News

ಮನೆಯಲ್ಲೇ ಬಕಾಹು ತಯಾರಿಕೆ ಕುರಿತು ಜುಲೈ 28ರಂದು ಆನ್ಲೈನ್ ತರಬೇತಿ

27 July, 2021 11:08 PM IST By:

ದಾವಣಗೆರೆ ನಗರದಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಯಿಂದ, ಅಡಿಕೆ ಪತ್ರಿಕೆ ಸಹಯೋಗದಲ್ಲಿ ಜುಲೈ 28ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ‘ಮನೆಯಲ್ಲೇ ಬಾಳೆಕಾಯಿ ಹುಡಿ (ಬಕಾಹು) ತಯಾರಿಕೆ’ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ (ವೆಬಿನಾರ್) ಹಮ್ಮಿಕೊಳ್ಳಲಾಗಿದೆ.

ಬಕಾಹು ಆಂದೋಲನದ ರೂವಾರಿ ಹಾಗೂ ‘ಅಡಿಕೆ ಪತ್ರಿಕೆ’ ಸಂಪಾದಕರಾಗಿರುವ ಶ್ರೀ ಪಡ್ರೆ ಅವರು ‘ಬಕಾಹು ಆಂದೋಳನ’ ಕುರಿತು ಮಾಹಿತಿ ನೀಡಲಿದ್ದು, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞರಾಗಿರುವ ಬಸವನಗೌಡ ಎಂ.ಜಿ ಅವರು ‘ಬಾಳೆಕಾಯಿಯ ಪೌಷ್ಟಿಕತೆ’ ಕುರಿತು ವಿವರಿಸುವರು. ಮಣ್ಣು ತಜ್ಞರಾಗಿರುವ ಸಣ್ಣಗೌಡ್ರ ಎಚ್.ಎಂ. ಅವರು ‘ಬಾಳೆಕಾಯಿ ಹುಡಿ (ಬಕಾಹು) ತಯಾರಿಸುವ ವಿಧಾನ’ ಕುರಿತು ತಿಳಿಸಿಕೊಡುವರು. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ದೇವರಾಜ ಟಿ.ಎನ್. ಅವರು ಕಾರ್ಯಕ್ರಮದ ನಿರ್ವಹಣೆ ಮಾಡುವರು.

ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮವು ಬುಧವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಆರಂಭವಾಗಲಿದ್ದು, ಆಸಕ್ತರು https://meet.google.com/kzn-ymzy-qda ಈ ಲಿಂಕ್ ಬಳಸಿಕೊಂಡು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.

ಏನಿದು ಬಕಾಹು?

ಬಕಾಹು ಅಥವಾ ಬಾಳೆಕಾಯಿ ಹುಡಿ ಎಂದರೆ ಬಾಳೆಕಾಯಿಂದ ತಯಾರಿಸುವ ಪುಡಿ. ಅನಾದಿ ಕಾಲದಿಂದಲೂ ಈ ಪುಡಿ ಮಕ್ಕಳ ಆಹಾರವಾಗಿ ಬಳಕೆಯಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಅಡುಗೆ ಮನೆಗಳಿಂದ ಮಾಯವಾಗಿದೆ. ಈಗ್ಗೆ ಒಂದು ತಿಂಗಳಿAದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಕಾಹು ಕುರಿತಂತೆ ಬಹುವಾಗಿ ಚರ್ಚೆ ನಡೆಯುತ್ತಿದೆ. ಜೂನ್ ಆರಂಭದಲ್ಲಿ ಕರ್ನಾಟಕದಲ್ಲಿ ಆರಂಭವಾದ ಬಕಾಹು ಆಂದೋಲನವನ್ನು ಅಡಿಕೆ ಪತ್ರಿಕೆಯ ಸಂಪಾದಕರಾಗಿರುವ ಶ್ರೀ ಪಡ್ರೆ ಅವರು ತುಂಬು ಉತ್ಸಾಹದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಶ್ರೀ ಪಡ್ರೆ ಅವರ ಕಾಳಜಿ ಹಾಗೂ ದಕ್ಷಿಣ ಕನ್ನಡ ಹಾಗೂ ಇತರೆ ಕರಾವಳಿ ಜಿಲ್ಲೆಗಳು ಮತ್ತು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳ ಸಾರ್ವಜನಿಕರು, ಬಾಳೆ ಬೆಳೆಗಾರರು ತೋರುತ್ತಿರುವ ಆಸಕ್ತಿ ಹಾಗೂ ಸ್ವತಃ ಬಳೆ ಕಾಯಿ ಹುಡಿ ತಯಾರಿಸಿ, ಬಗೆ ಬಗೆಯ ತಿನಿಸುಗಳನ್ನು ಮಾಡಿ ಶ್ರೀ ಪಡ್ರೆ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ತೋರುತ್ತಿರುವ ಸ್ಪಂದನೆಯಿAದಾಗಿ ಬಕಾಹು ಒಂದು ಬೃಹತ್ ಆಂದೋಲನವಾಗಿ ಮಾರ್ಪಟ್ಟಿದೆ. ಮೊನ್ನೆಯಷ್ಟೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ಬಕಾಹು ಬಗ್ಗೆ ಪ್ರಸ್ತಾಪಿಸುವ ಮೂಲಕ ಬಕಾಹು ಈಗ ದೇಶದೆಲ್ಲೆಡೆ ಮನೆ ಮಾತಾಗಿದೆ.

ಒಂದು ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರವಾಗಿರುವ ಬಾಳೆ ಕಾಯಿ ಹುಡಿ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಉದ್ದೇಶದಿಂದ ಆಯೋಜಿಸಿರುವ ತರಬೇತಿ ಕಾರ್ಯಾಗಾರದಲ್ಲಿ ಬಾಳೆ ಬೆಳೆಗಾರರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆಯುವಂತೆ ಐಸಿಎಂಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾಗಿರುವ ಡಾ.ದೇವರಾಜ ಟಿ.ಎನ್. ಅವರು ಮನವಿ ಮಾಡಿದ್ದಾರೆ.