ಕೊಡುಗು ಎಂದರೇನೇ ವಿಶೇಷ. ರಾಜ್ಯದ ಬೇರಾವುದೇ ಜಿಲ್ಲೆಗಳಲ್ಲೂ ಇರದಂತಹ ವಿಶಿಷ್ಟ ಹವಾಗುಣ ಹೊಂದಿರುವ ಕೊಡವರ ನಾಡು, ಆಚರಣೆಗಳ ದೃಷ್ಟಿಯಿಂದಲೂ ಅತ್ಯಂತ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತದೆ. ಆಚರಣೆಗಳು ಮಾತ್ರವಲ್ಲ, ಇಲ್ಲಿನ ಜನ ಮಾತನಾಡುವ ಶೈಲಿ, ಆಡುವ ಭಾಷೆ, ತೊಡುವ ಉಡುಪು, ಸೇವಿಸುವ ಆಹಾರ ಪದ್ಧತಿ ಕೂಡ ಬೇರೆಲ್ಲರಿಗಿಂತ ವಿಭಿನ್ನ. ತನ್ನಲ್ಲಿನ ಈ ವಿಭಿನ್ನತೆ ಹಾಗೂ ವಿಶಿಷ್ಟತೆಗಳಿಂದಾಗಿಯೇ ಕೊಡಗು ಜಿಲ್ಲೆ ಪ್ರಸಿದ್ಧಿ ಪಡೆದಿದೆ.
ಹುತ್ತರಿ (ಸುಗ್ಗಿ), ಕಾವೇರಿ ಸಂಕ್ರಮಣ, ಕೈಲ್ ಪೋಳ್ದ್ (ಆಯುಧ ಪೂಜೆ), ಬೋಡ್‌ನಮ್ಮೆ (ಬೇಡುವ ಹಬ್ಬ), ಆಟಿ ಪದಿನೆಟ್, ಕಕ್ಕಡ ಹೀಗೆ ಹತ್ತಾರು ವಿಶಿಷ್ಟ ಆಚರಣೆಗಳ ಮೂಲಕ ಕೊಡವರು ಗಮನ ಸೆಳೆಯುತ್ತಾರೆ. ಅದರಲ್ಲೂ ಮಳೆಗಾಲ ಆರಂಭವಾಯಿತೆAದರೆ ಕೊಡವರಿಗೆ ಕಕ್ಕಡ ಮಾಸದ ಸಂಭ್ರಮ. ಕಕ್ಕಡ ಮಾಸವೆಂದರೆ ಕೊಡಗಿನಲ್ಲಿ ಧೋ ಎಂದು ಮಳೆ ಸುರಿಯುವ ದಿನಗಳು. ಈ ಮಳೆಯ ನಡುವೆಯೇ ಮುಂಗಾರು ಹಂಗಾಮಿನ ಮೊದಲ ಭತ್ತದ ನಾಟಿ ಕೂಟ ನಡೆಯುತ್ತದೆ. ರಚ್ಚೆ ಹಿಡಿದು ಸುರಿಯುವ ಮಳೆಯ ಜೊತೆಗೂಡಿಯೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು ಕೊಡವರಿಗೆ ಅಭ್ಯಾಸವಾಗಿ ಹೋಗಿದೆ. ಮಳೆಯೊಂದಿಗೆ ಸೆಣಸಾಡುತ್ತಾ ಕೃಷಿ ಚಟುವಟಿಕೆಗಳನ್ನು ನಡೆಸುವ ಈ ಸಾಹಸವನ್ನು ಅಲ್ಲಿನ ಜನ ಕಕ್ಕಡ ಮಾಸ ಆಚರಣೆಯ ಮೂಲಕ ಸಂಭ್ರಮಿಸುತ್ತಾರೆ.
ಇದು ಕೊಡವರಿಗೆ ಸವಾಲಿನ ಸಮಯ
ನಿಜಕ್ಕೂ ಕಕ್ಕಡ ಮಾಸವೆಂದರೆ ಕೊಡಗಿನ ಜನರಿಗೆ ಸವಾಲಲಿನ ಸಮಯ. ಸಾಮಾನ್ಯವಾಗಿ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಕಕ್ಕಡ ಮಾಸ ಎಂದು ಕರೆಯಲಾಗುತ್ತದೆ. ಈ ಒಂದು ತಿಂಗಳ ಅವಧಿಯಲ್ಲಿ ಕೊಡಗು ಜಿಲ್ಲೆ ಅತಿ ಹೆಚ್ಚು ಮಳೆಯನ್ನು ಕಾಣುತ್ತದೆ. ಕಳೆದ ಮೂರು ವರ್ಷಗಳಿಂದ ಅಂತೂ ಮಳೆರಾಯ ಈ ಭಾಗವನ್ನು ಬೆಂಬಿಡದAತೆ ಕಾಡಿದ್ದಾನೆ. ನಿಂತ ನೆಲ ಕುಸಿದು ಹೋಗುವ ಹಂತಕ್ಕೆ ಮಳೆಯಾಗಿದೆ. 2019, 2020ರಲ್ಲಿ ಸುರಿದ ಮಳೆ ಹಾಗೂ ಅದು ಮಾಡಿದ ಅನಾಹುತ ನೆನಪಿಸಿಕೊಂಡರೆ ಕೊಡಗಿನ ಜನ ಈಗಲೂ ನಡುಗುತ್ತಾರೆ. ಈ ಮಾಸದಲ್ಲಿ ಮಳೆ ಇಷ್ಟೆಲ್ಲಾ ಸವಾಲುಗಳನ್ನು ತಂದೊಡ್ಡಿದರೂ ಕೊಡವರು ಮಾತ್ರ ಕೃಷಿ ಕಾಯಕವನ್ನು ಬಿಡುವುದಿಲ್ಲ. ಬದಲಿಗೆ ಬಿಡುವಿಲ್ಲದೆ ದುಡಿಯುತ್ತಾರೆ.
ಭತ್ತ ಪ್ರಮುಖ ಬೆಳೆ
ಕೊಡಗಿನಲ್ಲಿ ಅನಾದಿಕಾಲದಿಂದಲೂ ಭತ್ತ ನಾಟಿ ಮಾಡುತ್ತಿದ್ದು, ಇದು ಅಲ್ಲಿನ ಪ್ರಮುಖ ಬೆಳೆಯಾಗಿದೆ. ಹಿಂದೆಲ್ಲಾ ಅತಿ ಹೆಚ್ಚು ಮಳೆ ಬೀಳುತ್ತಿದ್ದುದರಿಂದ ಭತ್ತದ ನಾಟಿ ತಿಂಗಳುಗಟ್ಟಲೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೊಡಗಿನ ಜನ ಹೊರ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಂಡು, ಗದ್ದೆಯ ಕೆಲಸಗಳಲ್ಲೇ ಮುಳುಗಿಬಿಡುತ್ತಿದ್ದರು. ನಸುಕಿನ ಐದು ಗಂಟೆ ಹೊತ್ತಿಗಾಗಲೇ ತಲೆಗೆ ಗೋಣಿ ಚೀಲ ಇಲ್ಲವೇ ಪ್ಲಾಸ್ಟಿಕ್ಕಿನ ಕುಪ್ಪೆ ಹಾಕಿಕೊಂಡು, ಸುರಿವ ಮಳೆ ನಡುವೆಯೇ ಗದ್ದೆಗೆ ಇಳಿದರೆಂದರೆ ರಾತ್ರಿ ಕತ್ತಲು ಆವರಿಸುವ ಸಮಯವಾದರೂ ಗೊತ್ತಾಗುತ್ತಿರಲಿಲ್ಲ.
ಈಗ ಆಧುನಿಕ ಕೃಷಿ ಪದ್ಧತಿ, ಯಂತ್ರೋಪಕರಣಗಳಿಂದಾಗಿ ಹಿರಿಯರು ಮಾಡುತ್ತಿದ್ದಂತೆ ಗದ್ದೆಯಲ್ಲಿ ಕಸರತ್ತು ಮಾಡುವ ಅಗತ್ಯವಿಲ್ಲ. ಆದರೂ, ಕೊಡವರು ತಮ್ಮ ಸಂಪ್ರದಾಯ ಬಿಟ್ಟಿಲ್ಲ. ಈಗಲೂ ಕಕ್ಕಡ ಮಾಸ ಆರಂಭವಾಗುತ್ತಲೇ ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿ ಭೂಮಿ ಪೂಜೆ ಮಾಡಿ, ಗದ್ದೆಯಲ್ಲಿ ಪ್ರಥಮ ನಾಟಿ ಮಾಡುತ್ತಾರೆ.
ಇಲ್ಲಿ ಆಷಾಢ, ಅಲ್ಲಿ ಕಕ್ಕಡ
ಕನ್ನಡ ಭಾಷಿಗರ ‘ಆಷಾಢ’ ಕೊಡವರ ನಾಡಲ್ಲಿ ‘ಕಕ್ಕಡ’ ಹಾಗೂ ತುಳು ಭಾಷಿಗರ ನಡುವೆ ‘ಆಟಿ’ ಆಚರಣೆಯಾಗಿದೆ. ಕರ್ಕಾಟಕ ಅಥವಾ ಕಕ್ಕಡ ಮಾಸದ 18ನೇ ದಿನವನ್ನು ಕೊಡಗಿನ ಜನ ಕೃಷಿ ಚಟುವಟಿಕೆಯ ‘ಕಕ್ಕಡ ಪದಿನೆಟ್’ ಎಂದರೆ ಹಾಗೂ ತುಳು ಭಾಷಿಗರರು ‘ಆಟಿ ಪದಿನೆಣ್ಮ’ ಎಂದು ಆಚರಿಸುತ್ತಾರೆ. ಈ ದಿನದಂದು ಕಡಲಿನ ಒಡಲು ಸಂಪೂರ್ಣ ತುಂಬಿ ಉಕ್ಕುವುದೆಂಬ ಪ್ರತೀತಿದೆ. ಹೀಗಾಗಿ ಈ ದಿನದಂದು ಸಮುದ್ರಕ್ಕೆ ಹಾಲು ಸುರಿದು, ಸಮುದ್ರ ದೇವನ ಕೋಪವನ್ನು ಶಮನ ಮಾಡಲಾಗುತ್ತದೆ. ಇದರೊಂದಿಗೆ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಸಾಮೂಹಿಕವಾಗಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಲಾಗುತ್ತದೆ. ಆ ನಂತರ ಮನೆಯಲ್ಲಿ ಮದ್ದುಸೊಪ್ಪಿನ ಪಾಯಸ ಹಾಗೂ ಮರಕೆಸುವಿನ ಪತ್ರೊಡೆ ಮಾಡಿ ಸೇವಿಸಿ, ಸಂಭ್ರಮಿಸಲಾಗುತ್ತದೆ.
ಇನ್ನು ಕಕ್ಕಡ ಮಾಸದಲ್ಲಿ ಭಾರೀ ಮಳೆ ಸುರಿದು ಶೀತ ವಾತಾವರಣ ಆವರಿಸುವುದರಿಂದ ಕೊಡಗಿನಲ್ಲಿ ವಿಶೇಷ ಅಡುಗೆಗಳನ್ನು ಸೇವಿಸುತ್ತಾರೆ. ಕೊರೆವ ಚಳಿಯ ನಡುವೆ ದೇಹವನ್ನು ಬೆಚ್ಚಗಿರಿಸಲು ರುಚಿ ರುಚಿಯಾದ ನಾಟಿ ಕೋಳಿ, ಏಡಿ, ಅಣಬೆ, ಮರಕೆಸುವಿನ ಪತ್ರೊಡೆ, ಬಿದಿರು ಕಣಿಲೆ, ಮದ್ದುಪಾಯಸ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರೊಂದಿಗೆ ಎಲ್ಲ ಮನೆಗಳ ಅಡುಗೆ ಮನೆಯ ಕಿಟಕಿ ಮೂಲಕ ತೂರಿ ಬರುವುದು ‘ಆಟಿ ಪಾಯಸ’ದ ಮತ್ತೇರಿಸುವ ಪರಿಮಳ.
ಆಟಿ ಪಾಯಸದ ಪರಿಮಳ
ಮಧುಬನ ಅಥವಾ ಮದ್ದು ಸೊಪ್ಪಿನಲ್ಲಿ ಮಾಡುವ ಆಟಿ ಪಾಯಸವು ಕಕ್ಕಡ ಪದಿನೆಟ್ ಆಚರಣೆಯ ವೈಶಿಷ್ಟ್ಯಗಳಲ್ಲೊಂದು. ಹೆಸರೇ ಸೂಚಿಸುವಂತೆ ಮದ್ದುಸೊಪ್ಪು ಔಷಧೀಯ ಗುಣಗಳ ಆಕರವಾಗಿದೆ. 18 ಔಷಧೀಯ ಗುಣಗಳನ್ನು ಹೊಂದಿರುವುದು ಈ ಸೊಪ್ಪಿನ ವಿಶೇಷತೆ. ಪೊದೆಯಂತೆ ಬೆಳೆಯುವ ಮದ್ದು ಗಿಡ, ಹೇರಳವಾಗಿ ಸೊಪ್ಪನ್ನು ಹೊಂದಿರುತ್ತದೆ. ಸರಿಯಾಗಿ ಕಕ್ಕಡ ಮಾಸ ಆರಂಭವಾಗುವ ದಿನದಿಂದಲೇ ಮದ್ದು ಸೆಪ್ಪಿನ ಗಿಡದಲ್ಲಿ ಒಂದೊAದು ವಿಧದ ಔಷಧಿಯ ಗುಣಗಳು ಸೇರಿಕೊಳ್ಳುತ್ತಾ ಹೋಗುತ್ತವೆ. 18ನೇ ದಿನದ ವೇಳೆಗೆ ಒಟ್ಟು 18 ವಿಧದ ಔಷಧ ಗುಣಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತವೆ ಎಂಬುದು ಪ್ರತೀತಿ. ಜೊತೆಗೆ ಈ 18ನೇ ದಿನದಂದು ಮಾತ್ರ ಮದ್ದು ಸೊಪ್ಪು ಸುವಾಸನೆ ಬೀರುತ್ತದೆ.
ಸಾಮಾನ್ಯವಾಗಿ ಮನೆಯ ಹಿತ್ತಲಲ್ಲಿ ಬೆಳೆಯುವ ಮಧುಬನ ಗಿಡದ ಸೊಪ್ಪನ್ನು ಕಕ್ಕಡ ಪದಿನೆಟ್ಟಿನಂದು ಕೊಯ್ದು ಅಕ್ಕಿಯೊಂದಿಗೆ ಬೆರೆಸಿ ಪಾಯಸ ಮಾಡಲಾಗುತ್ತದೆ. ಕೆಲವರು ಈ ಸೊಪ್ಪು ಬಳಸಿ ಕೇಸರಿಬಾತ್ ಕೂಡ ಮಾಡುತ್ತಾರೆ. ಪಟ್ಟಣ ಪ್ರದೇಶಗಳಲ್ಲಿ ಸ್ನೇಹಿತರು, ಬಂಧುಗಳು ಮತ್ತು ಆಪ್ತರಿಗೆ ಈ ಸೊಪ್ಪನ್ನು ಹಂಚಿ ಸಂಭ್ರಮಿಸುತ್ತಾರೆ. ಮಳೆಗಾಲವು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಕೊಡಗಿನ ಮಳೆ ಶುರುವಾದರೆ ನಿಲ್ಲುವ ಮಾತೇ ಇಲ್ಲ. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮದ್ದು ಸೊಪ್ಪಿನಲ್ಲಿ ಆಟಿ ಪಾಯಸ ಮಾಡಿ ಸೇವಿಸುವುದು ವಾಡಿಕೆ.