ಕೊರೊನಾ ಸಾಂಕ್ರಾಮಿಕ ಸೋಂಕಿನ ಎರಡನೇ ಅಲೆ ಬಹು ಸಂಖ್ಯೆಯ ಜನರನ್ನು ಬಾಧಿಸಿದ ಪರಿಣಾಮ ಲಾಕ್‌ಡೌನ್ ಘೋಷಿಸಿದ್ದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ, 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ರೂ.2000 ಗಳ ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಅಡಿಯಲ್ಲಿ ಪರಿಹಾರ ಧನ ಪಡೆಯಲು ಇಚ್ಛಿಸುವ ಅರ್ಹ ಫಲಾನುಭವಿಗಳು ಜುಲೈ 31ರೊಳಗೆ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಅಗಸರು, ಕ್ಷೌರಿಕರು (ಸವಿತಾ ಸಮಾಜ), ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ನೆರವಿನ ಪ್ಯಾಕೇಜ್ ಘೋಷಿಸಲಾಗಿದೆ. ಈ ವರ್ಗಗಳ ಬಿಪಿಎಲ್ ಕುಟುಂಬಕ್ಕೆ ಸೇರಿರುವ 18 ರಿಂದ 65 ವಯೋಮಾನದ ಒಳಗಿನದ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಆದರೆ ಬಿಪಿಎಲ್ ಕುಟುಂಬದ ಓಬ್ಬ ಫಲಾನುಭವಿಯು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹನಾಗಿರುತ್ತಾರೆ.
ಪರಿಹಾರಧನ ಪಡೆಯಲು ಫಲಾನುಭವಿಗಳು ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯವಾಗಿದ್ದು, ಸರ್ಕಾರ ಸೂಚಿಸಿರುವ ನಿಗದಿತ ವೃತ್ತಿ ನಿರ್ವಹಿಸುತ್ತಿರುವ ಕುರಿತು ಸಂಬಮಧಿಸಿದ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ http://sevasindhu.karnataka.gov.in ಪೋರ್ಟಲ್‌ನಲ್ಲಿ ಜುಲೈ 31 ರೊಳಗೆ ಅರ್ಜಿ ಸಲ್ಲಿಸಬೇಕು.
ದೃಢೀಕರಣ ಪ್ರಮಾಣ ಪತ್ರ ನೀಡುವ ಅಧಿಕಾರಿಗಳು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಾಡ್‌ಗಳ ಮಟ್ಟದಲ್ಲಿನ ಕಂದಾಯ ಅಧಿಕಾರಿ/ ಕಂದಾಯ ನಿರೀಕ್ಷಕರು/ ಹಿರಿಯ ಆರೋಗ್ಯ ಅಧಿಕಾರಿಗಳು/ ಆರೋಗ್ಯ ನಿರೀಕ್ಷಕರು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ/ ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿ/ ಕಂದಾಯ ನಿರೀಕ್ಷಕರು. ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರರು/ ಉಪ ತಹಶೀಲ್ದಾರರು/ ಕಂದಾಯ ಅಧಿಕಾರಿಗಳು/ ಕಂದಾಯ ನಿರೀಕ್ಷಕರು. ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು/ ಕಾರ್ಮಿಕ ಅಧಿಕಾರಿಗಳು/ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್‌ರಾಜ್ ಅಭಿವೃದ್ದಿ ಅಧಿಕಾರಿ (ಪಿಡಿಒ)/ ಕಾರ್ಯದರ್ಶಿ/.
ಇನ್ನು ಹಮಾಲಿ ವೃತ್ತಿಯಲ್ಲಿ ತೊಡಗಿಕೊಂಡ ಕಾರ್ಮಿಕರು ಮೇಲೆ ತಿಳಿಸಲಾಗಿರುವ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ/ ಮಂಡಳಿ/ ನಿಗಮದ ಅಧಿಕೃತ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಯಾವುದೇ ಇಲಾಖೆಯ ಪತ್ರಾಂಕಿತ (ಗೆಜೆಟೆಡ್ ಆಫೀಸರ್ಸ್) ಅಧಿಕಾರಿಗಳಿಂದಲೂ ಸೂಚಿತ ಪ್ರಮಾಣಪತ್ರ ಪಡೆಯಬಹುದು.
ಅರ್ಜಿದಾರರು ಅರ್ಜಿ ಸಲ್ಲಿಸಲು ಮಾರ್ಗದರ್ಶನ ಮತ್ತು ನೆರವಿಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇವಾ ಕೇಂದ್ರಗಳು/ವಾರ್ಡ್ ಮಟ್ಟದ ಸೇವಾ ಕೇಂದ್ರಗಳು/ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ, ಕಾರ್ಮಿಕ ಸೇವಾ ಕೇಂದ್ರಗಳನ್ನು ಅಥವಾ ಕಾರ್ಮಿಕ ನಿರೀಕ್ಷಕರು/ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು. ಹಾಗೂ ಕಾರ್ಮಿಕ ಸಹಾಯವಾಣಿ ಸಂಖ್ಯೆ: 155214 ಅಥವಾ ಸೇವಾ ಸಿಂಧು ಸಂಸ್ಥೆಯ ಸಂಖ್ಯೆ 80883 04855/ 63617 99796/ 93802 04364/ 93802 06704 ಸಂಪರ್ಕಿಸಬಹುದು ಎಂದು ಶಿವಮೊಗ್ಗ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.