News

ಗಾಜನೂರು ತುಂಗಾ ಜಲಾಶಯ ಭರ್ತಿ: 2020 ಕ್ಯೂಸೆಕ್ ನೀರು ಬಿಡುಗಡೆ

14 June, 2021 7:43 PM IST By:
ಸಂಗ್ರಹ ಚಿತ್ರ

ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದೆ. ಪರಿಣಾಮ ಮಲೆನಾಡಿನ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಜೊತೆಗೆ, ಅರೆಮಲೆನಾಡು ಜಿಲ್ಲೆಗಳಲ್ಲೂ ನದಿ, ಹಳ್ಳ ಕೊಳ್ಳಗಳಿಗೆ ಜೀವ ಸೆಲೆ ಬಂದಿದೆ. ಇತ್ತ ಒಂದು ವಾರದಿಂದ ಈಚೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಪರಿಣಾಮವಾಗಿ ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯ ಭರ್ತಿಯಾಗಿದೆ.

ಒಟ್ಟು 588.24 ಅಡಿ ಎತ್ತರದ ಜಲಾಶಯವು ಗರಿಷ್ಠ ಮಟ್ಟವನ್ನು ತಲುಪಿದ ಹಿನ್ನೆಲೆಯಲ್ಲಿ ಸೋಮವಾರ ಜಲಾಶಯದ 21 ಕ್ರಸ್ಟ್ಗೇಟ್‌ಗಳನ್ನು ತೆರೆದು ಒಟ್ಟು 2020 ಕ್ಯಯೂಸೆಕ್ ನೀರನ್ನು ನದಿ ಹಾಗೂ ವಿವಿಧ ಉದ್ದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 5300 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆ ಉದ್ದೇಶಕ್ಕಾಗಿ ಬಿಡುಗಡೆ ಮಾಡಿದ್ದರೆ, 7300 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯವು 3.25 ಟಿಎಂಸಿ ಆಗಿದ್ದು, ಈ ಪೈಕಿ 1.50 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಉಳಿದ ನೀರನ್ನು ವಿದ್ಯುತ್ ಉತ್ಪಾದನೆ, ನೀರಾವರಿ ಮತ್ತಿತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ಭಾನುವಾರ ಸಂಜೆವರೆಗಿನ ಮಾಹಿತಿ ಪ್ರಕಾರ ಜಲಾಶಯಕ್ಕೆ ನಿರಿನ ಒಳ ಹರಿವು 3774 ಕ್ಯುಸೆಕ್ ಇದೆ. ಒಳ ಹರಿವು ಕ್ರಮೇಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 21 ಗೇಟ್‌ಗಳನ್ನು ತೆರೆಯಲಾಗಿದೆ. ಒಳ ಹರಿವು ಇನ್ನೂ ಹೆಚ್ಚಾದರೆ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡುವುದಾಗಿ ಜಲಾಶಯದ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

ಮುಂಗಾರಿಗೆ ಮುನ್ನವೇ ಭರ್ತಿ

ಈ ಹಿಂದೆ ಇದೇ ವರ್ಷ ಮೇ ತಿಂಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಗೆ ತುಂಗಾ ಜಲಾಶಯ ಭರ್ತಿಯಾಗಿತ್ತು. ಆಗ ಯಾವುದೇ ಕ್ಷಣದಲ್ಲೂ ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಬಹುದು ಎಂದು ಜಲಾಶಯದ ಎಂಜಿನಿಯರ್‌ಗಳು ತಿಳಿಸಿದ್ದರು. ಆದರೆ ಆ ಬಳಿಕ ಜಲಾಶಯಕ್ಕೆ ನೀರಿನ ಒಳ ಹರಿವು ಕಡಿಮೆ ಆದ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಟ್ಟಿರಲಿಲ್ಲ. ಮೇ 11, 12ರಂದು ತೀರ್ಥಹಳ್ಳಿ ಮತ್ತು ಶೃಂಗೇರಿ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಮೇ 12ರಂದು ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಿತಿ, ಅಂದರೆ 588.02 ಅಡಿ ತಲುಪಿತ್ತು. ಕಾರಣ, ಯಾವುದೇ ಕ್ಷಣದಲ್ಲೂ ಕ್ರಸ್ಟ್ ಗೇಟ್ ತೆರೆಯಬಹುದಾದ್ದರಿಂದ ನದಿ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು.

ನದಿ ಪಾತ್ರದ ಜನರಿಗೆ ಎಚ್ಚರಿಕೆ

ಗಾಜನೂರಿನ ತುಂಗಾ ಜಲಾಶಯಕ್ಕೆ ಒಟ್ಟು 22 ಕ್ರಸ್ಟ್ ಗೇಟ್‌ಗಳಿದ್ದು, ಆ ಪೈಕಿ ಸೋಮವಾರ 21 ಗೇಟ್‌ಗಳನ್ನು ತೆರೆದು ಒಟ್ಟಾರೆ 2020 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಮುಂದಿನ ಮೂರು, ನಾಲ್ಕು ದಿನಗಳ ಕಾಲ ಭಾರೀ ಮಳೆ ಆಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಶಿವಮೊಗ್ಗ ಹಾಗೂ ಜಲಾಶಯದ ನಂತರ ಬರುವ ನದಿ ಪಾತ್ರದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ಕಡಿಮೆ ಆಗುವವರೆಗೂ ನದಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಶಿವಮೊಗ್ಗದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಧಿಕ ಪ್ರಮಾಣದ ಮಳೆ ಬಿದ್ದರೆ ಆಗುಂಬೆ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ಸಾಧ್ಯತೆಯೂ ಇದೆ. ರಾಜ್ಯದಲ್ಲಿರುವ ಎಲ್ಲ ಜಲಾಶಯಗಳ ಪೈಕಿ ಬಹು ಬೇಗ ಭರ್ತಿಯಾಗುವ ಡ್ಯಾಮ್, ತುಂಗಾ ಜಲಾಶಯವಾಗಿದೆ. ಕಳೆದ ವರ್ಷ ಕೂಡ ಜೂನ್ 18ರ ವೇಳೆಗೆ ಜಲಾಶಯ ಭರ್ತಿಯಾಗಿತ್ತು. ಈ ವೇಳೆ ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ತೆರೆದು 2000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿತ್ತು.