ವಿವಿಧ ಬೆಳೆಗಳಿಗೆ ಶಿಫಾರಸ್ಸು ಮಾಡಲಾದ ಕಳೆನಾಶಕಗಳನ್ನು ಮಾತ್ರ ಬಳಸುವ ಜೊತೆಗೆ, ರಾಸಾಯನಿಕ ಗೊಬ್ಬರ, ಕಳೆನಾಶಕಗಳ ಬಳಕೆ ಪ್ರಮಾಣ, ಸಿಂಪಡಣೆಯ ಸಮಯ ಹಾಗೂ ಇತರ ಅಂಶಗಳನ್ನು ಗಮನದಲ್ಲಿರಿಸಿಕೊಂಡು ರೈತರು ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎಂದು ಹಾವೇರಿ ಜಿಲ್ಲೆ ಹನಮನಮಟ್ಟಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ. ಅಶೋಕ ಪಿ. ಅವರು ಸಲಹೆ ನೀಡಿದರು.
ಬೇರೆ ಬೆಳೆಗಳಿಗೆ ನೀಡುವ ಕಳೆನಾಶಕವನ್ನು ಬಳಸಿದ್ದರಿಂದ ಸೋಯಾ ಅವರೆ ಬೆಳೆ ಹಾನಿಗೊಳಗಾಗಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಳಲಗೇರಿ ಗ್ರಾಮದ ರೈತರಾದ ಬಸವರಾಜ ಓಲೇಕಾರ ಅವರ ಜಮೀನಿಗೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ತಂದೊAದಿಗೆ ಭೇಟಿ ನೀಡಿದ್ದ ಅವರು, ಸೋಯಾ ಅವರೆ ಬೆಳೆಯನ್ನು ಹಾವೇರಿ ಜಿಲ್ಲೆಯ ಹಾನಗಲ್ಲ, ಶಿಗ್ಗಾಂವ, ಹಾವೇರಿ, ಸವಣೂರ, ಬ್ಯಾಡಗಿ ತಾಲೂಕುಗಳ ಸೂತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ಬೆಳೆ ನಿರ್ವಹಣೆ ಬಗ್ಗೆ ಈ ಭಾಗದ ರೈತರಿಗೆ ಸೂಕ್ತ ಮಾಹಿತಿ ಇಲ್ಲದೆ ಕಳೆ ನಾಶಕಗಳ ಅವ್ಶೆಜ್ಞಾನಿಕ ಬಳಕೆಯಿಂದಾಗಿ ಬೆಳೆಗೆ ಹಾನಿಯಾಗಿದೆ ಎಂದು ಹೇಳಿದರು.
ರೈತ ಬಸವರಾಜ ಅವರು ಸೋಯಾ ಬೀನ್ ಬೀಜಗಳನ್ನು ಬಿತ್ತಿದ ದಿನವೇ ಗೋವಿನಜೋಳ, ಕಬ್ಬು, ಊಟದ ಜೋಳ, ಸಜ್ಜೆ ಬೆಳೆಗಳಿಗೆ ಬಳಸುವ ಅಟ್ರಾಜೀನ್ ಎಂಬ ಕಳೆನಾಶವನ್ನು ಬಳಸಿದ್ದರು. ಪ್ರಸ್ತುತ ಬಿತ್ತನೆ ಮಾಡಿ ಹದಿನೈದು ದಿನಗಳು ಕಳೆದಿದ್ದು, ಅಲ್ಲಲ್ಲಿ ಸೋಯಾ ಗಿಡದ ಎಲೆಗಳು ಒಣಗಿವೆ. ಹಲವೆಡೆ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಬಿತ್ತನೆಗೆ ಮುನ್ನ ಕೈಗೊಳ್ಳುವ ಭೂಮಿಯ ಪೂರ್ವ ಸಿದ್ಧತೆಯು ಕಳೆಗಳ ನಿರ್ವಹಣೆಯಲ್ಲಿ ಅತ್ಯಂತ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಸಮಗ್ರ ಕಳೆ ನಿರ್ವಹಣೆ ವಿಧಾನಗಳನ್ನು ಅನುಸರಿಸಿದ್ದೇ ಆದಲ್ಲಿ ಬೆಳೆ ಉತ್ತಮವಾಗಿ ಬರುತ್ತದೆ. ಅದರಲ್ಲೂ ಸೋಯಾ ಅವರೆ ಬೆಳೆಯಲ್ಲಿ ನಿಗದಿ ಪಡಿಸಿದ ಕಳೆನಾಶಕಗಳನ್ನು ಮಾತ್ರ ಬಳಸಬೇಕು ಎಂದರು. ಈ ವೇಳೆ ಪ್ರತಿಕ್ರಿಯಿಸಿದ ರೈತ, ‘ಕಳೆನಾಶಕಗಳ ಬಳಕೆ ಬಗ್ಗೆ ಮಾಹಿತಿ ಇಲ್ಲದ ಕಾರಣ ಬೆಳೆ ಒಣಗುವಂತಾಗಿದೆ’ ಎಂದು ಅಳಲು ತೋಡಿಕೊಂಡರು.
ರೈತರು ಸೋಯಾ ಅವರೆ ಬಿತ್ತನೆಯಾದ ದಿನ ಅಥವಾ ಮರುದಿನ ಪ್ರತಿ ಎಕರೆಗೆ 1.6 ಲೀಟರ್ ಅಲಾಕ್ಲೋರ್ 50 ಇ.ಸಿ. ಅಥವಾ 0.8 ಲೀ. ಕ್ಲೋಮಾಜೋನ್ 50 ಇ.ಸಿ. ಅಥವಾ 1.3 ಲೀಟರ್ ಪೆಂಡಿಮಿಥಲಿನ್ 30 ಇ.ಸಿ. ಅನ್ನು 300 ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಪ್ರದೇಶಕ್ಕೆ ಮಣ್ಣಿನ ಮೇಲೆ ಸಿಂಪಡಿಸಬೇಕು. ಬಿತ್ತನೆ ಮಾಡಿದ ಹದಿನೈದು ದಿನಗಳ ಒಳಗಾಗಿ ಕ್ಲೋರಿಮ್ಯುರಾನ್ ಕಳೆನಾಶಕವನ್ನು ಸಿಂಪಡಣೆ ಮಾಡಬೇಕು. ನಂತರ 20-25 ದಿನಗಳ ಅವಧಿಯಲ್ಲಿ ಒಂದು ಬಾರಿ ಅಂತರ ಬೇಸಾಯ ಮಾಡಬೇಕು. ಬಿತ್ತುವ ಸಮಯದಲ್ಲಿ ಕಳೆನಾಶಕಗಳನ್ನು ಮಣ್ಣಿನ ಮೇಲೆ ಸಿಂಪಡಿಸುವುದರಿಂದ ಕಳೆಗಳು ಹುಟ್ಟುವ ಮುನ್ನವೇ ಸಾಯುತ್ತವೆ. ಇದರಿಂದ ಬೆಳೆಗೆ ಅತ್ಯಂತ ಪ್ರಮುಖ ಅವಧಿ ಎಂದು ಪರಿಗಣಿಸುವ ಮೊದಲ 30-35 ದಿನಗಳ ಹಂತದಲ್ಲಿ ಕಳೆಗಳಿಂದ ಯಾವುದೇ ಪೈಪೋಟಿ ಎದುರಾಗುವುದಿಲ್ಲ. ಜೊತೆಗೆ ಬೆಳೆಯು ಆರೋಗ್ಯಕರ ಹಾಗೂ ಸಮೃದ್ಧವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ಕಳೆನಾಶಕ ಬಳಸುವ ಮುನ್ನ ಗಮನಿಸಿ
- ಅಂತರ ಬೇಸಾಯ, ಕೈಗಳೆ, ಹೊದಿಕೆ ಕ್ರಮಗಳಿಂದ ಹಾಗೂ ಕಳೆನಾಶಕ ಸಿಂಪಡಿಸುವ ಮೂಲಕ ಕಳೆಗಳನ್ನು ನಿಯಂತ್ರಿಸಬಹುದು.
- ಕಳೆನಾಶಕಗಳನ್ನು ಕೈಪಂಪುಗಳಿAದ ಮಾತ್ರ ಸಿಂಪಡಿಸಬೇಕು. ಹಾಗೇ, ಫ್ಲಾಟ್ ಫ್ಯಾನ್/ಫ್ಲಡ್‌ಜೆಟ್ ನಾಜಲ್ ಡಬ್ಲೂಎಫ್‌ಎಸ್-78 ಅಥವಾ ಡಬ್ಲೂಎಫ್‌ಎಸ್-62 ಉಪಯೋಗಿಸಿ.
- ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 750 ಲೀಟರ್ ಸಿಂಪಡಣೆ ದ್ರಾವಣ ಉಪಯೋಗಿಸಬೇಕು (ಪ್ರತಿ ಎಕರೆಗೆ 300 ಲೀಟರ್). ಕಳೆನಾಶಕಗಳನ್ನು ಸಿಂಪಡಿಸುವಾಗ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರಬೇಕು.
- ಬಿತ್ತನೆಗಾಗಿ ಸಿದ್ಧಗೊಂಡ ಜಮೀನಿನಲ್ಲಿ ಹೆಂಟೆಗಳು ಇರಬಾರದು. ಕಳೆನಾಶಕ ಸಿಂಪಡಿಸಿದ ಸ್ಥಳವನ್ನು ತುಳಿದಾಡಬಾರದು ಮತ್ತು ಸಿಂಪಡಣೆ ಮಾಡುತ್ತಾ ಹಿಂದಕ್ಕೆ ಹೋಗಬೇಕು.
- ಆಯಾ ಬೆಳೆಗೆ ಸಿಫಾರಸು ಮಾಡಿದ ಕಳೆನಾಶಕವನ್ನು ಸಿಫಾರಸು ಮಾಡಿದ ಸಮಯದಲ್ಲೇ ಸಿಂಪಡಣೆ ಮಾಡಬೇಕು.
- ಕಳೆನಾಶಕಗಳನ್ನು ಸಿಂಪಡಿಸಲು ಪ್ರತ್ಯೇಕ ಸಾಧನಗಳನ್ನು ಉಪಯೋಗಿಸಬೇಕು. ಯಾವುದೇ ಸಂದೇಹ, ಸಮಸ್ಯೆ ಇದ್ದಲ್ಲಿ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು.
ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ರಾಸಾಯನಿಕ ಕಳೆನಾಶಕಗಳನ್ನು ಬಳಸುವ ಮೂಲಕ ಕಳೆಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಬೆಳೆಯಲ್ಲೂ ನಿರ್ಧಿಷ್ಟ ಕಳೆನಾಶಕಗಳನ್ನು ಬಳಸುವುದರಿಂದ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಬಹುದು ಎಂದು ಹೇಳಿದ ಡಾ. ಅಶೋಕ ಅವರು, ಕಳೆನಾಶಕಗಳು ಕಳೆಗಳ ಬೆಳವಣಿಗೆಯನ್ನು ಪ್ರಾರಂಭದಲ್ಲಿಯೇ ಕುಂಠಿತಗೊಳಿಸುವುದರಿಂದ ಬೆಳೆಗಳು ಸಧೃಡವಾಗಿ ಬೆಳೆಯಲು ಅನುಕೂಲವಾಗುವುದು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರಾದ ಡಾ. ಶಾಂತವೀರಯ್ಯ ಹಾಗೂ ಗ್ರಾಮದ ರೈತರಾದ ರಘು ಕೋಟಿ, ಹನುಮಂತಪ್ಪ ಕೋಟಿ ಮತ್ತು ಮಂಜುನಾಥ ಕಿಳ್ಳಿಕ್ಯಾತ ಮತ್ತಿತ್ತರು ಹಾಜರಿದ್ದರು.