News

ಭಾರತ- ಚೀನಾ ಮಧ್ಯೆ ಯುದ್ಧದ ಭೀತಿ: ಚೀನಾ ದೇಶದ 43 ಯೋಧರ ಸಾವು ಶಂಕೆ

17 June, 2020 1:43 PM IST By:

ಪೂರ್ವ ಲಡಾಖ್‌ ಗಡಿಯ ಗಲ್ವಾನ್‌ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆಯ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಇದರ ಜೊತೆಗೆ ಸಂಘರ್ಷದಲ್ಲಿ 43 ಚೀನಾ ಯೋಧರು ಸಾವಿಗೀಡಾಗಿರುವ ಮಾಹಿತಿ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) ನಾಲ್ವತೈದು ವರ್ಷಗಳಲ್ಲಿ ಇದೇ ಮೊದಲ ಬಾರಿ ರಕ್ತ ಹರಿದಿದೆ. ಇದರಿಂದಾಗಿ ಈ ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವಂತಾಗಿದೆ. ಅತಿಕ್ರಮಣ ಮಾಡಿದ ಚೀನಾ ಸೈನಿಕರನ್ನು ತಡೆಯಲು ಮುಂದಾದ ಭಾರತೀಯ ಸೈನಿಕರ ನಡುವೆ ತಳ್ಳಾಟಗಳು ನಡೆದಿತ್ತು ಎನ್ನಲಾಗಿದೆ.

ಕರ್ನಲ್‌ ಬಿ. ಸಂತೋಷ್‌ ಬಾಬು, ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದಾರೆ ಎಂದಷ್ಟೇ ಸೇನೆಯು ಆರಂಭದಲ್ಲಿ ಹೇಳಿತ್ತು. ಆದರೆ, ಸಂಘರ್ಷದ ಸ್ಥಳದಲ್ಲಿ ಕರ್ತವ್ಯದ ಲ್ಲಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇನ್ನೂ 17 ಯೋಧರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾತ್ರಿ ತಿಳಿಸಿತು.

ಲಡಾಖ್ ಭಾಗದಲ್ಲಿ ಚೀನಾ ತನ್ನ ತುಕಡಿಯನ್ನು ನಿಯೋಜಿಸಿದ್ದು, ಮದ್ದುಗುಂಡುಗಳನ್ನು ಗಡಿ ಭಾಗಕ್ಕೆ ಸರಬರಾಜು ಮಾಡುತ್ತಿದೆ. ಭಾರತವೂ ಎಲ್ಲಾ ರಕ್ಷಣಾ ಸಿದ್ದತೆ ಮಾಡಿಕೊಂಡಿದ್ದು, ಉಭಯ ದೇಶಗಳ ನಡುವೆ ಯುದ್ದದ ಕಾರ್ಮೋಡವೂ ಕವಿದಿದೆ. ಉದ್ವಿಗ್ನ ವಾತಾವರಣ ಶಮನಗೊಳಿಸಲು ಉಭಯ ದೇಶಗಳ ಪ್ರಯತ್ನ ನಡೆದಿದೆ.