News

ಮಾವು ದ್ರಾಕ್ಷಿ ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ

04 July, 2020 8:31 PM IST By:

ತೋಟಗಾರಿಕೆ ಇಲಾಖೆ ವತಿಯಿಂದ 2020ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಒಳಪಡಿಸಲಾಗಿದ್ದು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ತಾಲೂಕುಗಳಿಗೆ ಮಾವು ಮತ್ತು ದ್ರಾಕ್ಷಿ ಬೆಳೆಗಳು ಹಾಗೂ ನೆಲಮಂಗಲ ತಾಲೂಕಿಗೆ ಮಾವು ಬೆಳೆಯನ್ನು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಒಳಪಡಿಸಿದೆ.

ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ 2,80,000 ರೂ. ಗಳಾಗಿದ್ದು, ಶೇ.5ರಷ್ಟು ವಿಮಾ ಕಂತಿನ ಮೊತ್ತ 14,000 ರೂ. ಗಳಾಗಿರುತ್ತದೆ. ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ 80,000 ರೂ.ಗಳಾಗಿದ್ದು, ಶೇ.5ರಷ್ಟು ವಿಮಾ ಕಂತಿನ ಮೊತ್ತ 4,000 ರೂ.ಗಳಾಗಿರುತ್ತದೆ.

ಜಿಲ್ಲೆಯಲ್ಲಿ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ನೋಂದಣಿ ಮಾಡಿಸಿಕೊಳ್ಳಬಹುದಾಗಿದ್ದು, ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಸಾಲ ಮಂಜೂರಾದ ಎಲ್ಲ ರೈತರು ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು.

ಆಯಾ ತಾಲೂಕಿಗೆ ಸಂಬಂಧಪಟ್ಟ ಬೆಳೆಗಳಿಗೆ ವಿಮೆ ಮಾಡಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್‌ ಖಾತೆ ಪುಸ್ತಕ, ಆಧಾರ್‌ ನಕಲು ಪ್ರತಿಗಳನ್ನು ಮತ್ತು ಸ್ವಯಂಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಆಯಾ ತಾಲೂಕಿನ ಯಾವುದಾದರೂ ರಾಷ್ಟ್ರೀಯ ಅಧಿಕೃತ ಬ್ಯಾಂಕುಗಳಲ್ಲಿ(ಖಾತೆ ಹೊಂದಿರುವ ಬ್ಯಾಂಕ್‌) ಮಾವು ಬೆಳೆಯನ್ನು ಜು. 31ರೊಳಗಾಗಿ ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಮಟ್ಟದ ಹಿರಿಯ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು.