News

ಜಾನುವಾರು ಸಾಕಾಣಿಕೆಯಲ್ಲಿನ ತಪ್ಪು ಕಲ್ಪನೆಗಳು ಹಾಗೂ ಚಾಲ್ತಿಯಲ್ಲಿರುವ ಸುಳ್ಳುಗಳು

29 August, 2023 4:52 PM IST By: Kalmesh T
Various superstitions and prevailing lies in animal husbandry

ಹೈನುಗಾರಿಕೆಯಲ್ಲಿ ತೊಡಗಿದ ಸಮುದಾಯದಲ್ಲಿ ಹಲವಾರು ಅಸಂಗತ ಅಂಶಗಳು, ತಲತಲಾಂತರದಿಂದ ಬೇರೂರಿದ ಮೂಢನಂಬಿಕೆಗಳು ಮನೆಮಾಡಿಕೊಂಡಿವೆ. ಈ ನಂಬಿಕೆಗಳೇ ನಿಜವಾದ ಪದ್ಧತಿಗಳೆಂದು ಕೆಲವು ಭಾಗಗಳಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿರುವುದು ವಿಪರ್ಯಾಸ. ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಕ ಆಧಾರಗಳೊಂದಿಗೆ ಯಾವುದು ತಪ್ಪು ಯಾವುದು ಸರಿ ಎಂದು ನಿರ್ಧರಿಸಿ ಮುನ್ನಡೆಯಬೇಕಿದೆ.

ಹೈನುಗಾರಿಕೆಯು ಒಂದು ಉದ್ಯಮವಾಗಿ ಬೆಳೆಯುತ್ತಿದ್ದಂತೆ ಇದರಿಂದ ಲಾಭ ಗಳಿಸಲು ವೈಜ್ಞಾನಿಕ ಪಾಲನಾ ಪದ್ಧತಿಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ. ಆದ್ದರಿಂದ ಹೈನುಗಾರರಲ್ಲಿ ಇರುವ ಹಲವಾರು ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು, ಸುಳ್ಳು ಸುದ್ದಿಗಳನ್ನು ಹೋಗಲಾಡಿಸುವ ಪ್ರಯತ್ನ ಇಲ್ಲಿದೆ.

  • ಜಾನುವಾರು ಕರು ಹಾಕಿದ ಮೇಲೆ ಮಾಸು / ಸತ್ತೆ / ಕಸ ಬೀಳಬೇಕಾದರೆ ಜೋತಾಡುತ್ತಿರುವ ಅದರ ತುದಿಗೆ ಕಸಬರಿಗೆ, ಚಪ್ಪಲಿ ಅಥವಾ ಚಿಕ್ಕ ಕಲ್ಲನ್ನು ಕಟ್ಟಬೇಕು, ಭತ್ತವನ್ನು ತಿನ್ನಲು ಕೊಡಬೇಕು: ಸತ್ತೆ ಬೀಳಲು ರೈತರು ಮಾಡಬೇಕಾದ್ದು ಏನೂ ಇಲ್ಲ. ಕರು ಹಾಕಿದನಂತರ 8 ರಿಂದ 12 ತಾಸು ಕಾಯಬೇಕು. ನಂತರವೂ ಬೀಳದಿದ್ದರೆ ವೈದ್ಯರ ಸಹಾಯ ಅಗತ್ಯ.ಗರ್ಭದ ಕೊನೆಯ ಮೂರು ತಿಂಗಳು ಪೌಷ್ಟಿಕ ಪಶುಆಹಾರದ ಜೊತೆಗೆ ಹುರುಳಿಯನ್ನು ಹೆಚ್ಚಿನದಾಗಿ ನೀಡಿದರೆ ರಾಸಿನ ಆರೋಗ್ಯವೂ ಚೆನ್ನಾಗಿರುವುದಲ್ಲದೇ ಸತ್ತೆ ಕೂಡ ಬೇಗ ಬೀಳುತ್ತದೆ.
  • ಸತ್ತೆಯನ್ನು ರಾಸು ತಿಂದುಬಿಟ್ಟರೆ ಏನೋ ಅಪಾಯ ಕಾದಿದೆ: ಸಾಧ್ಯವಾದರೆ ರಾಸು ತನ್ನ ಸತ್ತೆಯನ್ನು ತಿನ್ನದಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ತಿಂದುಬಿಟ್ಟರೆ ಪ್ರಮಾದವೇನೂ ಆಗುವುದಿಲ್ಲ. ಕೊಂಚ ಅಜೀರ್ಣವಾದೀತು ಅಷ್ಟೆ. ಜೀರ್ಣಕಾರಕ ಔಷಧಿಯನ್ನು ನೀಡಿದರೆ ಸರಿಯಾಗುತ್ತದೆ.ಅಪರೂಪಕ್ಕೆ ಕೆಲವು ರಾಸುಗಳ ಹಾಲಿನ ಉತ್ಪಾದನೆ ಕಡಿಮೆಯಾಗಬಹುದು. ಹೀಗಾದಲ್ಲಿ ವೈದ್ಯರ ಸಲಹೆ ಪಡೆದು ಉಪಚಾರ ಕೈಗೊಂಡರೆ ಪರಿಹಾರ ಸಾಧ್ಯ.
  • ಜಾನುವಾರು ಕರು ಹಾಕಿದ ಮೇಲೆ ಮಾಸು ಬಿದ್ದ ನಂತರವೇ ಕರುವಿಗೆ ಹಾಲು ಕುಡಿಸಬೇಕು: ಮಾಸು ಬೀಳುವುದಕ್ಕೂ ಹಾಲು ಕುಡಿಸುವುದಕ್ಕೂ ಸಂಬಂಧವಿಲ್ಲ. ಮಾಸು ಬೀಳಲು 8 ರಿಂದ 12 ತಾಸುಗಳವರೆಗೆ ಕಾಯಬಹುದು. ಆದರೆ ಹುಟ್ಟಿದ ಕರುವಿಗೆ ಅರ್ಧ ಗಂಟೆಯೊಳಗೆ ಹಾಲು ಕುಡಿಸಲೇಬೇಕು.
  • ಸತ್ತೆ ಬೀಳುವವರೆಗೆ ಕರು ಹಾಕಿದ ಹಸುವಿಗೆ ಆಹಾರ ನೀರು ಕೊಡಬಾರದು: ಆಗತಾನೇ ಕರು ಹಾಕಿದ ರಾಸು ಸುಸ್ತಾಗಿರುತ್ತದೆ.ಅದಕ್ಕೆ ಒಂದು ಬಕೇಟಿನಷ್ಟು ಶುದ್ಧ ನೀರನ್ನು ಕೊಡಬೇಕು. ಪಶು ಆಹಾರವನ್ನೂ ಕೊಡಬೇಕು. ತಪ್ಪು ಕಲ್ಪನೆಯಿಂದ ಸತ್ತೆ ಬೀಳುವವರೆಗೆ ಉಪವಾಸ ಬಿಡುವುದು ಅಮಾನವೀಯ.
  • ಕರುವಿಗೆ ಗಿಣ್ಣದ ಹಾಲನ್ನು ನೀಡಿದರೆ ಜಂತುಹುಳುಗಳಾಗುತ್ತವೆ: ಜಂತುಹುಳುಗಳಿಗೂ ಗಿಣ್ಣದ ಹಾಲಿಗೂ ಸಂಬಂಧವಿಲ್ಲ. ಬದಲಿಗೆ ಗಿಣ್ಣದ ಹಾಲನ್ನು ಯಥೇಚ್ಚವಾಗಿ ಕೊಡಬಹುದು. ಇದರಿಂದ ಕರುವಿನ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಉತ್ತಮ ಬೆಳವಣಿಗೆಗೂ ಕಾರಣವಾಗುತ್ತದೆ. ಏನೇ ಇದ್ದರೂ ಕರುಗಳಿಗೆ ಹುಟ್ಟಿದ 15 ದಿನಗಳಿಂದ ಆರಂಭಿಸಿ ನಿಯಮಿತವಾಗಿ ಜಂತುನಾಶಕ ಔಷಧಿಯನ್ನು ಕೊಡಲೇಬೇಕು.
  • ಜಂತಿನ ಔಷಧ ಹಾಕಿದರೂ ಜಂತುಹುಳಗಳು ಬೀಳುವುದಿಲ್ಲ: ಜಂತುಹುಳುಗಳು ಬಿದ್ದಿದ್ದು ಕಣ್ಣಿಗೆ ಕಾಣಲೇಬೇಕೆಂದಿಲ್ಲ. ಈಗಿನ ಆಧುನಿಕ ಜಂತುನಾಶಕ ಔಷಧಿಗಳು ಹೊಟ್ಟೆ ಮತ್ತು ಕರುಳುಗಳಲ್ಲಿನ ಜಂತಿನ ಕ್ರಿಮಿಗಳನ್ನು ಅಲ್ಲಿಯೇ ಕರಗಿಸಿ ಜೀರ್ಣವಾಗುವಂತೆ ಮಾಡಿಬಿಡುತ್ತವೆ.
  • ಕರುಗಳಿಗೆ ಹಿಂಡಿಮಿಶ್ರಣ ನೀಡಿದರೆ ಜೋಲು ಹೊಟ್ಟೆ ಬರುತ್ತದೆ: ಕರುಗಳಿಗೆ ಆಕಳಿಗೆ ಹಾಕುವ ಮಾಮೂಲಿನ ಹಿಂಡಿಯ ಬದಲು ಹೆಚ್ಚು ಪ್ರೊಟೀನ್ ಯುಕ್ತ ಹಿಂಡಿಮಿಶ್ರಣ ಕೊಡುತ್ತ ಬಂದರೆ ಜೋಲು ಹೊಟ್ಟೆ ಬರುವುದಿಲ್ಲ ಮತ್ತು ಬೆಳವಣಿಗೆಯೂ ಉತ್ತಮವಾಗಿರುತ್ತದೆ.
  • ಬಾಣಂತಿ ಜಾನುವಾರುಗಳಿಗೆ ಅಕ್ಕಿಯ ಗಂಜಿ ಮತ್ತು ಬೆಲ್ಲ ಕೊಡಬೇಕು,ಹಸಿರು ಮೇವು, ಪಶು ಆಹಾರ ಕೊಡಬಾರದು,ತಣ್ಣೀರನ್ನು ಕೊಡಬಾರದು, ಹನ್ನೊಂದು ದಿನ ಬಾಣಂತನ ಮಾಡಬೇಕು : ಮಲೆನಾಡಿನ ಪ್ರದೇಶದಲ್ಲಿ ಈ ತಪ್ಪು ಪದ್ಧತಿ ಬಹುವಾಗಿ ಚಾಲ್ತಿಯಲ್ಲಿದೆ. ಕರು ಹಾಕಿದ ದಿನದಿಂದ ಕಿಲೋಗಟ್ಟಲೆ ಅಕ್ಕಿಯನ್ನು ಬೇಯಿಸಿ ಗಂಜಿ ತಯಾರಿಸಿ ವಾರಗಟ್ಟಲೇ ಕೊಡುತ್ತಾರೆ. ಕೆಲವರು ಸೇರುಗಟ್ಟಲೆ ಬೆಲ್ಲವನ್ನೂ ಕೊಡುತ್ತಾರೆ. ಇದು ತಪ್ಪು. ಗಂಜಿ , ಹೆಚ್ಚು ಬೆಲ್ಲ ಮತ್ತು ಯಾವುದೇ ಸಿಹಿ ಪದಾರ್ಥಗಳಿಂದ ಅವುಗಳ ಹೊಟ್ಟೆಯಲ್ಲಿ ಅತಿಯಾದ ಆಮ್ಲೀಯ ವಾತಾವರಣ ಉಂಟಾಗಿ ಹಸು ಆಹಾರವನ್ನು ತಿನ್ನುವುದಿಲ್ಲ. ಕರು ಹಾಕಿದ ನಂತರ ಉತ್ತಮ ಪಶುಆಹಾರವೆಂದರೆ ಅದು ಹಸಿರು ಮೇವು, ಮತ್ತು ಒಣಮೇವು ಕೊಡಬೇಕೇ ವಿನಃ ಬಾಣಂತನದ ನೆಪದಲ್ಲಿ ಬಿಸಿನೀರು, ಗಂಜಿ, ಜೀರಿಗೆ-ಮೆಣಸಿನಪುಡಿಯ ಕಷಾಯ ಇತ್ಯಾದಿಗಳನ್ನು ಕೊಟ್ಟು ಹಿಂಸಿಸಬಾರದು.
  • ಬಾಣಂತಿ ಜಾನುವಾರುಗಳಿಗೆ ಪಥ್ಯ ಮಾಡಿಸಿ ಹೊಟ್ಟೆ ಒಣಗಿಸಬೇಕು: ಕರು ಹಾಕಿದ ನಂತರ ಜಾನುವಾರುಗಳ ಮಡಿಲಿನಿಂದ ಸುಮಾರು ಹದಿನೈದು ದಿನಗಳವರೆಗೆ ಬಿಳಿಕೆಂಪು ಮಿಶ್ರಿತ ಲೋಳೆ/ಕೊಳೆ ಹೋಗುವುದು ಸಹಜ. ಇಷ್ಟು ದಿನಗಳ ನಂತರವೂ ಲೋಳೆ ಹೋದರೆ ಅಥವಾ ಲೋಳೆಯು ದುರ್ವಾಸನೆಯಿಂದ ಕೂಡಿದ್ದರೆ ಚಿಕಿತ್ಸೆ ಅಗತ್ಯ. ಬದಲಿಗೆ ಇಂತಹ ಕೊಳೆ ಹೋಗಬಾರದೆಂದರೆ ಅವುಗಳ ಹೊಟ್ಟೆ ಒಣಗಿಸಬೇಕೆಂದು ಕೆಲವರು ವಿವಿಧ ಬಗೆಯ ಕಷಾಯವನ್ನೋ ಇಲ್ಲವೇ ಪಥ್ಯವನ್ನೋ ಮಾಡಿಸುತ್ತಾರೆ. ಲೋಳೆ ಬರುವುದು ಗರ್ಭಕೋಶದಿಂದಲೇ ಹೊರತು ಹೊಟ್ಟೆಯಿಂದಲ್ಲ. ಹಾಗಾಗಿ ಹೊಟ್ಟೆಯನ್ನು ಒಣಗಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
  • ಕೃತಗರ್ಭಧಾರಣೆ ಮಾಡಿಸಿದ ನಂತರ ಹಸುವಿನ ಹಿಂಭಾಗವನ್ನು ಎತ್ತರಿಸಿ ಕಟ್ಟಬೇಕು, ನೀರು ಹುಲ್ಲು ಕೊಡಬಾರದು : ಇಂತಹ ಕ್ರಮಗಳಿಗೆ ಯಾವುದೇ ವೈಜ್ಞಾನಿಕವಾದ ಆಧಾರಗಳಿಲ್ಲ. ಕೃತಕಗರ್ಭಧಾರಣೆ ಮಾಡಿಸಿದ ನಂತರ ಹಸುವಿನ ಮೈಮೇಲೆ ತಂಪಾದ ನೀರು ಹಾಕಬಹುದು. ಕೃತಕಗರ್ಭಧಾರಣೆ ಮಾಡಿಸುವ ಸಮಯದಲ್ಲಿ ಹಸುವನ್ನು ಶಾಂತವಾಗಿರಿಸಿಕೊಳ್ಳಬೇಕು. ಬೆದರಿಸಬಾರದು. ಆಹಾರ ಕೊಡಬಹುದು.
  • ಬ್ಬಾದ ರಾಸುಗಳಿಗೆ ಹಿಂಡಿ (ಪಶು ಆಹಾರ) ಹಾಕಿದರೆ ಕರು ದೊಡ್ಡದಾಗಿ ಬೆಳೆದು ಕರುಹಾಕುವಾಗ ರಾಸುವಿಗೆ ಕಷ್ಟವಾಗುತ್ತದೆ: ಗಬ್ಬಾದ ರಾಸುಗಳಿಗೆ ಪಶುಆಹಾರ ನೀಡದಿದ್ದರೆ ತಾಯಿಯ ದೇಹದಲ್ಲಿ ಶೇಖರಿಸಿಟ್ಟ ಪೋಷಕಾಂಶಗಳು ಕರುವಿನ ಬೆಳವಣಿಗೆಗೆ ಖರ್ಚಾಗುವುದರಿಂದ ತಾಯಿ ಬಡವಾಗುತ್ತದೆಯೇ ವಿನಹ ಕರು ಮಾತ್ರ ತನ್ನ ಆನುವಂಶೀಯ ಗುಣಕ್ಕನುಸಾರವಾಗಿ ಬೆಳೆಯುತ್ತಿರುತ್ತದೆ. ಪೌಷ್ಟಿಕತೆ ಕಡಿಮೆಯಾದರೆ ಬಹಳಷ್ಟು ತುಂಬು ಗರ್ಭದ ರಾಸುಗಳು ಮಲಗಿದರೆ ಏಳಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ರಾಸುಗಳು ಇದರಿಂದ ನೆಲ ಹಿಡಿದು ಸಾಯುತ್ತವೆ. ಹೀಗಾಗಿ ಗರ್ಭವಾಗಿ ಏಳು ತಿಂಗಳ ನಂತರ ಉತ್ತಮ ಪೌಷ್ಟಿಕ ಆಹಾರವನ್ನು ಅಧಿಕವಾಗಿ ಕೊಡಬೇಕು.
  • ವಿವಿಧ ರೋಗಗಳು ಬರುವುದು ಕೆಟ್ಟ ದೃಷ್ಟಿಯಿಂದ, ಮಂತ್ರ, ಬೂದಿ, ನಿಂಬೆಹಣ್ಣು ಮಾಡುವುದರಿಂದ, ಬರೆ ಹಾಕುವುದರಿಂದ ಸರಿಹೋಗುತ್ತದೆ : ಜೀವ ಎಂದ ಮೇಲೆ ಒಂದಲ್ಲ ಒಂದು ರೋಗ ಬಂದೇ ಬರುತ್ತದೆ. ಇದಕ್ಕೆ ತಕ್ಕ ಚಿಕಿತ್ಸೆಯನ್ನು ನೀಡಬೇಕೇ ಹೊರತು ಮಾಯ ಮಂತ್ರಗಳಿಂದಲ್ಲ. ಅದರಲ್ಲೂ ನೋವು ಉಂಟಾದಾಗ ಬರೆ ಹಾಕುವಂತ ರಣವೈದ್ಯ ಖಂಡಿತಾ ಒಳ್ಳೆಯದಲ್ಲ.
  • ರಾಸುಗಳಿಗೆ ಭೇದಿಯಾದಾಗ ನೀರು ಕುಡಿಸಬಾರದು: ರಾಸುಗಳಿಗೆ ಭೇದಿಯಾದಾಗ ಅವುಗಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಯಥೇಚ್ಚವಾಗಿ ನೀರನ್ನು ಕುಡಿಸಬೇಕು. ಭೇದಿಗೆ ಕಾರಣವನ್ನು ತಿಳಿದು ಚಿಕಿತ್ಸೆ ಮಾಡಬೇಕೇ ವಿನಃ ನೀರನ್ನು ತಡೆಹಿಡಿಯುವುದರಿಂದ ಭೇದಿಯನ್ನು ನಿಲ್ಲಿಸಲು ಸಾಧ್ಯವಿಲ್ಲ.
  • ಮಿಶ್ರತಳಿ ಹಸುಗಳಿಗೆ ರೋಗ ಜಾಸ್ತಿ, ನಾಟಿ ತಳಿಗಳಿಗೆ ಯಾವುದೇ ರೋಗ ಬರುವುದಿಲ್ಲ : ಎಲ್ಲಿ ಲಾಭವಿದೆಯೋ ಅಲ್ಲಿ ಸ್ವಲ್ಪ ಅಪಾಯ ಇದ್ದೇ ಇದೆ. ಮಿಶ್ರತಳಿ ಹಸುಗಳು ಅಧಿಕ ಹಾಲಿನ ಉತ್ಪಾದನೆ ಮಾಡುವುದರಿಂದ ಅದಕ್ಕೆ ತಕ್ಕಂತೆ ಸೂಕ್ತ ವೈಜ್ಞಾನಿಕ ಉಪಚಾರ ಮತ್ತು ಆಹಾರ ಬೇಕು. ನಾಟಿ ಹಸುಗಳಿಗಿಂತ ಸೂಕ್ಷ್ಮವೂ ಹೌದು. ಹಾಗೆಂದ ಮಾತ್ರಕ್ಕೆ ನಾಟಿತಳಿಗಳೇ ಅತ್ಯುತ್ತಮ ಎನ್ನುವುದು ಅಂತಹ ಸೂಕ್ತವಾದ ವಿಚಾರ ಅಲ್ಲ. ಅಲ್ಲದೇ ಜೀವಿಯೆಂದಾದ ಮೇಲೆ ರೋಗ-ರುಜಿನಗಳು ಎಲ್ಲಾ ಪ್ರಾಣಿಗಳನ್ನೂ ಬಾಧಿಸುತ್ತವೆ.
  • ಗರ್ಭದ ರಾಸುಗಳಿಗೆ ಯಾವುದೇ ಚುಚ್ಚುಮದ್ದನ್ನು ನೀಡಬಾರದು.ಇದರಿಂದ ಕಂದುಹಾಕುತ್ತವೆ: ಅನಾರೋಗ್ಯದ ಸಂದರ್ಭದಲ್ಲಿ ಕೆಲವೊಮ್ಮೆ ಚುಚ್ಚುಮದ್ದಿನ ಅಗತ್ಯವಿರುತ್ತದೆ.ಆಗ ಅದನ್ನು ಕೊಡಲೇಬೇಕು. ಗರ್ಭದ ರಾಸುಗಳಿಗೆ ಯಾವ ಇಂಜೆಕ್ಷನ್ ಕೊಡಬೇಕು,ಯಾವುದನ್ನು ಕೊಡಬಾರದು ಎಂದು ತಜ್ಞ ವೈದ್ಯರಿಗೆ ತಿಳಿದಿರುತ್ತದೆ. ನಿರ್ಧಾರವನ್ನು ಅವರಿಗೇ ಬಿಡಿ. ಒಂದು ವೇಳೆ ಹಸುವಿನ ಜೀವ ಉಳಿಯುವುದಾದರೆ ಕರು ಸತ್ತರೂ ಹೆಚ್ಚಿನ ನಷ್ಟವಾಗುವುದಿಲ್ಲ.
  • ರಾಸುಗಳಿಗೆ ಲಸಿಕೆ ಹಾಕಿಸಿದರೆ ಅವು ಬಡಕಲಾಗುತ್ತವೆ : ಇದು ತಪ್ಪು ಕಲ್ಪನೆ. ಅವಶ್ಯವಾದ ಲಸಿಕೆಯನ್ನು ಹಾಕಿಸಲೇ ಬೇಕು. ಸ್ವಲ್ಪ ಜ್ವರ ಬಂದು ನಂತರ ಸರಿಯಾಗುತ್ತವೆ. ಜಾನುವಾರಿನ ಜೀವ ಅಮೂಲ್ಯ.

ಇಂತಹ ತಪ್ಪು ಕಲ್ಪನೆಗಳ ಈ ಪಟ್ಟಿಗೆ ಕೊನೆಯಿಲ್ಲ. ಇಲ್ಲಿ ಕೆಲವು ತಪ್ಪು ಕಲ್ಪನೆಗಳ ಪಟ್ಟಿ ಮಾತ್ರ ಮಾಡಲಾಗಿದೆ. ಅಯಾ ಪ್ರದೇಶಕ್ಕೆ ತಕ್ಕಂತೆ ಈ ಮೂಢ ನಂಬಿಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ತಪ್ಪು ವಿಚಾರಗಳನ್ನು ಮಾಡದೇ ವೈಜ್ಞಾನಿಕವಾಗಿ ಪಾಲನೆ ಮಾಡಿದರೆ ಹೈನುಗಾರಿಕೆಯಲ್ಲಿ ಯಶಸ್ಸು ಸಾಧ್ಯ.

ಲೇಖಕರು :

ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, 

ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,

ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ, ಕರ್ನಾಟಕ.

ಜಾನುವಾರುಗಳಲ್ಲಿ ರಕ್ತ ಹೀನತೆ : ಕಾರಣ ಮತ್ತು ಲಕ್ಷಣಗಳು?