News

ಮೇ 22 ರಿಂದ 18-44 ವರ್ಷದವರಿಗೆ ಕೊರೋನಾ ಲಸಿಕೆ ಅಭಿಯಾನ; ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಆದ್ಯತೆ

21 May, 2021 5:14 PM IST By:
vaccination

ಮೇ 22ರಿಂದ 18-44 ವರ್ಷದೊಳಗಿನ ವಯೋಮಾನದವರಿಗೆ ಕೊರೊನಾ ಲಸಿಕೆ ವಿತರಣೆ ಪುನಾರಂಭಿಸಲಿದ್ದು, ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು.

ಕರ್ನಾಟಕದಲ್ಲಿ ಈಗ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಹಾಕಲಾಗುತ್ತಿದೆ. ಆದರೆ 18-44 ವರ್ಷದವರಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಈವರೆಗೆ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈಗ ಆರೋಗ್ಯ ಸಚಿವ ಸುಧಾಕರ್​ ಅವರು ಟ್ವೀಟ್​ ಮಾಡಿರುವ ಅವರು, ಮೇ 22 ರಿಂದ 18-44 ವರ್ಷದವರಿಗೆ ಕೊರೋನಾ ಲಸಿಕೆ ಹಾಕುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಮೇ 1 ರಂದೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಾಂಕೇತಿಕ ಚಾಲನೇ ನೀಡಿದ್ದರೂ ಎಲ್ಲರಿಗೂ ಲಸಿಕೆ ಸಿಕ್ಕಿರಲಿಲ್ಲ. ಲಸಿಕಾ ಕೊರತೆಯಿಂದ 18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನ ಎರಡು ಬಾರಿ ಮುಂದಕ್ಕೆ ಹೋಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದೆಲ್ಲೆಡೆ 18-44 ವರ್ಷ ವಯೋಮಾನದವರಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪುಗಳನ್ನು ಗುರುತಿಸಿ ಮೇ 22 ರಿಂದ ಕೋವಿಡ್ ಲಸಿಕೆ ನೀಡಬೇಕೆಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.ಆದ್ಯತಾ ವಲಯದ ಫಲಾನುಭವಿಗಳನ್ನು ಗುರುತಿಸಲು, ಲಸಿಕೆ ದಾಸ್ತಾನು ಪರಿಶೀಲಿಸಿ ಸೂಕ್ತವಾಗಿ ಲಸಿಕೆ ಹಾಕುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಆದೇಶದಲ್ಲಿ ತಿಳಿಸಿದ್ದಾರೆ.

ಯಾರು ಮುಂಚೂಣಿ ಕಾರ್ಯಕರ್ತರು

ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುತ್ತದೆ.ಈ ಪೈಕಿ, ಮಾಧ್ಯಮ ಸಿಬ್ಬಂದಿ, ಅಂಗವಿಕಲರು, ಚಿತಾಗಾರ, ರುದ್ರಭೂಮಿ ಸಿಬ್ಬಂದಿ, ಕೈದಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಕುಟುಂಬ ಸದಸ್ಯರು, ಕೊರೋನಾ ಸೇವೆಗೆ ನಿಯೋಜಿಸಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ.
ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿ, ಬೀದಿ ಬದಿ ವ್ಯಾಪಾರಿಗಳು, ಭದ್ರತೆ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು, ತೀವ್ರ, ಅನಾರೋಗ್ಯವುಳ್ಳವರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಆಸ್ಪತ್ರೆಗಳಲ್ಲಿ ಸರಕು ಸರಬರಾಜು ಮಾಡುವವರು.ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು, ಔಷಧ ತಯಾರಕರು, ವೃದ್ಧಾಶ್ರಮ ವಾಸಿಗಳು ಹಾಗೂ ನಿರ್ಗತಿಕರು, ಆಹಾರ ನಿಗಮ ಸಿಬ್ಬಂದಿ, ಎಪಿಎಂಸಿ ಕೆಲಸಗಾರರು.

ಅದೇ ರೀತಿ, ಆದ್ಯತಾ ಗುಂಪಿನಲ್ಲಿ ಕಟ್ಟಡ ಕಾರ್ಮಿಕರು, ಟೆಲಿಕಾಂ ಇಂಟರ್‌ನೆಟ್ ಸೇವಾದಾರರು, ವಿಮಾನ ಸಂಸ್ಥೆ ಸಿಬಂದಿ, ಬ್ಯಾಂಕ್ ಸಿಬಂದಿ, ವಕೀಲರು, ಚಿತ್ರರಂಗ ಸಿಬಂದಿ, ಹೊಟೇಲ್ ಸಿಬಂದಿ, ಕೆಎಂಎಫ್ ಸಿಬಂದಿ, ಗಾರ್ಮೆಂಟ್ಸ್ ನೌಕರರು, ರೈಲ್ವೇ ಸಿಬಂದಿ, ಅರಣ್ಯ ಇಲಾಖೆ ಸಿಬಂದಿ, ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಆಟಗಾರರು, ಗೇಲ್, ಎಚ್‌ಎಎಲ್, ಎಚ್‌ಎಎಲ್ ಸಿಬಂದಿ ಇದ್ದಾರೆ.