ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಶುಕ್ರವಾರದಿಂದ ಮಳೆ ಬಿಡುವು ನೀಡುವ ಸಾಧ್ಯತೆ ಇದೆ. ಮಳೆ ತಗ್ಗಿದರೂ ಶುಕ್ರವಾರ ಅಲ್ಲಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣವಿರಲಿದೆ. ಅ. 19ಕ್ಕೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ ಇದೆ. ಆದರೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ಐದು ದಿನಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸುರಿದ ಮಳೆಯ ಆರ್ಭಟದಿಂದಾಗಿ ಜನಜೀವನ ಅಸ್ತವ್ಯಸ್ತ ಉಂಟಾಗಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿಯೂ ಸಹ ಮಳೆ ಮುನಿಸಿಕೊಂಡಿದ್ದರಿಂದ ಸಾವಿರಾರು ಜನರು ಅತಂತ್ರರಾಗಿದ್ದಾರೆ. ಲಕ್ಷಾಂತರ ಎಕರೆ ಬೆಳೆ ಹಾಳಾಗಿದೆ.
ಮುಂಬಯಿಯಲ್ಲೂ ಮಳೆ: ಮುಂದಿನ 48 ಗಂಟೆಗಳಲ್ಲಿ ಮುಂಬಯಿ ಸೇರಿದಂತೆ ದಕ್ಷಿಣ ಕೊಂಕಣ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರ, ಕೊಂಕಣ ತೀರ, ದ. ಗುಜರಾತ್ ತೀರಗಳಿಗೆ ಸೈಕ್ಲೋನ್ ಅಪ್ಪಳಿಸಲಿದೆ.
ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ, ಪುಣೆ, ಸಾತಾರ, ಕೊಲ್ಹಾಪುರ ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ 100 ಮಿ.ಮೀ ಮಳೆಯಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಈವರೆಗೆ ತೆಲಂಗಾಣದಲ್ಲಿ ಶೇ.143 ಅಧಿಕ ಹಾಗೂ ಮಹಾರಾಷ್ಟ್ರದಲ್ಲಿ ಶೇ.43ರಷ್ಟು ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ