News

ಉದ್ಯೋಗಿನಿ ಯೋಜನೆ'ಯಡಿ ಮಹಿಳೆಯರಿಂದ ವಿವಿಧ ಯೋಜನೆಯ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

17 September, 2021 5:06 PM IST By:

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಂಜೂರಾದ ಉದ್ಯೋಗಿನಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಯ ಅನುಕೂಲತೆ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ 2021-22 ನೇ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ವ್ಯಾಪಾರ, ಹೈನುಗಾರಿಕೆ ಹಾಗೂ ಗುಡಿ ಕೈಗಾರಿಕೆ ಇತ್ಯಾದಿ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಸಹಾಯಧನ ನೀಡಲು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು ವಯಸ್ಸಿನ ದೃಢೀಕರಣಕ್ಕಾಗಿ ಚುನಾವಣಾ ಗುರುತಿನ ಚೀಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಅಥವಾ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು. ಕುಟುಂಬದ ವಾರ್ಷಿಕ ಆದಾಯ ಎಸ್‍ಸಿ/ಎಸ್‍ಟಿ ರೂ.2 ಲಕ್ಷ, ವಿಶೇಷ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ರೂ.1.50 ಲಕ್ಷ ಮೀರಬಾರದು. ವಿಧವರೆಯರು, ಸಂಕಷ್ಟಕ್ಕೊಳಗಾದ ಮಹಿಳೆಯರು, ಅಂಗವಿಕಲ ಮಹಿಳೆಯರಿಗೆ ಆದಾಯ ಮಿತಿ ಇರುವುದಿಲ್ಲ. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಸಾಲ ಮಂಜೂರಾಗಿ ಬಿಡುಗಡೆಯ ಮುನ್ನ ಫಲಾನುಭವಿಗಳಿಗೆ ಉದ್ಯಮಶೀಲತಾ ತರಬೇತಿ ನೀಡಲಾಗುವುದು.

ಸೂಚನೆ : ಎಸ್‌ಸಿ / ಎಸ್‌ಟಿ ಮಹಿಳೆಯರಿಗೆ ಸಾಲದ ಮೊತ್ತಕ್ಕೆ ಶೇಕಡ 50 ರಷ್ಟು ಸಹಾಯಧನ ನೀಡಲಾಗುತ್ತದೆ. ಇತರೆ ವರ್ಗಗಳ ಮಹಿಳೆಯರಿಗೆ ಸಾಲದ ಮೊತ್ತಕ್ಕೆ ಶೇಕಡ.30 ರಷ್ಟು ಸಹಾಯಧನ ನಿಗದಿ ಮಾಡಲಾಗಿದೆ. ಸಾಲದ ಮಿತಿಯನ್ನು 1 ಲಕ್ಷದಿಂದ 3 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕಡೆಯ ದಿನವಾಗಿದ್ದು, ಅರ್ಜಿ ಹಾಗೂ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಅಥವಾ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಮೊ.ಸಂ: 9482031284, 9901755700 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಸುರೇಶ್ ತಿಳಿಸಿದ್ದಾರೆ.