News

ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಸೈಕ್ಲೋನ್ ಭೀತಿ; ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ

01 October, 2021 11:07 PM IST By:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಇನ್ನೂ 4 ದಿನ ಮಳೆಯಾಗುವ ಸಾಧ್ಯತೆಯಿದೆ. ಭಾರತಕ್ಕೆ ಅಪ್ಪಳಿಸಿರುವ ಗುಲಾಬ್ ಚಂಡಮಾರುತದ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದಂತೆ ಮತ್ತೆ ಶಾಹೀನ್ ಸೈಕ್ಲೋನ್ ಭೀತಿ ಎದುರಾಗಿದೆ. ಗುಲಾಬ್  ಚಂಡಮಾರುತದ ಪರಿಣಾಮದಿಂದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಶಾಹೀನ್ ಚಂಡಮಾರುತ ಅಪ್ಪಳಿಸಲು ಸಿದ್ಧವಾಗಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗುಜರಾತ್ ಕರಾವಳಿಗೆ ಶಾಹೀನ್ ಚಂಡಮಾರುತ   ಅಪ್ಪಳಿಸುವ ಸಾಧ್ಯತೆಯಿದೆ. ಶಾಹೀನ್ ಚಂಡಮಾರುತವು ಈಶಾನ್ಯ ಅರಬ್ಬಿ ಸಮುದ್ರ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ತೀವ್ರಗೊಂಡಿದೆ. ಚಂಡಮಾರುತದ ಬಿಕ್ಕಟ್ಟಿನ ದೃಷ್ಟಿಯಿಂದ, ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ಗುಜರಾತ್ ಸರ್ಕಾರ ಈ ಕುರಿತಂತೆ ಅಧಿಕಾರಿಗಳು ಮತ್ತು NDRF ತಂಡದೊಂದಿಗೆ ಸಭೆ ನಡೆಸಿದೆ. ಅದೇ ಸಮಯದಲ್ಲಿ, ಹವಾಮಾನ ಇಲಾಖೆ ಕೂಡ ಗುಜರಾತ್‌ನಲ್ಲಿ 3 ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

ಗಾಳಿಯು ಗುಜರಾತಿನ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 60-150 ಕಿಮೀ ವೇಗದಲ್ಲಿ ಚಲಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 12 ಗಂಟೆಗಳಲ್ಲಿ ಈಶಾನ್ಯ ಅರಬ್ಬಿ ಸಮುದ್ರ ಹಾಗೂ ಗುಜರಾತ್ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಐಎಂಡಿ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಶಾಹೀನ್ ಚಂಡಮಾರುತದ ಪರಿಣಾಮದಿಂದ ಗುಜರಾತ್, ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ ಭಾಗದಲ್ಲಿ ವಿಪರೀತ ಮಳೆಯಾಗಲಿದೆ. ಹಾಗೇ, ಪಶ್ಚಿಮ ಬಂಗಾಳ. ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್​ಗಢ, ಜಾರ್ಖಂಡ್, ಆಂಧ್ರಪ್ರದೇಶ, ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಜೊತೆಗೆ ತೆಲಂಗಾಣ, ತಮಿಳುನಾಡು, ಕೇರಳ, ಪುದುಚೆರಿ, ಮಾಹೆಯಲ್ಲಿ ಕೂಡ ಶಾಹೀನ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಲಿದೆ.