News

ಜೂನ್ 15 ರಂದು ಉಡುಪಿ, ಉತ್ತರ ಕನ್ನಡ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ –ರೆಡ್ ಅಲರ್ಟ್, ಮೀನುಗಾರರಿಗೆ ಎಚ್ಚರಿಕೆ

14 June, 2021 8:19 PM IST By:

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸೋಮವಾರ  ಭಾರಿ ಮಳೆಯಾಗಿದೆ. ಇದರೊಂದಿಗೆ ರಾಜ್ಯದ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ದಲ್ಲಿ ಜೂನ್ 15 ಮತ್ತು 16 ರಂದು ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಲವೆಡೆ ಭಾರಿ ಮಳೆಯೊಂದಿಗೆ 20 ಸೆಂ.ಮೀಟರ್ ಗಿಂತಲೂ ಹೆಚ್ಚು ಮಳೆಯಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ಜೂನ್ 16 ಮತ್ತು 17 ರಂದು ಭಾರಿ ಮಳೆಯಾಗಲಿರುವುದರಿಂದ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜೂನ್ 17ರವರೆಗೆ ವ್ಯಾಪಾಕ ಮಳೆಯಾಗಲಿದೆ. ಚಿತ್ರದುರ್ಗ, ದಾವಣಗೇರೆ, ಬಳ್ಳಾರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಲಿರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ತೀರ ಪ್ರದೇಶದಲ್ಲಿ ಪ್ರತಿ ಗಂಟೆಗೆ ಗಾಳಿಯ ವೇಗವು 45 ರಿಂದ 55 ಕಿ.ಮೀ ಇರುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಬೆಣ್ಣೆತೋರಾ ಜಲಾಶಯದಿಂದ ನದಿಗೆ ಬಿಡುವ ಸಂಭವ: ನದಿಯ ಅಕ್ಕಪಕ್ಕದ ಜನರು ಎಚ್ಚರಿಕೆಯಿಂದಿರಲು ಸೂಚನೆ

ಕಲಬುರಗಿ,ಜೂನ್.10.(ಕ.ವಾ)-ಬೆಣ್ಣೆತೋರಾ ಯೋಜನೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರಬಾಗಿ ಒಳಹರಿವು ಬರುತ್ತಿದೆ. ಅಲ್ಲದೇ ಮೇಲ್ಭಾಗದ ಜಲಾಯಶದಿಂದ ನೀರು ಬಿಡುವ ಸಂಭವವಿರುವುದರಿAದ ಈ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಆಣೆಕಟ್ಟೆ ಕೋಡಿ ಮುಖಾಂತರ ನದಿಗೆ ಹರಿಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ-4ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಆದ್ದರಿಂದ ಬೆಣ್ಣೆತೋರಾ ನದಿ ಸುತ್ತಮುತ್ತಲಿನ ಗ್ರಾಮಗಳು ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ. ನದಿಯ ಅಕ್ಕಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ ಒಗೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬAಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗೃತೆಯಾಗಿ ಸುರಕ್ಷಿತ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.