News

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ 2 ಕೃಷಿ ಮಸೂದೆಗಳ ಅಂಗೀಕಾರ- ಮಸೂದೆಗಳಿಂದ ರೈತರಿಗೆ ತೊಂದರೆಯಿಲ್ಲ- ನರೇಂದ್ರ ಮೋದಿ

20 September, 2020 7:18 PM IST By:

ಭಾರೀ ವಿರೋಧದ ನಡುವೆಯೇ ಕೃಷಿ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಘಟನೆಯನ್ನು ಭಾರತೀಯ ಕೃಷಿ ಇತಿಹಾಸದಲ್ಲಿ ಇದೊಂದು  ಐತಿಹಾಸಿಕ ಕ್ಷಣವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.

ಭಾನುವಾರ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲು ಉದ್ದೇಶಿಸಿರುವ ಪ್ರಮುಖ ಮೂರು ಕೃಷಿ ಮಸೂದೆಗಳಲ್ಲಿ ಎರಡು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ನಂತರ ಟ್ವೀಟ್‌ ಮಾಡಿದ ಅವರು, ಭಾರತೀಯ ಕೃಷಿ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಭಾರತೀಯ ಕೃಷಿ ಇತಿಹಾಸದಲ್ಲಿ ದೊಡ್ಡ ತಿರುವು ಎಂದು ಬಣ್ಣಿಸಿದ್ದಾರೆ. ಶ್ರಮಜೀವಿಗಳಾದ ರೈತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇನ್ನು, ಕೃಷಿ ಕ್ಷೇತ್ರದ ಸಂಪೂರ್ಣ ಬದಲಾವಣೆಯನ್ನು ಈ ಮಸೂದೆಗಳು ಖಚಿತಪಡಿಸುತ್ತವೆ ಹಾಗೂ ಕೋಟ್ಯಾಂತರ ರೈತರ ಬದುಕು ಸಬಲೀಕರಣವಾಗುತ್ತದೆ. ಭಾರತೀಯ ಕೃಷಿ ಕ್ಷೇತ್ರಕ್ಕೆ ತಾಂತ್ರಿಕ ಮತ್ತು ರಚನಾತ್ಮಕ ನವೀಕರಣಗಳ ಅಗತ್ಯವಿದ್ದು, ಉತ್ತಮ ಸಾಧನಗಳನ್ನು ಬಳಸಿಕೊಂಡು ರೈತರು ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಈ ಮಸೂದೆಗಳು ದಾರಿ ಮಾಡಿಕೊಡುತ್ತವೆ ಎಂದಿದ್ದಾರೆ. ದಶಕಗಳಿಂದ, ಭಾರತದ ರೈತ ವಿವಿಧ ನಿರ್ಬಂಧಗಳು ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಂಗಾಲಾಗಿದ್ದ. ಸಂಸತ್ತು ಅಂಗೀಕರಿಸಿದ ಮಸೂದೆಗಳು ರೈತರನ್ನು ಇಂತಹ ತೊಂದರೆಗಳಿಂದ ಮುಕ್ತಗೊಳಿಸುತ್ತವೆ. ಈ ಮಸೂದೆಗಳು ಕೃಷಿ ಕ್ಷೇತ್ರವನ್ನು ಪರಿವರ್ತಿಸಲು ಮತ್ತು ಉತ್ತಮ ಜೀವನವನ್ನು ನಡೆಸಲು ರೈತರಿಗೆ ಅಧಿಕಾರ ನೀಡುವ ಉದ್ದೇಶವನ್ನು ಹೊಂದಿವೆ ಎಂದು ಅವರು ಹೇಳಿದರು.

ಕನಿಷ್ಠ ಬೆಂಬಲ ಬೆಲೆ ಕುರಿತಾಗಿ ರೈತರಿಗೆ ಭರವಸೆ ನೀಡಿರುವ ಅವರು, ಈ ವ್ಯವಸ್ಥೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಮತ್ತು ಮಸೂದೆಗಳ ಅಂಗೀಕಾರವು ಅವುಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಎಂಎಸ್‌ಪಿ ವ್ಯವಸ್ಥೆ ರದ್ದಾಗುವುದಿಲ್ಲ, ಸರಕಾರದಿಂದ ಕೃಷಿ ಉತ್ಪನ್ನಗಳ ಖರೀದಿ ಮುಂದುವರಿಯುತ್ತದೆ ಎಂದರು.

ವಿರೋಧ ಪಕ್ಷಗಳ ಭಾರೀ ಗಲಾಟೆ ಹಾಗೂ ಪ್ರತಿಭಟನೆ ನಡುವೆಯೇ ಕೇಂದ್ರದ ಮೂರು ಕೃಷಿ ಮಸೂದೆಗಳ ಪೈಕಿ ಎರಡು ಪ್ರಮುಖ ಮಸೂದೆಗಳಿಗೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಗಿದೆ. ಈಗ ರಾಷ್ಟ್ರಪತಿ ಅವರ ಅಂಕಿತವೊಂದೇ ಬಾಕಿಯಿದ್ದು, ಶೀಘ್ರದಲ್ಲಿ ಮಸೂದೆಗಳು ಕಾನೂನು ರೂಪ ಪಡೆಯಲಿವೆ.