ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಲಪ್ರಳಯ ಉಂಟಾಗಿರುವ ಬೆನ್ನಲ್ಲೆ ಮತ್ತೆ ಮಳೆ ಭೀತಿ ಎದುರಾಗಿದೆ. ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಅ. 20ರಿಂದ ಮತ್ತೆ ಮಳೆಯ ಅಬ್ಬರ ಶುರುವಾಗಲಿದ್ದು, ಮೂರು ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆ ಇದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್ 20 ರಿಂದ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಬೆಳಗಾವಿ, ರಾಯಚೂರ, ಬಳ್ಳಾರಿ, ಗದಗ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಯಲ್ಲಿ ಸೋಮವಾರ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಆದರೆ ಮಂಗಳವಾರದಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಅಕ್ಟೋಬರ್ 21 ರಂದು ಯೆಲ್ಲೋ ಅಲರ್ಟ್, ಅಕ್ಟೋಬರ್ 22 ರಿಂದ ಮುಂದಿನ 48 ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಕ್ಟೋಬರ್ 20 ರಂದು ಕೊಪ್ಪಳದಲ್ಲಿ ಅಕ್ಟೋಬರ್ 21 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ,ಧಾರವಾಡ, ಗದಗ, ಕಾವೇರಿ ಮತ್ತು ವಿಜಯಪುರದಲ್ಲಿ ಅಕ್ಟೋಬರ್ 22 ರಿಂದ ಮುಂದಿನ 48 ಗಂಟೆಗಳ ಕಾಲ, ಬೀದರ್ ಹಾಗೂ ಕಲಬುರಗಿಯಲ್ಲಿ ಅಕ್ಟೋಬರ್ 22 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅಕ್ಟೋಬರ್ 21 ರಿಂದ ಮುಂದಿನ 3 ದಿನ ಹಾಗೂ ಶಿವಮೊಗ್ಗದಲ್ಲಿ ಅಕ್ಟೋಬರ್ 21 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಲ್ಕೈದು ದಿನಗಳ ಹಿಂದೆ ದಶಕದಲ್ಲೇ ಅತ್ಯಧಿಕ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕೆಲ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಮಹಾರಾಷ್ಟ್ರದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ನದಿ ತೀರದ ಗ್ರಾಮಗಳು ಈಗಾಗಲೇ ಮುಳುಗಡೆಯಾಗಿದೆ. ಈಗಾಗಲೇ ಮಳೆಯಿಂದ ತತ್ತರಿಸಿ ಹೋದ ಕೆಲವು ಜಿಲ್ಲೆಗಳು ಈಗ ಮತ್ತೆ ಮಳೆಯ ಮುನ್ಸೂಚನೆ ಕೇಳಿ ಆತಂಕಗೊಂಡಿದ್ದಾರೆ.