ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಳೆದ ನಾಲ್ಕೈದು ದಿನಗಳಿಂದ ಕರ್ನಾಟಕದಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಲೇ ಇದೆ. ಇನ್ನೂ 48 ಗಂಟೆಗಳ ಕಾಲ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಲಿರುವುದರಿಂದ ಆರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ ಇರುವುದರಿಂದ ಅ.15ರವರೆಗೆ ‘ರೆಡ್ ಅಲರ್ಟ್’ ಮುಂದುವರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಕಲಬುರಗಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಬೀದರ್, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಹಾಸನ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಕರಾವಳಿಯಲ್ಲಿ ಅ.16ರವರೆಗೆ ಹೆಚ್ಚು ಮಳೆಯಾಗಲಿದೆ. ಈ ಭಾಗದಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದ
ರಿಂದ ಮೀನುಗಾರರು ಕಡಲಿಗೆ ಇಳಿಯ ಬಾರದು ಎಂದು ಇಲಾಖೆ ಎಚ್ಚರಿಸಿದೆ.
ಸೊನ್ನ ಬ್ಯಾರೇಜ್ ನಿಂದ 2.23 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಭೀಮಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ಒಳ ಹರಿವು ಹೆಚ್ಚಾಗಿದ್ದು, ನದಿಗೆ 2.23 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಬಿಡಲಾಗಿದೆ. ಇದರಿಂದ ಸೊನ್ನ ಬ್ಯಾರೇಜಿಗೆ 1.98 ಲಕ್ಷ ಕ್ಯೂಸೆಕ್ ನೀರು ಒಳ ಹರಿವು ಬರುತ್ತಿದ್ದು, ಗುರುವಾರ ಬೆಳಿಗ್ಗೆ 8 ಗಂಟೆಗೆ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ 2.23 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತರ ಜಗನ್ನಾಥ ಹಲಿಂಗೆ ತಿಳಿಸಿದ್ದಾರೆ.
ಹೀಗಾಗಿ ಬ್ಯಾರೇಜಿನ ಕೆಳ ಪಾತ್ರದಲ್ಲಿ ಬರುವ ಅಫಜಲಪೂರ, ಚಿತ್ತಾಪುರ, ಜೇವರ್ಗಿ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ನದಿ ಪಾತ್ರದ ಜನರು ನದಿ ದಂಡೆಗೆ ಹೋಗಬಾರದು ಮತ್ತು ತಮ್ಮ ಜಾನುವಾರಗಳೊಂದಿಗೆ ಸುರಕ್ಷತಾ ಕ್ರಮದೊಂದಿಗೆ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.