News

ಬಿದಿರು ಕೃಷಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಲಿರುವ ಕಾರ್ಯಾಗಾರ

04 June, 2021 3:13 PM IST By: KJ Staff
ಸಾಂದರ್ಭಿಕ ಚಿತ್ರ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂ.5ರಂದು ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕದಲ್ಲಿ ಬಿದಿರಿನ ಕೃಷಿ - ನೆಡುವಿಕೆಯಿಂದ ಲಾಭದವರೆಗೆ’ ವಿಷಯ ಕುರಿತು ಅಂತರ್ಜಾಲದ ಮೂಲಕ ತರಬೇತಿ ಕಾರ್ಯಾಗಾರ (ವೆಬಿನಾರ್) ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಬಿದಿರು ನಿಯೋಗ, ಐ.ಪಿ.ಐ.ಆರ್.ಟಿ, ಕೊಡಗು ಜಿಲ್ಲೆ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಹಾಗೂ ಕಾವೇರಿ ಕೂಗು ಸ್ವಯಂಸೇವಕರ ಸಂಘದ ಸಹಭಾಗಿತ್ವದಲ್ಲಿ ಕಾರ್ಯಾಗಾರ (ವೆಬಿನಾರ್) ಹಮ್ಮಿಕೊಳ್ಳಲಾಗಿದೆ.  ಬಿದಿರನ್ನು ಬೆಳೆಯುವುದು ಮತ್ತು ಅದರಿಂದ ಇರುವ ಲಾಭಗಳು, ಬಿದಿರು ನಾಟಿ, ಬೆಳೆ ನಿರ್ವಹಣೆ, ಉಪಚಾರ, ರೋಗಗಳು ಹಾಗೂ ಅವುಗಳ ನಿವಾರಣೆ, ಕೀಟ ಬಾಧೆ ಮತ್ತು ಪರಿಹಾರ ಸೇರಿ ಸಮಗ್ರ ಬಿದಿರು ಕೃಷಿಗೆ ಸಂಬಂಧಿಸಿದಂತೆ ವಿಷಯ ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ.

ಈ ಕಾರ್ಯಾಗಾರವು ಝೂಮ್ ವೇದಿಕೆಯಲ್ಲಿ ನಡೆಯಲಿದ್ದು, ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ 450 ರೈತರ ಭಾಗವಹಿಸುವಿಕೆಗೆ ಮಾತ್ರ ಅವಕಾಶವಿರಲಿದೆ. ಆಸಕ್ತ ರೈತರು https://nextwealth.zoom.us/j/96480082459 ಲಿಂಕ್ (ಸ್ಮಾರ್ಟ್ ಫೋನಿನಲ್ಲಿ ಝೂಮ್ ಅಪ್ಲಿಕೇಷನ್ ಇನ್‌ಸ್ಟಾಲ್ ಆಗಿರಬೇಕು) ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರವು ಮೂರು ಅವಧಿಗಳಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಅರಣ್ಯ ವಿಭಾಗದ ಮುಖ್ಯಸಸ್ಥರು ಹಾಗೂ ಅರಣ್ಯ ಪ್ರಧಾನ ಸಂರಕ್ಷಣಾಧಿಕಾರಿಗಳಾಗಿರುವ ಸಂಜಯ್ ಮೋಹನ್ ಅವರು ವೆಬಿನಾರ್ ಅನ್ನು ಉದ್ಘಾಟಿಸಲಿದ್ದಾರೆ.

ಮೊದಲ ಅವಧಿ: ಮೊದಲ ಅವಧಿಯಲ್ಲಿ ‘ಅತ್ಯುತ್ತಮ ಕೃಷಿ ಪದ್ಧತಿಗಳ ಬಳಕೆ’ ವಿಷಯದ ಕುರಿತು ಚರ್ಚೆ, ಮಾಹಿತಿ ಹಂಚಿಕೆ ನಡೆಯಲಿದೆ. ಈ ವೇಳೆ ಕೃಷಿ ಅರಣ್ಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಧ್ಯಾಪಕರಾಗಿರುವ ಡಾ.ರಾಮಕೃಷ್ಣ ಹೆಗ್ಡೆ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಗ್ರೋ ಮೋರ್ ಬಯೋಟೆಕ್ ಲಿಮಿಟೆಡ್ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ಎನ್.ಭಾರತಿ ಅವರು ತಜ್ಞ ಸಮಿತಿಯ ಭಾಷಣಕಾರರಾಗಿ ಪಾಲ್ಗೊಳ್ಳುವರು.

ಎರಡನೇ ಅವಧಿ: ವೆಬಿನನಾರ್‌ನ ಎರಡನೇ ಅವಧಿಯ ಕಾರ್ಯಕ್ರಮದಲ್ಲಿ ‘ಬಿದಿರಿನ ಸಂರಕ್ಷಣೆ ಮತ್ತು ವ್ಯಾಪಾರ’ ವಿಷಯದ ಕುರಿತು ಚರ್ಚೆ ನಡೆಯಲಿದೆ. ಬಿದಿರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿರುವ ವಿಪಿನ್ ಚಾವ್ಲಾ ಅವರು ಪ್ರಧಾನ ಭಾಷಣ ಮಾಡುವರು. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥರಾಗಿರುವ (ಡೀನ್) ಡಾ.ಕುಶಾಲಪ್ಪ ಅವರು ತಜ್ಞ ಸಮಿತಿಯ ಭಾಷಣಕಾರರಾಗಿ ಭಾಗವಹಿಸುವರು.

3ನೇ ಅವಧಿ: ಕಾರ್ಯಾಗಾರದ ಮೂರನೇ ಅವಧಿಯಲ್ಲಿ ‘ಮಾರುಕಟ್ಟೆ ಸಂಪರ್ಕಗಳು’ ವಿಷಯದ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಈ ವೇಳೆ ಗ್ರೋ ಮೋರ್ ಬಯೋಟೆಕ್ ಲಿಮಿಟೆಡ್ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ಎನ್.ಭಾರತಿ ಅವರು ಪ್ರಧಾನ ಭಾಷಣಕಾರರಾಗಿ ಭಭಾಗವಹಿಸಿ, ರೈತರಿಗೆ ಬಿದಿರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಡ್ಯದ ಸಿಸಿ ಎಂಟರ್‌ಪ್ರೆöÊಸಸ್‌ನ ಬಿದಿರಿನ ಇದ್ದಿಲು ಘಟಕದ ಮುಖ್ಯಸ್ಥರಾಗಿರುವ ಕೆ.ಪಿ.ಕಲ್ಲೇಶ್ ಅವರು ತಜ್ಞ ಸಮಿತಿಯ ಭಾಷಣಕಾರರಾಗಿ ಭಾಗವಹಿಸುವರು.

ಇವರೊಂದಿಗೆ ಸ್ಪೆಕ್ಟಲೈಟ್ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಮಹಾದೇವ್, ಇಂಡಸ್ಟಿಸ್ ಫೌಂಡೇಷನ್‌ನ ಸಹ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ಟ್ರಸ್ಟಿ ನೀಲಂ ಚಿಬ್ಬರ್ ಅವರು ಗಣ್ಯ ಅತಿಥಿಗಳಾಗಿ ಭಾಗವಹಿಸುವರು. ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ರಾಷ್ಟ್ರೀಯ  ಬಿದಿರು ನಿಯೋಗದ ಕರ್ನಾಟಕ ರಾಜ್ಯ ಮಿಷನ್ ನಿರ್ದೇಶಕರಾಗಿರುವ ರಾಜ್‌ಕುಮಾರ್ ಶ್ರೀವಾಸ್ತವ ಅವರು ಒಂದನಾರ್ಪಣೆ ಸಲ್ಲಿಸುವರು.

ಬಿದಿರು ಕೂಡ ಪ್ರಮುಖ ಬೆಳೆ

ಬಿದಿರು ಒಂದು ಪ್ರಮುಖ ಅರಣ್ಯ ಬೆಳೆಯಾಗಿದ್ದು, ಜಗತ್ತಿನ ನಾನಾದೇಶಗಳಲ್ಲಿ ರೈತರು ಇದನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಭಾರತದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಬುಡಕಟ್ಟು ಸಮುದಾಯಗಳು ವಾಸವಿರುವ ಅರಣ್ಯ ಭೂಮಿಯಲ್ಲಿ ಬಿದಿರು ಬೆಳೆಯಲಾಗುತ್ತದೆ. ಆದರೆ ಒಂದು ಕೃಷಿಯನ್ನಾಗಿ ಭಾರತದಲ್ಲಿ ಬಿದಿರು ಬೆಳೆಯನ್ನು ಸಂಪೂರ್ಣ ಮನಸ್ಸಿನಿಂದ ಸ್ವೀಕರಿಸಿಲ್ಲ. ಹೀಗಾಗಿ ಬಿದಿರು ಬೆಳೆಯ ಮಹತ್ವದ ಕುರಿತು ರೈತರಿಗೆ ತಿಳಿಸುವ ಉದ್ದೇಶದಿಂದ ಈ ವೆಬಿನಾರ್ ಹಮ್ಮಿಕೊಳ್ಳಲಾಗಿದೆ. ರೈತ ಸಮುದಾಯದೊಳಗೆ ಈ ಮಾಹಿತಿ ಪಸರಿಸಲು ವಿಶ್ವ ಪರಿಸರ ದಿನಕ್ಕಿಂತಲೂ ಉತ್ತಮವಾದ ಸಂದರ್ಭ ಮತ್ತೊಂದಿಲ್ಲ ಎಂಬುದು ನಮ್ಮ ಅನಿಸಿಕೆ ಎಂದು ಆಯೋಜಕರು ತಿಳಿಸಿದ್ದಾರೆ.

ಜೂಮ್ ಲಿಂಕ್: https://nextwealth.zoom.us/j/96480082459

ಯೂಟ್ಯೂಬ್ ಲಿಂಕ್: https://www.youtube.com/watch?v=J0TFqp2guCo