News

ವಿಕ ಸೂಪರ್‌ ಸ್ಟಾರ್‌ ರೈತ ಶುಭಾರಂಭ

05 October, 2018 11:47 AM IST By:

ಬೆಂಗಳೂರು: ನಾಡಿನ ರೈತರ ಸಬಲೀಕರಣ ಹಾಗೂ ಕೃಷಿ ಬದುಕಿಗೆ ಪ್ರೇರಣೆ-ಸ್ಫೂರ್ತಿ ತುಂಬುವ ಉದ್ದೇಶದಿಂದ ವಿಜಯ ಕರ್ನಾಟಕ ಹಮ್ಮಿಕೊಂಡಿರುವ 'ವಿಕ ಸೂಪರ್‌ ಸ್ಟಾರ್‌ ರೈತ' ವಿನೂತನ ಕಾರ್ಯಕ್ರಮಕ್ಕೆ ಗುರುವಾರ ಬೆಂಗಳೂರಿನಲ್ಲಿ ವಿಧ್ಯುಕ್ತ ಚಾಲನೆ ದೊರೆಯಿತು.

ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರು ಲೋಗೋ ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಂಧಿ ಭವನದ ಸಭಾಂಗಣದಲ್ಲಿ ನಡೆದ ಅಪರೂಪದ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಿಗಳು, ಬೇಸಾಯದ ಬದುಕಿಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು, ಕೃಷಿ ತಜ್ಞರು, ಪ್ರಗತಿಪರ ರೈತರು ಸಾಕ್ಷೀಕರಿಸಿದರು.

ರೈತನನ್ನು ನಾವು ಅನ್ನದಾತ, ಜೀವದಾತ, ದೇಶದ ಬೆನ್ನೆಲುಬು ಎಂಬೆಲ್ಲಾ ನಾಮಾಂಕಿತಗಳಿಂದ ಹೊಗಳುತ್ತೇವೆ. ಆದರೆ, ಅಂತಹ ರೈತನ ಸ್ಥಿತಿ ಈಗ ಹೇಗಿದೆ? ಕೃಷಿ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ರೈತರ ಆತ್ಮಹತ್ಯೆ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಕೊರಗು. ಕೃಷಿ ಕ್ಷೇತ್ರ ಸಂಕಷ್ಟ- ಸಂದಿಗ್ಧತೆಗೆ ಸಿಲುಕಿರುವ ಕಾಲಘಟ್ಟದಲ್ಲಿಯೂ ಅನೇಕರು ಅತ್ಯುತ್ತಮ ಸಾಧನೆ ಮಾಡಿ ಎಲೆಮರೆಕಾಯಿಯಂತೆ ಉಳಿಯುತ್ತಾರೆ. ಅಂತಹ ಮಾದರಿ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಆ ಮೂಲಕ ಸಾವಿರಾರು ರೈತರಿಗೆ ಪ್ರೇರಣೆ ನೀಡುವಂತಹ ವಿಕ ಪ್ರಯತ್ನದ ಬಗ್ಗೆ ಇಡೀ ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.

''ಲಕ್ಷಾಂತರ ರೈತರು ಕೃಷಿಯಿಂದ ವಿಮುಖವಾಗುತ್ತಿರುವ ಸಂಕೀರ್ಣ ಸನ್ನಿವೇಶದಲ್ಲಿ ವಿಜಯ ಕರ್ನಾಟಕವು 'ಸೂಪರ್‌ ಸ್ಟಾರ್‌ ರೈತ' ಕಾರ್ಯಕ್ರಮದ ಮೂಲಕ ಮಾದರಿ ರೈತರನ್ನು ಗುರುತಿಸುವ ಮಹತ್ತರ ಕೆಲಸ ನಿರ್ವಹಿಸುತ್ತಿದೆ. ಇದಕ್ಕಾಗಿ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ,'' ಹೇಳಿದ ಮೂವರು ಸಚಿವರು, ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಪತ್ರಿಕೆಯ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ವಿನೂತನ ಪ್ರಯತ್ನಕ್ಕೆ ಕೃಷಿ ತಜ್ಞರು, ಅಧಿಕಾರಿಗಳು, ವಿಜ್ಞಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ಘನತೆಯನ್ನು ಎತ್ತಿಹಿಡಿಯುವ ಪತ್ರಿಕೆಯ ಸೇವೆ ಶ್ಲಾಘನೀಯವಾದುದು. ಅಲ್ಲದೆ, ರೈತರು ಹಾಗೂ ತಜ್ಞರ ನಡುವೆ ಸಂವಾದ ಏರ್ಪಡಿಸುವ ಮೂಲಕ ತಮ್ಮ ದನಿಯನ್ನು ಸರಕಾರದ ಮಟ್ಟಕ್ಕೆ ತಲುಪಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.


ಸ್ಟಾರ್‌ ಕೃಷಿಕರು ಯಾರು?

ರೈತರಿಂದಲೇ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾದರಿ ರೈತರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ 'ವಿಕ ಸೂಪರ್‌ ಸ್ಟಾರ್‌ ರೈತ' ಕಾರ್ಯಕ್ರಮ ಒಂದು ತಿಂಗಳ ಕಾಲ ರಾಜ್ಯಾದ್ಯಂತ ನಡೆಯಲಿದೆ. 30 ಜಿಲ್ಲೆಗಳಲ್ಲೂ ಆದರ್ಶ ಕೃಷಿಕರನ್ನು ಗುರುತಿಸಲಾಗುತ್ತದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಎರಡು ಹಂತದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


ಕೃಷಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿದೆ


ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಕೃಷಿ ನೀತಿ ರೂಪಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಪ್ರತಿಪಾದಿಸಿದರು.

''ಸಮ್ಮಿಶ್ರ ಸರಕಾರ ಸಾಲ ಮನ್ನಾ ಮಾಡಿದ ನಂತರವೂ ರೈತರ ಆತ್ಮಹತ್ಯೆ ನಿಂತಿಲ್ಲ.ಇದರಲ್ಲಿ ಯಾರ ತಪ್ಪಿದೆ, ಏನು ಲೋಪವಿದೆ ಎಂಬುದನ್ನು ಹುಡುಕುವುದೇ ಸಂಕೀರ್ಣವಾದುದು. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದಂತಹ ಜಿಲ್ಲೆಗಳಲ್ಲಿ 1200 ಅಡಿ ಕೊಳವೆಬಾವಿ ಕೊರೆದು ಬೆಳೆ ಬೆಳೆಯುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆದರೆ, ನೀರಾವರಿ ಪ್ರದೇಶ ಹೊಂದಿರುವ ಜಿಲ್ಲೆಗಳಲ್ಲಿ ಆತ್ಮಹತ್ಯೆ ಹೆಚ್ಚು ನಡೆಯುತ್ತಿರುವುದು ಕಳವಳಕಾರಿ ಸಂಗತಿ,'' ಎಂದರು.

''ಒಂದೆಡೆ ನಾವು ಶೂನ್ಯ ಬಂಡವಾಳ ಕೃಷಿ ಪದ್ಧತಿ ಅನುಸರಿಸಬೇಕು. ಮಣ್ಣಿನ ಆರೋಗ್ಯ ಕಾಪಾಡುವುದರ ಜತೆಗೆ, ಕಡಿಮೆ ಬಂಡವಾಳ ಹೂಡಿ ಹೆಚ್ಚು ಉತ್ಪಾದನೆ ಮಾಡಬೇಕು ಎನ್ನುತ್ತೇವೆ. ಮತ್ತೊಂದೆಡೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವೈಜ್ಞಾನಿಕ ಕ್ರಮ ಅನುಸರಿಸಿ ನೀರಿನ ಮಿತ ಬಳಕೆ ಮಾಡುವಂತೆ ರೈತರಿಗೆ ಕರೆ ಕೊಡುತ್ತೇವೆ. ಶೇ.3ರಷ್ಟು ಕೃಷಿಯನ್ನು ಅವಲಂಬಿಸಿರುವ ಇಸ್ರೇಲ್‌ನಲ್ಲಿ ಇಡೀ ದೇಶಕ್ಕಾಗುವಷ್ಟು ಆಹಾರ ಉತ್ಪನ್ನಗಳನ್ನು ಬೆಳೆದು ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಅಲ್ಲಿನ ನೀರಿನ ಮಿತ ಬಳಕೆ ಎಲ್ಲರಿಗೂ ಮಾದರಿಯಾಗಿದೆ,'' ಎಂದರು.

''ಇತ್ತೀಚೆಗೆ ಮಾಧ್ಯಮಗಳಲ್ಲಿ ನಕಾರಾತ್ಮಕ ಸುದ್ದಿ ಹೆಚ್ಚು ಬಿತ್ತರವಾಗುತ್ತಿದೆ. ಇದರ ಬದಲು ಆತ್ಮವಿಶ್ವಾಸ ಮೂಡಿಸುವತ್ತ ದೃಷ್ಟಿ ಹರಿಸಬೇಕು. ಸಾಧಕ ರೈತರನ್ನು ಗುರುತಿಸಿ 'ಸೂಪರ್‌ ಸ್ಟಾರ್‌ ರೈತ' ಪ್ರಶಸ್ತಿ ನೀಡುವ ಕ್ರಮ ಒಳ್ಳೆಯ ಪ್ರಯತ್ನ,'' ಎಂದು ಸಚಿವರು ಶ್ಲಾಘಿಸಿದರು.


ರೈತರಿಗೆ ಉಪ ಕಸುಬು ಮುಖ್ಯ


ರೈತರಿಗೆ ಗುಣಮಟ್ಟದ ವಿದ್ಯುತ್‌, ನೀರು ಹಾಗೂ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದರೆ ಯಾವುದೇ ಸಹಾಯಧನ ನೀಡುವ ಅಗತ್ಯವಿರುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಅಭಿಪ್ರಾಯಪಟ್ಟರು.

''ರೈತ ಬೆಲೆ ಕುಸಿದಾಗ ಉತ್ಪನ್ನಗಳನ್ನು ಬೀದಿಗೆ ಸುರಿಯುತ್ತೇವೆ. ಬಂಪರ್‌ ಬೆಲೆ ಸಿಕ್ಕಾಗ ಕಾರು ಖರೀದಿಸಿ ಸಂಭ್ರಮಪಡುತ್ತಾನೆ. ಆದರೆ ಇದೆಲ್ಲವೂ ನಿಸರ್ಗದ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ, ಮೀನು ಸಾಕಣೆಯಲ್ಲಿ ತೊಡಗಿಸಿಕೊಳ್ಳುವ ರೈತರು ಆತ್ಮಹತ್ಯೆ ಹಾದಿ ತುಳಿಯುವುದಿಲ್ಲ. ಇದನ್ನು ರಾಷ್ಟ್ರೀಯ ಮಟ್ಟದ ದಾಖಲೆಗಳ ಅಂಕಿ-ಅಂಶಗಳು ಕೂಡ ಸಾರಿ ಹೇಳುತ್ತವೆ,'' ಎಂದರು.

''ಮಣ್ಣು ಪರೀಕ್ಷೆ ಮಾಡಿ ಸರಕಾರವೇ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಸುತ್ತಿದ್ದರೂ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ದೇಶದಲ್ಲಿ ರೈತರಿಗೆ ಸಂಶೋಧನಾ ಆಧರಿತ ಬೆಳೆ ಪದ್ಧತಿಯ ಸೂಚ್ಯಂಕ ಇಲ್ಲ. ಇಂತಹ ಕಾಲ ಘಟ್ಟದಲ್ಲಿ ನೀತಿ ನಿರೂಪಕರು, ವಿಜ್ಞಾನಿಗಳು, ರೈತರು ಹಾಗೂ ಉದ್ಯಮಿಗಳು ಒಂದೆಡೆ ಸೇರಿ ರೈತರು ಹಾಗೂ ಕೃಷಿ ಉದ್ಯಮಕ್ಕೆ ಪೂರಕವಾದ ನೀತಿ ರೂಪಿಸಬೇಕಿದೆ,'' ಎಂದರು.

''ನಗರೀಕರಣದ ಪರಿಣಾಮ ಜಾನುವಾರುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಜಾನುವಾರುಗಳ ಜಾಗದಲ್ಲಿ ಟ್ರ್ಯಾಕ್ಟರ್‌ಗಳು ಬಂದು ನಿಂತಿವೆ. ಕನಿಷ್ಠ 30 ಎಕರೆ ನೀರಾವರಿ ಪ್ರದೇಶವುಳ್ಳ ರೈತ ಟ್ರ್ಯಾಕ್ಟರ್‌ ನಿರ್ವಹಿಸಬಹುದು. ಆದರೆ, ಪ್ರತಿಷ್ಠೆಗಾಗಿ ಒಂದೊಂದು ಊರಿನಲ್ಲಿ 50-60 ಟ್ರ್ಯಾಕ್ಟರ್‌ಗಳಿವೆ. ಸಿಂಧನೂರು ತಾಲೂಕಿನಲ್ಲೇ ರಾಜ್ಯದಲ್ಲೇ ಅತಿ ಹೆಚ್ಚು ಹೆಚ್ಚು ಟ್ರ್ಯಾಕ್ಟರ್‌ಗಳಿವೆ,'' ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆಕಟ್ಟೆಗಳನ್ನು ತುಂಬಿಸಬೇಕಿದೆ

ರೈತರ ಬದುಕನ್ನು ಹಸನು ಮಾಡಲು ರಾಜ್ಯದಲ್ಲಿನ ಕೆರೆ-ಕಟ್ಟೆಗಳನ್ನು ಸಂರಕ್ಷಣೆ ಮಾಡಿ ಅವುಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಾಗಿದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಿ ರೈತರು ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಲಿದ್ದು, ಯಾರಿಗೂ ಬೇಡುವಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಪ್ರತಿಪಾದಿಸಿದರು.

''ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಲ್ಲಿ ಸರಕಾರಗಳು ಕೂಡ ಎಡವಿವೆ ಎಂಬುದನ್ನು ಎಲ್ಲರೂ ಒಪ್ಪಬೇಕು. ಖಾಸಗಿ ಕಂಪನಿ ತಯಾರಿಸಿ ನಿಗದಿಪಡಿಸಿದ ಬೆಲೆಗೆ ನಾವು ಕುಡಿಯುವ ನೀರಿನ ಬಾಟಲಿ ಖರೀದಿಸುತ್ತೇವೆ. ಆದರೆ, ರೈತರು ಬೆಳೆದ ಬೆಳೆಗಳಿಗೆ ಇನ್ನೂ ನ್ಯಾಯಯುತ ಬೆಲೆ ನಿಗದಿಪಡಿಸಲು ಸಾಧ್ಯವಾಗಿಲ್ಲ,'' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

''ಮಂಡ್ಯ ಅಂದ್ರೆ ಇಂಡಿಯಾ ಎಂಬ ಮಾತಿದೆ. ಆದರೆ, ನಾನು ಪ್ರತಿನಿಧಿಸುವ ಮಂಡ್ಯ ಜಿಲ್ಲೆಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಸಾಲಮನ್ನಾದ ಬಳಿಕವೂ ಇದು ಮುಂದುವರೆದಿದೆ. ಈ ನಿಯಮಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ,'' ಎಂದರು.

'' 'ವಿಕ ಸೂಪರ್‌ ಸ್ಟಾರ್‌ ರೈತ' ಎಂಬ ಹೆಸರೇ ವಿಶೇಷವಾಗಿದೆ. ಕೃಷಿ ಎಂದರೆ ಶಾಪ ಅನ್ನುವ ಭಾವನೆ ರೈತರಲ್ಲಿ ಮೂಡಿರುವ ಸನ್ನಿವೇಶದಲ್ಲಿ ಮಾದರಿ ರೈತರನ್ನು ಗುರುತಿಸಿ ಇತರರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುವ ಪತ್ರಿಕೆಯ ಕೆಲಸ ಶ್ಲಾಘನೀಯ,'' ಎಂದು ಸಚಿವರು ಕೊಂಡಾಡಿದರು.

ಬೆಲೆ ನೀತಿ, ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕೃಷಿ ಬದುಕಿನ ಕುರಿತು ರೈತರು ಭರವಸೆ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 6.5 ಲಕ್ಷ ಹೆಕ್ಟೇರ್‌ ಪ್ರದೇಶ ಕೃಷಿಯಿಂದ ಹೊರಗುಳಿದಿದ್ದು, 20 ದಶಲಕ್ಷ ರೈತರು ಕೃಷಿ ವಿಮುಖರಾಗಿದ್ದಾರೆ. ಇದಕ್ಕೆ ಪರಿಹಾರ ಒದಗಿಸಲು ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ.
- ಡಾ.ಪ್ರಕಾಶ್‌ ಕಮ್ಮರಡಿ, ಅಧ್ಯಕ್ಷ, ರಾಜ್ಯ ಕೃಷಿ ಬೆಲೆ ಆಯೋಗ

ಸೂಪರ್‌ ಸ್ಟಾರ್‌ ರೈತ ಪ್ರಶಸ್ತಿ ನೀಡುವ ಪರಿಕಲ್ಪನೆ ಸ್ವಾಗತಾರ್ಹ. ಈಗಾಗಲೇ ಕೃಷಿ ಪಂಡಿತ ಹಾಗೂ ಇತರ ಪ್ರಶಸ್ತಿ ಪಡೆದವರನ್ನು ಹೊರತುಪಡಿಸಿ ಹೊಸಬರನ್ನು ಗುರುತಿಸಬೇಕು.
- ಪರ್ವೇಜ್‌ ಬಂತನಾಳ್‌, ಹೆಚ್ಚುವರಿ ಕೃಷಿ ನಿರ್ದೇಶಕರು

ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ಸಿಗಬೇಕು. ರೋಚಕ ಸುದ್ದಿ ಬದಲು ರೈತರಿಗೆ ಧೈರ್ಯ ತುಂಬುವತ್ತ ದೃಷ್ಟಿ ಹರಿಸಬೇಕು. ಸಮಗ್ರ ಬೇಸಾಯ ಪದ್ಧತಿ ಅನುಸರಿಸುತ್ತಿರುವ ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು.
- ಬಿ.ನಾರಾಯಣಸ್ವಾಮಿ, ಪ್ರಧಾನ ವಿಜ್ಞಾನಿ, ಐಸಿಎಚ್‌ಆರ್‌

ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿನ ಪ್ರಮಾಣದಲ್ಲಿದೆ. 'ವಿಕ ಸೂಪರ್‌ ಸ್ಟಾರ್‌ ರೈತ' ಆಯ್ಕೆ ವೇಳೆ ಮಹಿಳೆಯರನ್ನೂ ಪರಿಗಣಿಸಬೇಕು
- ಕೃಷ್ಣಪ್ರಸಾದ್‌, ಕೃಷಿ ಬರಹಗಾರ

ಕೃಷಿ ಪಂಡಿತ ಪ್ರಶಸ್ತಿ ಪಡೆದ ಪ್ರಗತಿಪರ ರೈತರು ಕೂಡ ತನ್ನ ಪತ್ನಿಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬೇಡುವಂತಹ ಪರಿಸ್ಥಿತಿ ಬಂದೊದಗಿರುವುದು ದುರ್ದೈವದ ಸಂಗತಿ. ದೇಶದಲ್ಲಿ ಶೇ.64ರಷ್ಟು ರೈತರಿದ್ದರೂ ಅವರಿಗೆಂದೇ ಪ್ರತ್ಯೇಕ ಕೃಷಿ ನೀತಿ ಇಲ್ಲ. ಇಂತಹ ಸಮಸ್ಯೆಗಳಿಗೆ ಸರಕಾರ ಪರಿಹಾರ ಕಂಡುಹಿಡಿಯಬೇಕು. ಪತ್ರಿಕೆಗಳು ಚಳವಳಿಯ ಸಂಕೇತವಾಗಿದ್ದು, ಕೃಷಿಕರನ್ನು ಉತ್ತೇಜಿಸಲು ಸೂಪರ್‌ ಸ್ಟಾರ್‌ ರೈತ ಪ್ರಶಸ್ತಿ ನೀಡುವ ಕ್ರಮ ಸ್ವಾಗತಾರ್ಹ
- ಕೋಡಿಹಳ್ಳಿ ಚಂದ್ರಶೇಖರ್‌, ಅಧ್ಯಕ್ಷ, ಕರ್ನಾಟಕ ರೈತ ಸಂಘ

ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಸಾಕಷ್ಟಿದೆ. ಸಂಸಾರ ನಿಭಾಯಿಸಿಕೊಂಡು ವ್ಯವಸಾಯದಲ್ಲಿ ತೊಡಗಿಕೊಳ್ಳುವ ಅವಳನ್ನು ಗಂಡಿನಷ್ಟೇ ಸರಿಸಮನಾಗಿ ಪರಿಗಣಿಸಬೇಕು.
- ಎ.ನಳಿನಿ, ರಾಜ್ಯ ಮಹಿಳಾ ರೈತ ಘಟಕದ ಕೋಲಾರ ಜಿಲ್ಲಾಧ್ಯಕ್ಷೆ

ರೇಷ್ಮೆ ಗೂಡಿನ ಬೆಲೆ ಇಳಿಕೆಯಾಗಿದ್ದು, ಬೆಳೆಗಾರರು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪನಿಗಳೇ ತಾವು ಉತ್ಪಾದಿಸುವ ವಸ್ತುಗಳಿಗೆ ಬೆಲೆ ನಿಗದಿಪಡಿಸುವಾಗ ರೈತರ ಕೃಷಿ ಉತ್ಪನ್ನಗಳಿಗೆ ಯಾರು ಬೆಲೆ ನಿಗದಿಪಡಿಸಬೇಕು? ಈ ಬಗ್ಗೆ ಸರಕಾರ ಗಮನಹರಿಸಬೇಕಿದೆ.
- ಬಿಳಗುಂಬ ವಾಸು, ರೈತ ಮುಖಂಡ

ಕೃಷಿ ಬೆಳೆಗೆ ಶಾಸನಬದ್ಧ ಸ್ಥಾನಮಾನ ನೀಡಿದರೆ ರೈತ ಬೆಲೆ ಕುಸಿದಾಗ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಸಿಗಲಿದೆ. ಬೆಳೆ ರಕ್ಷಣೆ, ಮಾರುಕಟ್ಟೆ ಭದ್ರತೆ ಹಾಗೂ ವೈಜ್ಞಾನಿಕ ಬೆಲೆ ನಿಗದಿ ಬಗ್ಗೆ 'ವಿಕ' ಸೂಪರ್‌ ಸ್ಟಾರ್‌ ರೈತ ಕಾರ್ಯಕ್ರಮದ ಮೂಲಕ ಸರಕಾರದ ದಿಗ್ದರ್ಶನ ಮಾಡಿಸಲಿ. ಬಿಟಿ ಬದನೆ ವಿಚಾರದಲ್ಲಿ ಜನರ ಕಣ್ಣು ತೆರೆಸಿದ್ದು 'ವಿಕ'.
- ಪುಟ್ಟಸ್ವಾಮಿ, ರೈತ ಮುಖಂಡ

ಪಿಯುಸಿ ನಂತರ ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಮೂಲಕ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟಿಸುವ ರೀತಿ ರೈತರು ಬೆಳೆ ಬೆಳೆಯುವ ಪದ್ಧತಿ ಬಗ್ಗೆ ಸರಕಾರ ಮಾಹಿತಿ ನೀಡಬೇಕು. ಹೀಗಾಗಿ, ಒಂದೇ ಬೆಳೆಗೆ ರೈತರು ಜೋತು ಬಿದ್ದು ಅಧಿಕ ಉತ್ಪಾದನೆ ಮಾಡುವುದು ತಪ್ಪುತ್ತದೆ.
- ಮಳ್ಳೂರು ಹರೀಶ್‌, ರೈತ, ಚಿಕ್ಕಬಳ್ಳಾಪುರ

ರೈತರು ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿದರೂ ಪಾರ್ಥೇನಿಯಂನಂತಹ ಕಳೆಯಿಂದ ಭೂಮಿ ಸಂಪೂರ್ಣ ನಶಿಸಿ ಹೋಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವಾಗ ನೈಸರ್ಗಿಕ ಕೃಷಿ ಹಾಗೂ ಶೂನ್ಯ ಬಂಡವಾಳ ಕೃಷಿ ಅಳವಡಿಸಿಕೊಂಡಿರುವ ರೈತರನ್ನು ಗುರುತಿಸಬೇಕು.
- ಜಗದೀಶ್‌, ರೈತ, ತುಮಕೂರು

ರಾಜಕಾರಣಿಗಳಿಂದ ಶಿಫಾರಸು ಪತ್ರ ಪಡೆದು ಈಗಾಗಲೇ ಪ್ರಶಸ್ತಿ ಗಿಟ್ಟಿಸಿದವರನ್ನು ಹೊರಗಿಟ್ಟು ಎಲೆಮರೆಕಾಯಿಯಂತೆ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ವಿಕ ಪ್ರಶಸ್ತಿ ನೀಡಲಿ.
- ಕೆಂಕೆರೆ ಸತೀಶ್‌, ಪ್ರ.ಕಾರ್ಯದರ್ಶಿ, ರಾಜ್ಯ ರೈತ ಸಂಘ

ವಿದೇಶ ಪ್ರವಾಸ, ರಾಜ್ಯ ಪ್ರವಾಸ ಮಾಡಿದವರು, ಈಗಾಗಲೇ ಕೃಷಿ ಇಲಾಖೆ ನೀಡಿದ ಕೃಷಿ ಪ್ರಶಸ್ತಿ ಪಡೆದ ಪ್ರಗತಿಪರ ರೈತರನ್ನು ಹೊರತುಪಡಿಸಿ ಎಲೆಮರೆ ಕಾಯಿಯಂತೆ ಸಾಧನೆ ಮಾಡಿದ ರೈತರನ್ನು ಗುರುತಿಸಬೇಕು. 'ವಿಕ' ಕೈಗೊಂಡಿರುವ ಕೆಲಸ ಸುತ್ತ್ಯಾರ್ಹ''.
- ಗೌತಮ್‌ಗೌಡ, ರೈತ