News

ತೋಟಗಾರಿಕೆ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಮಹತ್ವ ಕುರಿತು ಆನ್ಲೈನ್ ತರಬೇತಿ ಸೆ.25ರಂದು

24 September, 2021 3:18 PM IST By:

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕೋಲಾರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರವು ‘ತೋಟಗಾರಿಕೆ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಮಹತ್ವ’ ವಿಷಯದ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ, ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿದೆ. ರೈತ ಸಮುದಾಯಕ್ಕೆ ಜೈವಿಕ ಗೊಬ್ಬರಗಳ ಕುರಿತು ಸಮಗ್ರ ಮಾಹಿತಿ ನೀಡುವುದು ಹಾಗೂ ಅವುಗಳ ಮಹತ್ವವನ್ನು ತಿಳಿಸಿಕೊಡುವುದು ಈ ತರಬೇತಿ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಸೆಪ್ಟೆಂಬರ್ 25ರಂದು ಶನಿವಾರ ಬೆಳಗ್ಗೆ 10.30ಕ್ಕೆ ತರಬೇತಿಯು ಆರಂಭವಾಗಲಿದ್ದು, ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿ ಮಾಹಿತಿ ಪಡೆಯುವಂತೆ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಹಾಗೂ ತರಬೇತಿ ಕಾರ್ಯಕ್ರಮದ ಸಂಯೋಜಕರಾಗಿರುವ ಡಾ. ಅನಿಲ್ ಕುಮಾರ್. ಎಸ್. ಕೋರಿದ್ದಾರೆ.

ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಸೂಕ್ಷ್ಮ ಜೀವ ವಿಜ್ಞಾನ ವಿಷಯದ ಪ್ರಾಧ್ಯಾಪಕರಾಗಿರುವ ಡಾ.ಶಂಕರಪ್ಪ ಟಿ.ಹೆಚ್ ಅವರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಜೈವಿಕ ಗೊಬ್ಬರಗಳು, ಅವುಗಳ ತಯಾರಿ, ಗೊಬ್ಬರ ಬಳಕೆ ವಿಧಾನ, ಜೈವಿಕ ಗೊಬ್ಬರ ಬಳಸುವುದರಿಂದ ಬೆಳೆಗೆ ಆಗುವ ಪ್ರಯೋಜನಗಳು, ಜೈವಿಕ ಗೊಬ್ಬರ ಬಳಸಿದಾಗ ಮಣ್ಣಿಗೆ ಆಗಲಿರುವ ಪ್ರಯೋಜನಗಳು, ಮಣ್ಣಿನ ಫಲವತ್ತತೆ ವೃದ್ಧಿಯಲ್ಲಿ ಜೈವಿಕ ಗೊಬ್ಬರಗಳ ಮಹತ್ವ ಸೇರಿ ಹಲವು ವಿಷಯಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತ ಬಾಂಧವರು https://meet.google.com/usw-yizi-khf ಈ ಲಿಂಕ್ ಬಳಸಿಕೊಂಡು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಮೊ: 97431 96196 ಸಂಖ್ಯೆಗೆ ಕರೆ ಮಾಡುವಂತೆ ಕೋಲಾರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳು ಮನವಿ ಮಾಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.

ಏನಿದು ಜೈವಿಕ ಗೊಬ್ಬರ

ನೈಸರ್ಗಿಕವಾಗಿ ದೊರೆಯುವ ಉಪಯುಕ್ತ ಜೀವಾಣುಗಳನ್ನು ಪ್ರಯೋಗ ಶಾಲೆಗೆ ಕೊಂಡೊಯ್ದು, ನಿರ್ದಿಷ್ಟ ಪ್ರಕ್ರಿಯೆಗಳ ಮೂಲಕ ಜೀವಾಣುಗಳ ಸಂಖ್ಯೆಯನ್ನು ವೃದ್ಧಿಸಿ, ಆ ಜೀವಾಣುಗಳನ್ನು ಮಣ್ಣಿನಲ್ಲಿ ಮಿಶ್ರಣ ಮಾಡಿ ಜೈವಿಕ ಗೊಬ್ಬರ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಜೈವಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ನಿಸರ್ಗದಲ್ಲಿ ಸಿಗುವಂತಹ ಗಿಡ, ಮರದ ಎಲೆಗಳು (ಉದುರಿದ ತರಗೆಲೆ), ಕಟ್ಟಿಗೆ, ನೆಲಕ್ಕೆ ಬಿದ್ದ ಹಣ್ಣು, ಕಾಯಿ ಮತ್ತಿತರ ತ್ಯಾಜ್ಯ ಮತ್ತು ಮಣ್ಣು ಬಳಸಿಕೊಂಡು ಜೈವಿಕ ಗೊಬ್ಬರವನ್ನು ತಯಾರಿಸಲಾಗುತ್ತದೆ. ಹಾಗೇ, ಅಡುಗೆ ಮನೆಯಲ್ಲಿ ಸಂಗ್ರಹವಾಗುವ ಸೊಪ್ಪು, ತರಕಾರಿ, ಹಣ್ಣುಗಳ ಹಸಿ ತ್ಯಾಜ್ಯವನ್ನು ಬಳಸಿಕೊಂಡು ಸಹ ಜೈವಿಕ ಗೊಬ್ಬರವನ್ನು ಮನೆಯಲ್ಲೇ ತಯಾರಿಸಬಹುದು.

ಮಣ್ಣಿನ ಜೈವಿಕ ಮತ್ತು ಭೌತಿಕ ಗುಣಗಳನ್ನು ಕಾಪಾಡಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಜೈವಿಕ ಗೊಬ್ಬರಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತವೆ. ಜೈವಿಕ ಗೊಬ್ಬರದಲ್ಲಿರುವ ಸೂಕ್ಷ್ಮ ಜೀವಿಗಳು ಗಾಳಿಯಲ್ಲಿ ಅನಿಲ ರೂಪದಲ್ಲಿರುವ ಸಾರಜನಕವನ್ನು ಘನ ರೂಪಕ್ಕೆ ಪರಿವರ್ತಿಸಿ ಬೆಳೆಗಳಿಗೆ ಒದಗಿಸುತ್ತವೆ. ಜೊತೆಗೆ ಮಣ್ಣಿನಲ್ಲಿರುವ ರಂಜಕವನ್ನು ಕರಗಿಸಿ ಬೆಳೆಗಳಿಗೆ ಒದಗಿಸುತ್ತವೆ.

ವ್ಯಾಮ್ ಜೈವಿಕ ಗೊಬ್ಬರ: ವ್ಯಾಮ್ ಗೊಬ್ಬರದಲ್ಲಿರುವ ಸೂಕ್ಷ್ಮ ಜೀವಿಗಳು ಮಣ್ಣಿನ ಗುಣಮಟ್ಟ, ನೀರುಣಿಸುವ ಶಕ್ತಿ ಹೆಚ್ಚಿಸಿ ಬೆಳೆಗೆ ಪೋಷಕಾಂಶಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ. ಬೆಳೆಯ ಬೇರಿಗೆ ತಗುಲುವ ರೋಗಗಳನ್ನು ಹತೋಟಿ ಮಾಡುವುದು ವ್ಯಾಮ್ ಜೈವಿಕ ಗೊಬ್ಬರದ ವಿಶೇಷತೆಯಾಗಿದೆ. ಈ ಗೊಬ್ಬರವನ್ನು ರೈತರು ತಮ್ಮ ಜಮೀನಿನಲ್ಲೇ ತಯಾರಿಸಿಕೊಳ್ಳಬಹುದು. ಇನ್ನು ಮೈಕ್ರೋಬಿಯಲ್ ಕನ್ಸಾರ್ಷಿಯಂ ಜೈವಿಕ ಗೊಬ್ಬರವು ಸಾರಜನಕ ಸ್ಥಿರೀಕರಿಸಿ, ರಂಜಕ ಮತ್ತು ಜಿಂಕ್ ಅನ್ನು ಕರಗಿಸಿ ಸಸ್ಯಗಳಿಗೆ ಪೂರೈಸುವ ಮೂಲಕ ಅವುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇಂತಹ ಜೈವಿಕ ಗೊಬ್ಬರಗಳ ಕುರಿತು ಈ ತರಬೇತಿ ಕಾರ್ಯಾಗಾರದಲ್ಲಿ ರೈತರಿಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.