News

ವಿಶಾಖಪಟ್ಟಣದ ಎಲ್‍ಜಿ ಕಾರ್ಖಾನೆಯಲ್ಲಿ ಅನಿಲ ದುರಂತ: 10ಕ್ಕೂ ಹೆಚ್ಚು ಜನ ಸಾವು, ಹಲವು ಪ್ರಾಣಿ, ಪಕ್ಷಿ ಸಾವು

07 May, 2020 7:33 PM IST By:

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆ ಎಲ್‍ಜಿ ಪಾಲಿಮರ್ಸ್ ರಾಸಾಯನಿಕ ಕಾರ್ಖಾನೆಯಿಂದ ಗುರುವಾರ ಬೆಳಗ್ಗೆ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 10 ಕ್ಕೂ ಹೆಚ್ಚು ಮಂದಿ ಮೃತಪಟ್ಟಿಟ್ಟಿರೆಂದು ವರದಿಯಾಗಿದೆ. ಅಲ್ಲದೆ 300ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು 5,000 ದಷ್ಟು ಜನರು ಅಸ್ವಸ್ಥರಾಗಿದ್ದಾರೆ.
ಒಂದೆಡೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾವು ನೋವುಗಳು ಸಂಭವಿಸುತ್ತಿರುವ ಬೆನ್ನಲ್ಲೆ ವಿಶಾಖಪಟ್ಟಣದ ಆರ್. ಆರ್ ವೆಂಕಟಪುರ ಗ್ರಾಮದಲ್ಲಿ ವಿಷಾನಿಲ ಸೋರಿಕೆಯಾಗಿರುವ ಘಟನೆ ರಾಜ್ಯಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿದೆ.

ಈ ಘಟನೆ ಸುತ್ತಮುತ್ತಲ ಗ್ರಾಮದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಏಕಾಏಕಿ ವಿಷಾನಿಲ ಸೋರಿಕೆಯಾಗಿರುವುದರಿಂದ ಸಾವಿರಾರು ಜನರು ಅಸ್ವಸ್ಥಗೊಂಡಿದ್ದಾರೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳಲ್ಲೂ ಅನಿಲ ಸೋರಿಕೆಯ ಪರಿಣಾಮ ಬೀರಿದೆ. ಕೆಲವು ಪ್ರಾಣಿಗಳು ತನ್ನ ಜೀವವನ್ನೇ ಕಳೆದುಕೊಂಡಿದೆ. ಇನ್ನು ಹಲವರು ಪ್ರಜ್ಞಾಹೀನರಾದರೆ ಅನೇಕ ಮಂದಿ ನರಳಾಡುತ್ತಿರುವ ದೃಶ್ಯವು ಎಂಥವರ

ಹೃದಯವನ್ನು ಕರಗಿಸುವಂತಿದೆ.

ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ವಿಶಾಖಪಟ್ಟಣ ಜಿಲ್ಲಾಧಿಕಾರಿ, ಎ.ವಿನಯಚಂದ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಕ್ಷಣವೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

5 ಗ್ರಾಮಗಳನ್ನು ಸಂಪೂರ್ಣ ಖಾಲಿ:

ಈ ವಿಷಾನಿಲ ಸೋರಿಕೆಯಿಂದಾಗಿ ಮೈ, ಕಣ್ಣು ತುರಿಕೆ ಉರಿಯಿಂದಾಗಿ ಪರದಾಡುತ್ತಿದ್ದವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. 5 ಗ್ರಾಮಗಳನ್ನು ಸಂಪೂರ್ಣ ಖಾಲಿ ಮಾಡಿಸಲಾಗಿದ್ದು, ಇನ್ನೂ 2 ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಜಿಡ್ಡಿನಂತಿರುವ ಈ ಅನಿಲಕ್ಕೆ ಬಣ್ಣ ಇರುವುದಿಲ್ಲ. ಕೆಲವೊಮ್ಮೆ ಹಳದಿಯಂತೆ ಕಂಡುಬರುತ್ತದೆ. ಇದರಲ್ಲಿನ ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರೆ ವಾಸನೆ ಕಠಿಣವಾಗಿರುತ್ತದೆ. ಆರೋಗ್ಯಕ್ಕೂ ಅಪಾಯಕಾರಿಯಾಗಿರುತ್ತದೆ.
ಕೊರೊನಾ ಸೋಂಕು ತಡೆಗೆ ಘೋಷಿಸಲಾಗಿದ್ದ ಲಾಕ್ಡೌನ್‍ಗೂ ಮುನ್ನ ಮಾರ್ಚ್ ತಿಂಗಳಿನಿಂದಲೇ ಇಲ್ಲಿನ ರಾಸಾಯನಿಕ ಘಟಕದಲ್ಲಿ 5 ಸಾವಿರ ಟನ್ ಟ್ಯಾಂಕಗಳಲ್ಲಿ ಅನಿಲ ಸೋರಿಕೆ ಉಂಟಾಗಿದ್ದರೂ ಕಾರ್ಖಾನೆಯ ಮಾಲಿಕರು ನಿರ್ಲಕ್ಷ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದಾಗಿ 47 ದಿನಗಳಿಂದ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಇಲ್ಲಿನ ರಾಸಾಯನಿಕ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಲಾಕ್ಡೌನ್ ನ ಮುಂಚಿತವಾಗಿ 5 ಸಾವಿರ ಟನ್ ಟ್ಯಾಂಕಗಳಲ್ಲಿ ಅನಿಲ ಸೋರಿಕೆ ಉಂಟಾಗಿದೆ ಎಂದು ಹೇಳಲಾಗಿದೆ. ಇದರ ಪರಿಣಾಮವೇ ಸುತ್ತಮುತ್ತಲ ಮನೆಗಳಿಗೂ ವಿಷಾನಿಲ ಹರಡಲು ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ಭೇಟಿ

ಘಟನಾ ಸ್ಥಳಕ್ಕೆ ಆಂದ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ವಿಶೇಷ ವಿಮಾನದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಅನಾಹುತ ತಡೆಗಟ್ಟಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸ್ಥಳೀಯ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡರು. ಹೆಚ್ಚಿನ ಅನಾಹುತ ಸಂಭವಿಸದಂತೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.