ಉದ್ಯೋಗವಿಲ್ಲವೆಂಬ ಚಿಂತೆಯಲ್ಲಿದ್ದೀರಾ. ಲಾಕ್ಡೌನ್ ಕಾರಣಕ್ಕೆ ನೌಕರಿ ಹೋಯಿತೆಂದು ಸಂಕಷ್ಟದಲ್ಲಿದ್ದೀರಾ,,, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಸಂಕಷ್ಟದಲ್ಲಿ ಹೇಗೆ ನೌಕರಿ ಸಿಗುತ್ತದೆ ಎಂಬ ಕೊರಗು ಕಾಡುತ್ತಿದಿಯೇ? ಈಗ ಚಿಂತೆಬಿಟ್ಟುಬಿಡಿ. ಇಲ್ಲಿದೆ ನಿಮಗೆ ಬಂಪರ್ ಸುದ್ದಿ. ತಡವೇಕೆ ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಜುಲೈ 10 ರಂದು ವರ್ಚುವಲ್ ಉಗ್ಯೋಗ ಮೇಳೆ ಆಯೋಜಿಸಿದೆ. ಉದ್ಯೋಗದಾತರ ಅನುಕೂಲಕ್ಕೆ ಪ್ರತ್ಯೇಕ ವೆಬ್ ಸೈಟ್ ಸ್ಥಾಪನೆ ಮಾಡಲಾಗಿದೆ.
ಮೇಳದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಉದ್ಯೋಗದಾತರು ಹಾಗೂ ಅಭ್ಯರ್ಥಿಗಳು ಹೆಸರನ್ನು ಕೌಶಲ ಕರ್ನಾಟಕದಲ್ಲಿ ನೋಂದಾಯಿಸುವುದಕ್ಕೆ ಜು.8 ಕೊನೆಯ ದಿನವಾಗಿದೆ. ನೋಂದಾಯಿಸಿದ ಪ್ರತಿಯೊಬ್ಬರಿಗೂ ಉಚಿತವಾಗಿ ಮೇಲ್ ಮೂಲಕ ಪ್ರತ್ಯೇಕ ಲಾಗಿನ್ ಸೃಜಿಸಲಾಗುತ್ತದೆ. https://skillconnect.kaushalkar.com ಎಂಬ ವೆಬ್ ಸೈಟ್ ನಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರು ತಮ್ಮ ಹೆಸರನ್ನು ಜುಲೈ 8 ರೊಳಗೆ ನೋಂದಾಯಿಸಿಕೊಳ್ಳಬೇಕು.
ಉದ್ಯೋಗದಾತರು ನೋಂದಣಿ ಜತೆಗೆ ಹುದ್ದೆಗಳ ಮಾಹಿತಿ ಒದಗಿಸಬೇಕು. ಸಲ್ಲಿಕೆಯಾದ ಅರ್ಜಿ ಹಾಗೂ ಅಭ್ಯರ್ಥಿಗಳ ಕಿರು ಪಟ್ಟಿಯನ್ನು ತಮ್ಮ ಲಾಗಿನ್ನಲ್ಲಿ ವೀಕ್ಷಿಸಬಹುದು, ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ವರ್ಚುವಲ್ ಸಂದರ್ಶನ ನಡೆಸಲಾಗುವುದು.
ಅಭ್ಯರ್ಥಿಗಳು ಹೆಸರು ನೋಂದಾಯಿಸಿದ ನಂತರ ತಮಗಾಗಿ ನೀಡಿರುವ ಲಾಗಿನ್ ಮೂಲಕ ಹುದ್ದೆಗಳನ್ನು ವೀಕ್ಷಿಸಿ ಅರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಅರ್ಜಿ ಹಾಕಬೇಕು. ಜತೆಗೆ ಲಾಗಿನ್ನಲ್ಲಿ ಒದಗಿಸುವ ತಾಜಾ ಮಾಹಿತಿಯನ್ನು ಪರಿಶೀಲಿಸಬೇಕು. ಆಯ್ಕೆಯಾದ ಕಿರುಪಟ್ಟಿಯಲ್ಲಿ ಹೆಸರಿದ್ದರೆ ಜು.10ರ ವರ್ಚುವಲ್ ಸಂದರ್ಶನಕ್ಕೆ ಅವಕಾಶ ಲಭಿಸುತ್ತದೆ.
ಪ್ರತಿಯೊಂದು ಉದ್ಯೋಗದಾತ ಕಂಪನಿ/ ಸಂಸ್ಥೆಗೆ ಪ್ರತ್ಯೇಕ ವರ್ಚುವಲ್ ಕೊಠಡಿಯನ್ನು ಕೌಶಲ ಕರ್ನಾಟಕ ವೇದಿಕೆ ವ್ಯವಸ್ಥೆ ಮಾಡಲಿದೆ. ಇದರಿಂದಾಗಿ ಉದ್ಯೋಗದಾತರು ನೀತಿಯನುಸಾರ ಮುಖಾಮುಖಿ ಸಂದರ್ಶನದ ರೀತಿಯಲ್ಲಿ ವರ್ಚುವಲ್ ಸಂದರ್ಶನ ನಡೆಸಲು ಅವಕಾಶವಾಗಲಿದೆ. ಅಲ್ಲದೆ, ಅರ್ಹರಿಗೆ ಹುದ್ದೆಯ ಆಹ್ವಾನ ನೀಡಬಹುದು. ಇಲ್ಲವೆ, ಅಭ್ಯರ್ಥಿಗಳ ಜತೆಗೆ ಸಮೂಹ ಸಂದರ್ಶನದ ಮೂಲಕ ಕಿರುಪಟ್ಟಿ ಸಿದ್ಧಪಡಿಸಲು ಸಾಧ್ಯವಿದ್ದು, ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳ ಮತ್ತೊಂದು ಸುತ್ತಿನ ಸಂದರ್ಶನವನ್ನೂ ಅದೇ ದಿನ ನಡೆಸಬಹುದು.