ್ಆ್ಯಪ್, ವಾಟ್ಸ್ಆ್ಯಪ್ ಎಂದು ಕೇಳಿ ಬರುವ ಈ ಆ್ಯಪ್ ಈಗ ಹೊಸ ಫೀಚರ್ ತಂದಿದೆ. ಇತ್ತೀಚೆಗೆ ವಾಟ್ಸ್ಆ್ಯಪ್ ಮೂಲಕ ಎಲ್.ಪಿ.ಜಿ ಸಿಲಿಂಡರ್ ಬುಕ್ ಮಾಡುವ ಸೌಲಭ್ಯ ಕೊಟ್ಟಿದ್ದು ಎಲ್ಲರಿಗೂ ಗೊತ್ತಿದ ಸಂಗತಿ. ಈಗ ಚಾಟಿಂಗ್, ಆಡಿಯೋ, ವೀಡಿಯೋ ಕಾಲ್ ಜೊತೆಗೆ ಕ್ಷಣಮಾತ್ರದಲ್ಲಿ ಹಣವನ್ನೂ ವರ್ಗಾಯಿಸುತ್ತದೆ. ಅದು ಹೇಗೆ ಅಂದುಕೊಂಡಿದ್ದೀರಾ... ಇಲ್ಲಿದೆ ಸಂಪೂರ್ಣ ಮಾಹಿತಿ.
ಆನ್‌ಲೈನ್ ಮತ್ತು ಡಿಜಿಟಲ್ ಪಾವತಿ ಉತ್ತೇಜನಕ್ಕೆ ಕೇಂದ್ರ ಸರಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ದೇಶದಲ್ಲಿ ಈಗಾಗಲೇ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮತ್ತು ಅಮೆಜಾನ್ ಪೇ, ಭೀಮ್ ಯುಪಿಐ ಮುಂತಾದ ಸೇವೆಗಳು ಬಳಕೆದಾರರಿಗೆ ಲಭ್ಯವಾಗುತ್ತಿವೆ. ಈ ಪೈಕಿ ಹೊಸ ಸೇರ್ಪಡೆ ಎಂದರೆ ವಾಟ್ಸಪ್ ಪೇ!
ಫೇಸ್‌ಬುಕ್ ಒಡೆತನದ ವಾಟ್ಸಪ್, ದೇಶದಲ್ಲಿ ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಅನುಮೋದನೆ ಪಡೆದುಕೊಂಡಿದೆ. ಈ ಸೇವೆಗಳನ್ನು ಆರಂಭಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ಹೇಳಿದೆ. ಇಂದಿನಿಂದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವಾಟ್ಸಪ್ ಪೇ ಲಭ್ಯವಿದೆ.
ಈ ಹೊಸ ಸೌಲಭ್ಯವನ್ನು ಬಳಕೆದಾರರಿಗೆ ಹಂತ ಹಂತವಾಗಿ ನೀಡಬೇಕು ಎಂದು ಸೂಚಿಸಿದೆ. ಆರಂಭಿಕ ಹಂತದಲ್ಲಿ ಗರಿಷ್ಠ ಎರಡು ಕೋಟಿ ಜನರಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದೆ.
ಹಣದ ವಹಿವಾಟಿಗೆ ಸುರಕ್ಷತೆಯ ಖಾತರಿ ನೀಡುವ ಈ ವ್ಯವಸ್ಥೆಯ ಅಡಿ ಜನ ಸಂದೇಶ ರವಾನಿಸಿದಷ್ಟೇ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಬಹುದು’ ಎಂದು ವಾಟ್ಸ್‌ಆ್ಯಪ್ ತನ್ನ ಬ್ಲಾಗ್‌ನಲ್ಲಿ ಬರೆದಿದೆ. ಎನ್‌ಪಿಸಿಐ ಅಭಿವೃದ್ಧಿಪಡಿಸಿರುವ ಯುಪಿಐ ಪಾವತಿ ವ್ಯವಸ್ಥೆಯ ಮೂಲಕ 160ಕ್ಕೂ ಹೆಚ್ಚಿನ ಬ್ಯಾಂಕ್‌ಗಳ ನಡುವೆ ಹಣದ ವರ್ಗಾವಣೆ ಮಾಡಬಹುದು.
ವಾಟ್ಸ್ಆ್ಯಪ್ ಪೇ ಬಳಕೆ ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಾಗಿರಬೇಕು.
ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ವಾಟ್ಸಪ್ ಲೇಟೆಸ್ಟ್ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು.
ಬಳಿಕ ವಾಟ್ಸಪ್ ತೆರೆದು, ಪೇಮೆಂಟ್ ಎಂದಿರುವುದನ್ನು ಸೆಲೆಕ್ಟ್ ಮಾಡಬೇಕು.
ಕಂಟಿನ್ಯೂ ಎಂದು ಕೊಟ್ಟು, ಡೆಬಿಟ್ ಕಾರ್ಡ್ ಆಯ್ಕೆ ಮಾಡಬೇಕು.
ಈಗ ನಿಮ್ಮ ಡೆಬಿಟ್ ಕಾರ್ಡ್ ವಿವರ ಭರ್ತಿ ಮಾಡಬೇಕು. ಎಕ್ಸ್‌ಪೈರಿ ದಿನಾಂಕ ಕೂಡ ನಮೂದಿಸಿ ಡನ್ ಮೇಲೆ ಕ್ಲಿಕ್ ಮಾಡಬೇಕು. ಯುಪಿಐ ಪಿನ್ ಸಹ ಕೇಳುತ್ತದೆ. ಹಣ ವರ್ಗಾವಣೆಯಾದ ಕುರಿತು ಅಧಿಕೃತ ಸಂದೇಶ ಬರುತ್ತದೆ.
ವಾಟ್ಸ್ಆ್ಯಪ್ ಪಾವತಿ ಬಗ್ಗೆ ನಿಮಗಿದು ತಿಳಿದಿರಲಿ:
ವಾಟ್ಸ್ಆ್ಯಪ್ ಪಾವತಿ ಸೌಲಭ್ಯ ಬಳಸಿ ಹಣ ರವಾನಿಸಲು ಬ್ಯಾಂಕ್ ಖಾತೆ ಹಾಗೂ ಡೆಬಿಟ್ ಕಾರ್ಡ್ ಇರಬೇಕಾದುದು ಕಡ್ಡಾಯ.
ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಜಿಯೊ ಪೇಮೆಂಟ್ಸ್ ಬ್ಯಾಂಕ್ ಜೊತೆ ಸೇರಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವಾಟ್ಸ್‌ಆ್ಯಪ್ ಹೇಳಿದೆ. ಪಾವತಿ ವ್ಯವಸ್ಥೆ ಬಳಕೆಗೆ ಶುಲ್ಕ ಇಲ್ಲ. ಪಾವತಿ ಸೌಲಭ್ಯವು ಭಾರತದ ಹತ್ತು ಭಾಷೆಗಳಲ್ಲಿರುವ ವಾಟ್ಸ್‌ಆ್ಯಪ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ.