ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಮತ್ತು ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿಗಳ ಅಡಿ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಶೇ 6ರ ಬಡ್ಡಿ ದರದಲ್ಲಿ 2.25 ಲಕ್ಷ ಸಾಲ ನೀಡುವಂತೆ ಮುಖ್ಯಮಂತ್ರಿ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸುವ ಕುರಿತು ಬ್ಯಾಂಕುಗಳ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಈ ಯೋಜನೆಗಳ ಫಲಾನುಭವಿಗಳಿಗೆ ಅಗತ್ಯವಾದ ಮೊತ್ತಕ್ಕೆ ತ್ವರಿತವಾಗಿ ಬ್ಯಾಂಕುಗಳಿಂದ ಸಾಲಸೌಲಭ್ಯ ಸಿಗುತ್ತಿರಲಿಲ್ಲ. ಪರಿಣಾಮವಾಗಿ ಖಾಸಗಿ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಪ್ರಯಾಸ ಪಡಬೇಕಾಗಿತ್ತು. ಈ ತೊಂದರೆ ನಿವಾರಿಸುವ ಸಲುವಾಗಿ ಬದಲಾವಣೆ ತರಲಾಗುವುದು ಎಂದರು.
‘ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಮತ್ತು ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿ ಅಡಿ ಯೋಜನೆಯ ಫಲಾನುಭವಿಗಳಿಗೆ ತ್ವರಿತವಾಗಿ ಸಾಲ ಸೌಲಭ್ಯ ಒದಗಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
‘ಎರಡೂ ನಿಗಮಗಳ ಮೂಲಕ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯಿದೆ. ಈ ಪೈಕಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಮೂಲಕ 83,119 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, 54 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 97,134 ಮನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ 34,008 ಮಂದಿಗೆ ಸಾಲ ನೀಡಲು ವಿವಿಧ ಬ್ಯಾಂಕುಗಳು ತಾತ್ವಿಕ ಒಪ್ಪಿಗೆ ನೀಡಿವೆ’ ಎಂದೂ ಅವರು ತಿಳಿಸಿದರು.
‘ವಿವಿಧ ಕಾರ್ಯಕ್ರಮಗಳಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಹಣದ ಅಡಚಣೆಯಿಲ್ಲ. ಹಿಂದಿನ ಸರ್ಕಾರದಲ್ಲಿ ಆರಂಭಗೊಂಡಿದ್ದ ಹಲವು ಗೃಹ ನಿರ್ಮಾಣ ಯೋಜನೆಗಳು ಗೊಂದಲದ ಗೂಡಾಗಿ ನನೆಗುದಿಗೆ ಬಿದ್ದಿತ್ತು. ಪ್ರಧಾನಿ ಆಶಯದಂತೆ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನ ಮಾಡುವ ಸಂಕಲ್ಪವನ್ನು ನಮ್ಮ ಸರ್ಕಾರ ತೊಟ್ಟಿದೆ’ ಎಂದರು.
‘ಕೊಳಚೆ ಅಭಿವೃದ್ಧಿ ಮಂಡಳಿಯಡಿ ಫಲಾನುಭವಿಗಳಿಗೆ ವಿತರಿಸಲಾಗಿರುವ 3.13 ಲಕ್ಷ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹಕ್ಕು ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ಹಕ್ಕುಪತ್ರ ಪಡೆದುಕೊಳ್ಳಲು ನಿಗದಿಪಡಿಸಿರುವ ಶುಲ್ಕ ಕಡಿಮೆ ಮಾಡುವಂತೆ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೋರಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಗೆ ಈ ಪ್ರಸ್ತಾವ ಮಂಡಿಸಲಾಗುವುದು’ ಎಂದರು.
‘ಪಟ್ಟಣ ಪಂಚಾಯತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1200ರಿಂದ 10 ಸಾವಿರವರೆಗೆ ದರ ನಿಗದಿಪಡಿಸಲಾಗಿತ್ತು. ಈ ದರಗಳನ್ನು 1200ರಿಂದ 4 ಸಾವಿರಕ್ಕೆ ಕಡಿಮೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಶೇ 50ರಷ್ಟು ರಿಯಾಯತಿ ಸಿಗಲಿದೆ’ ಎಂದೂ ಸಚಿವರು ವಿವರಿಸಿದರು.