News

ಏನಿದು ಡೆಲ್ಟಾ ಪ್ಲಸ್ ವೈರಸ್? ಈ ರೂಪಾಂತರಿ ಬಗ್ಗೆ ಯಾಕಿಷ್ಟು ಆತಂಕ? ಇಲ್ಲಿದೆ ಮಾಹಿತಿ

25 June, 2021 5:05 PM IST By:

ದೇಶದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿ ಇದೇ ಜುಲೈ 27ಕ್ಕೆ ಬರೋಬ್ಬರಿ ಒಂದೂವರೆ ವರ್ಷ ತುಂಬಲಿದೆ. ಕೇರಳದ ತ್ರಿಶ್ಶೂರ್‌ನ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ವರ್ಷದ ಯುವತಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ಕೆಲವೇ ವಾರಗಳಲ್ಲಿ ಅನಿರೀಕ್ಷಿತ ವೇಗದಲ್ಲಿ ದೇಶದ ಎಲ್ಲ ರಾಜ್ಯಗಳನ್ನೂ ವ್ಯಾಪಿಸಿದ ಕೊರೊನಾ ವೈರಸ್, ದೇಶವಾಸಿಗಳನ್ನು ಆತಂಕಕ್ಕೆ ದೂಡಿತು. ಆಸ್ಪತ್ರೆಯ ಶಸ್ತçಚಿಕಿತ್ಸಾ ಕೊಠಡಿಯಲ್ಲಿ ಆಪರೇಷನ್ ಮಾಡುವ ವೈದ್ಯರು ಮಾತ್ರವೇ ಬಳಸುತ್ತಿದ್ದ ಮಾಸ್ಕುಗಳು, ದೇಶದ ಎಲ್ಲಾ ಜನರ ಮೂಗು, ಬಾಯಿ ಮುಚ್ಚಿದವು. ಲಾಕ್‌ಡೌನ್, ಸೀಲ್‌ಡೌನ್, ಕ್ವಾರೆಂಟೈನ್, ಕಂಟೈನ್ಮೆಂಟ್ ಹೀಗೆ ಎಂದೂ ಕೇಳಿರದ ಹಲವಾರು ಹೊಸ ಪದಗಳು ಜನರ ಕಿವಿಗೆ ಬಿದ್ದವು. ಹಾಗೇ ಹೊಸ ಪರಿಸ್ಥಿತಿಗಳನ್ನೂ ಸಾರ್ವಜನಿಕರು ಎದುರಿಸಬೇಕಾಯಿತು.

ಮೊದಲ ಹಂತದ ಸೋಂಕು ಹರಡುವಿಕೆ ಪ್ರಮಾಣ ತಗ್ಗಿದ ಕೆಲವೇ ದಿನಗಳಲ್ಲಿ ಕೊರೊನಾ ಎರಡನೇ ಅಲೆ ದಾಂಗುಡಿಯಿಟ್ಟಿತು. ಅದೇ ವೇಳೆ ಕೊರೊನಾ ವೈರಾಣುವಿನ ರೂಪಾಂತರಿ ತಳಿಗಳೂ ಬಂದಿವೆ, ಅವುಗಳನ್ನು ನಿಯಂತ್ರಿಸುವುದು ಭಾರೀ ಕಷ್ಟ ಎಂಬ ಸುದ್ದಿಗಳೂ ಹರಿದಾಡಿದವು. ಕೊನೆಗೆ ಆ ರೂಪಾಂತರಿ ತಳಿಗೆ ‘ಡೆಲ್ಟಾ’ ಎಂದು ಹೆಸರಿಡಲಾಯಿತು. ಈಗ ಕೊರೊನಾ ಮೂರನೇ ಅಲೆಯ ಭೂತ ಎಲ್ಲರ ತಲೆಯಲ್ಲೂ ಭಯ ಹುಟ್ಟಿಸುತ್ತಿದೆ. ಈ ನಡುವೆಯೇ ಆ ಡೆಲ್ಟಾ ತಳಿಯ ಸುಧಾರಿತ ರೂಪಾಂತರಿ ತಳಿ ‘ಡೆಲ್ಟಾ ಪಲ್ಸ್’ ಜನ್ಮತಾಳಿದೆ. ‘ಡೆಲ್ಟಾ ಪ್ಲಸ್ ವೈರಸ್ ಅತ್ಯಂತ ಅಪಾಯಕಾರಿ. ಈಗಿರುವ ಕೋವ್ಯಾಕ್ಸಿನ್ ಮತ್ತು ಕೋವಿ ಶೀಲ್ಡ್ ಲಸಿಕೆಗಳಿಗೂ ಅದು ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ, ಬಹುಷಃ ಮಕ್ಕಳ ಮೇಲೆ ಇದರ ಪ್ರಭಾವ ಜಾಸ್ತಿ’ ಎನ್ನುವ ಹತ್ತು ಹಲವು ಆಧಾರವಿಲ್ಲದ ವದಂತಿಗಳು ಹರಿದಾಡುತ್ತಿವೆ. ಹಾಗಾದರೆ ಏನಿದು ಡೆಲ್ಟಾ ಪ್ಲಸ್? ಇದರಿಂದ ಆಗಲಿರುವ ಅಪಾಯವೇನು? ಯಾರೆಲ್ಲಾ ಇದರ ಟಾರ್ಗೆಟ್ ಮತ್ತು ದೇಶದಲ್ಲಿ ಇದರ ಪ್ರಭಾವ ಹೇಗಿದೆ ಎಂಬ ಮಾಹಿತಿಯನ್ನು ‘ಕೃಷಿ ಜಾಗರಣ’ ಈ ಲೇಖನದ ಮೂಲಕ ನೀಡುತ್ತಿದೆ.

ಏನಿದು ಡೆಲ್ಟಾ ಪ್ಲಸ್?

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸಲು ‘ಡೆಲ್ಟಾ' ರೂಪಾಂತರಿ ವೈರಾಣು ಕಾರಣವಾಗಿತ್ತು. ಇದರ ಮತ್ತೊಂದು ರೂಪಾಂತರಿ ಆವೃತ್ತಿಯೇ ‘ಡೆಲ್ಟಾ ಪ್ಲಸ್' ವೈರಸ್. ಈವರೆಗಿನ ರೂಪಾಂತರಿಗಳಲ್ಲೇ ಡೆಲ್ಟಾ ಪ್ಲಸ್ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ರೂಪಾಂತರಿ ವೈರಸ್ ಮೊದಲು ಪತ್ತೆಯಾದದ್ದು ಯೂರೋಪ್‌ನಲ್ಲಿ. 2021ರ ಮಾರ್ಚ್ ತಿಂಗಳು ಇಂಥದೊAದು ರೂಪಾಂತರಿ ಇದೆ ಎಂದು ಗೊತ್ತಾಗಿತ್ತಾದರೂ ಅದನ್ನು ದೃಢಪಡಿಸಿದ್ದು ಮಾತ್ರ ಜೂನ್ ತಿಂಗಳಲ್ಲಿ. ಇದೇ ತಿಂಗಳು ಭಾರತದಲ್ಲೂ ಡೆಲ್ಟಾ ಪ್ಲಸ್ ವೈರಸ್ ಸೋಂಕು ಪತ್ತೆಯಾಗಿದ್ದು, ಈವರೆಗೆ 40ಕ್ಕೂ ಅಧಿಕ ಮಂದಿಯಲ್ಲಿ ಈ ವೈರಾಣುವಿನ ಲಕ್ಷಣಗಳು ಕಂಡುಬಂದಿವೆ. ಇನ್ನು ಜಗತ್ತಿನಾದ್ಯಂತ 250ಕ್ಕೂ ಅಧಿಕ ಮಂದಿ ಡೆಲ್ಟಾ ಪ್ಲಸ್ ದಾಳಿಗೆ ತುತ್ತಾಗಿದ್ದಾರೆ. ಆರಂಭದಿಂದ ಈ ರೂಪಾಂತರಿಯನ್ನು ‘ಎವೈ-1’ ಅಥವಾ ‘ಬಿ-1.617.2.1’, ‘ಸಾರ್ಸ್-2’, ‘ಅಲ್ಫಾ’, ‘ಬೀಟಾ’ ಹಾಗೂ ‘ಡೆಲ್ಟಾ’ ಎಂದು ಕರೆಯಲಾಗಿದ್ದು, ಈಗ ಅವೆಲ್ಲವುಗಳಿಗಿಂತಲೂ ಪ್ರಬಲವಾಗಿರುವ ತಳಿಗೆ ‘ಡೆಲ್ಟಾ ಪ್ಲಸ್’ ಎಂದು ಹೆಸರಿಡಲಾಗಿದೆ. ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದಂತೆ ದುರ್ಬಲವಾಗುತ್ತಾ ಸಾಗುತ್ತದೆ. ಹೀಗಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅದು ರೂಪಾಂತರ ಹೊಂದುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಯಾಕಿಷ್ಟು ಆತಂಕ?

ಡೆಲ್ಟಾ ಪ್ಲಸ್ ವೈರಸ್ ಅನ್ನು ಈವರೆಗಿನ ಅಪಾಯಕಾರಿ ರೂಪಾಂತರಿ ಎಂದು ಯುರೋಪ್ ವಿಜ್ಞಾನಿಗಳು ಕರೆದಿದ್ದಾರೆ. ಬ್ರಿಟನ್‌ನಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ, ಲಸಿಕೆ ಪಡೆದ ಕೇವಲ ಎರಡೇ ವಾರಗಳಲ್ಲಿ ಸೋಂಕು ಕಂಡುಬಂದಿದೆ. ಇದು ಭಾರತ ಸೇರಿ ಎಲ್ಲ ದೇಶಗಳಲ್ಲೂ ಆತಂಕ ಸೃಷ್ಟಿಸಿದೆ. ಇದೊಂದು ತ್ವರಿತ ಗತಿಯಲ್ಲಿ ಹರಡಬಲ್ಲ ಹಾಗೂ ಅತ್ಯಂತ ಸದೃವಾವಾಗಿರುವ ವೈರಸ್ ಆಗಿದ್ದು, ಇದರಿಂದ ಸೋಂಕು ಉಂಟಾದಾಗ ಲಕ್ಷಣಗಳೂ ವಿಭಿನ್ನವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಚ್ಚರಿ ಏನೆಂದರೆ ಈ ರೂಪಾಂತರಿ ವೈರಸ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಸ್ಪಷ್ಟತೆ ಯಾರಿಗೂ ಇಲ್ಲ. ಹೀಗಾಗಿ ಡೆಲ್ಟಾ ಪ್ಲಸ್ ವೈರಸ್‌ನ ಪ್ರೋಟೀನ್‌ಗಳನ್ನು ಸಂಗ್ರಹಿಸಿ ಪ್ರಯೋಗ ನಡೆಸಲಾಗುತ್ತಿದೆ.

ಈಗಿರುವ ಲಸಿಕೆಗಳೇ ಪರಿಣಾಮಕಾರಿ?

ಭಾರತದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ಲಸಿಕೆಗಳು ಡೆಲ್ಟಾ ಪ್ಲಸ್ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆಯೇ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಈ ಕುರಿತು ಅಧ್ಯಯನ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಮುಂದಾಗಿವೆ. ‘ಈಗಿರುವ ಲಸಿಕೆಗಳು ಡೆಲ್ಟಾ ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಅದೇ ರೀತಿ, ಡೆಲ್ಟಾ ಪ್ಲಸ್ ವಿರುದ್ಧವೂ ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಅಧ್ಯಯನ ನಡೆಸಲಿದ್ದೇವೆ’ ಎಂದು ಎನ್‌ಐವಿ ತಿಳಿಸಿದೆ.

ಎಲ್ಲೆಲ್ಲಿ ಡೆಲ್ಟಾ ಪ್ಲಸ್ ನೆರಳು?

ಡೆಲ್ಟಾ ಪ್ಲಸ್ ರೂಪಾಂತರಿಗಳಿಗಾಗಿ ದೇಶದಾದ್ಯಂತ 45,000ಕ್ಕೂ ಅಧಿಕ ವಂಶವಾಹಿ ಅಧ್ಯಯನಗಳನ್ನು ನಡೆಸಲಾಗಿದೆ. ಈ ವೇಳೆ 40 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಕರ್ನಾಟಕದ ಮೊದಲ ಡೆಲ್ಟಾ ಪ್ಲಸ್ ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿದೆ. ಮಹಾರಾಷ್ಟç ಮೊದಲ ಸ್ಥಾನದಲ್ಲಿದ್ದು, ರಾಜ್ಯದ ರತ್ನಗಿರಿ ಮತ್ತು ಜಲಗಾಂವ್ ಜಿಲ್ಲೆಗಳಲ್ಲಿ 21 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಮಧ್ಯಪ್ರದೇಶದಲ್ಲಿ 6 ಪ್ರಕರಣಗಳು ಪತ್ತೆಯಾಗಿದ್ದು, ಕೇರಳದ ಪಟ್ಟಣಂತಿಟ್ಟ, ಪಾಲಕ್ಕಾಡ್‌ನಲ್ಲಿ ಮೂರು (ನಾಲ್ಕು ವರ್ಷದ ಬಾಲಕನೂ ಸೇರಿ) ಮತ್ತು ತಮಿಳುನಾಡಿನಲ್ಲಿ ಮೂರು, ಪಂಜಾಬ್, ಜಮ್ಮು ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳಲ್ಲೂ ಪ್ರಕರಣಗಳಿವೆ ಎನ್ನಲಾಗಿದ್ದು, ಆ ರಾಜ್ಯಗಳು ಮಾಹಿತಿ ನೀಡಿಲ್ಲ. ಇದೇ ವೇಳೆ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಡೆಲ್ಟಾ ಪ್ಲಸ್ ವೈರಸ್‌ನಿಂದಾಗಿ ಮೃತಪಟ್ಟಿದ್ದು, ಈತನೇ ದೇಶದಲ್ಲಿ ಈ ರೂಪಾಂತರಿಯ ಮೊದಲ ಬಲಿ ಎಂದು ಹೇಳಲಾಗಿದೆ. ಇನ್ನು ಭಾರತ ಬ್ರಿಟನ್, ಅಮೆರಿಕ, ಚೀನಾ, ಜಪಾನ್, ಆಫ್ರಿಕಾ, ಸ್ಕ್ಯಾಂಡಿನೇವಿಯಾ ಮತ್ತು ಪೆಸಿಫಿಕ್ ರಿಮ್ ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ನೆರೆ ರಾಜ್ಯಗಳಿಂದ ನಮಗಿದೆ ಆತಂಕ

ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಸೋಂಕಿತರ ಪತ್ತೆ, ಪ್ರತ್ಯೇಕಿಸುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಂಬAಧಿಸಿದಂತೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ, ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಇದೇ ವೇಳೆ ಪಕ್ಕದ ಕೇರಳದಲ್ಲಿ ಎರಡನೇ ಅಲೆ ಮತ್ತೆ ವ್ಯಾಪಕವಾಗುತ್ತಿದೆ. ಜೊತೆಗೆ ಕೇರಳ ಹಾಗೂ ಮಹಾರಾಷ್ಟದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳೂ ಹೆಚ್ಚಾಗಿವೆ. ಹೀಗಾಗಿ ಎರಡೂ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕಕ್ಕೂ ‘ಡೆಲ್ಟಾ ಪ್ಲಸ್ ಅಪಾಯ’ ಎದುರಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.