News

ಏನಿದು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ

16 September, 2021 8:07 PM IST By:

ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್‍ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರವು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್-ಧನ್-ಯೋಜನೆಯನ್ನು ಜಾರಿಗೆ ತಂದಿದೆ.

ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯ ನೀಡುವುದಕ್ಕಾಗಿಯೇ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಜಾರಿಗೆ ತರಲಾಗಿದೆ.

ಯೋಜನೆಗೆ ಸೇರಲು ಅರ್ಹತೆಗಳು:

18 ರಿಂದ 40 ವರ್ಷದೊಳಗಾಗಿರಬೇಕು.
ಅವರ ಮಾಸಿಕ ಆದಾಯ ರೂ.15,000/ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಗೆ ಒಳಪಟ್ಟಿರಬಾರದು.

ಪಿಎಮ್-ಎಸ್‌ವೈಎಂ ದಾಖಲಾತಿಗಳು:

ರೂ. 55 ಮಾಸಿಕ ಕೊಡುಗೆ 18 ರಿಂದ 40 ವರ್ಷ ವಯಸ್ಸಿನೊಳಗಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, ರೂ. 55 ರ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ ರೂ. 3,000 ಪಡೆಯಬಹುದು. ಖಾತೆಗೆ ಪಿಂಚಣಿದಾರರು ಪಾವತಿಸುವಷ್ಟೇ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ

ಯೋಜನೆ ನೋಂದಣಿ ವಿಧಾನಗಳು:

ಅರ್ಹ ಫಲಾನುಭವಿಗಳು ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ)” ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಷನ್, ಹಾಗೂ ಭವಿಷ್ಯನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ http://locator.csccloud.in ಗಳಲ್ಲಿ ಪಡೆಯಬಹುದಾಗಿರುತ್ತದೆ.
ಫಲಾನುಭವಿಗಳು ತಮ್ಮೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಐ.ಎಫ್.ಎಸ್.ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ/ಚೆಕ್ ಪುಸ್ತಕ/ಬ್ಯಾಂಕ್ ಸ್ಟೇಟ್‍ಮೆಂಟ್) ಮತ್ತು ಮೊಬೈಲ್‍ನೊಂದಿಗೆ ಕಾಮನ್ ಸರ್ವಿಸ್ ಸೆಂಟರಗಳಲ್ಲಿ ಅರ್ಜಿ ಹಾಕಬಹುದು.
 ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ತದ ನಂತರ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ ಮಾಡಲಾಗುವುದು.

ಯೋಜನೆಯ ಸೌಲಭ್ಯಗಳು:

ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಚಂದಾದಾರರು (ಫಲಾನುಭವಿಯು) ತಿಂಗಳಿಗೆ ನಿಶ್ಚಿತ ರೂ.3,000/-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತ ಪಟ್ಟಲ್ಲಿ ಅವರ ಪತ್ನಿ/ಪತಿ ಪಿಂಚಣಿಯ ಶೆ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರಾಗಿರುತ್ತಾಳೆ. ಚಂದಾದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ