News

ರಾಜ್ಯದಲ್ಲಿ ಮತ್ತೆ ಎರಡು ದಿನ ಕೆಲವೆಡೆ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

07 November, 2020 2:05 PM IST By:

ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು, ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಪ್ರಯುಕ್ತ ನವೆಂಬರ್ 8ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡನಲ್ಲಿ ಬಾಗಶಃ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಭಾನುವಾರ ಸಾಯಂಕಾಲ ಮತ್ತು ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಸೇರಿದಂತೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ. 7 ಮತ್ತು 8 ರಂದು ಮಳೆಯಾಗಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನ. 10ರವರೆಗೆ ಒಣಹವೆ ಮುಂದುವರೆಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದರಿಂದ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಯಿತು. ಕಳೆದೆರಡು ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಸಹ ಹೆಚ್ಚು ಮಳೆಯಾಗಿ ರಸ್ತೆಗಳೆಲ್ಲ ಕಾಲುವಗಳಂತೆ ಹರಿದವು. ಚರಂಡಿಗಳು ಉಕ್ಕಿ ಹರಿಯಿತು. ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು.

ಗುರುವಾರ ಬೆಂಗಳೂರ ದಕ್ಷಿಣ 167 ಮಿಮೀ,ಬೆಂಗಳೂರು ಪಶ್ಚಿಮ 94, ಬೆಂಗಳೂರು ಪೂರ್ವ 40, ಬೆಂಗಳೂರು ಗ್ರಾಮಾಂತರ 42, ಅನೇಕಲ್ 58, ಮಂಡ್ಯ. 89, ಹಾಸನ 76, ಕೊಡಗು 50, ದಕ್ಷಿಣ ಕನ್ನಡ 110, ಚಾಮರಾಜನಗರ 75, ಮೈಸೂರು 86, ತುಮಕೂರು 63 ಮಿಮೀ ಮಳೆಯಾದ ವರದಿಯಾಗಿದೆ.