News

ಗೊಣ್ಣೆ ಹುಳುಗಳ ಸಮಗ್ರ ನಿರ್ವಹಣೆ ಕುರಿತು ಜೂನ್ 22ರಂದು ಕಾರ್ಯಾಗಾರ

22 June, 2021 8:51 AM IST By:

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಅರಭಾವಿ ಗ್ರಾಮದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜೂನ್ 22ರಂದು ಮಂಗಳವಾರ ಬೆಳಗ್ಗೆ 11.30ಕ್ಕೆ ರೈತರಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಬ್ಬು ಸೇರಿದಂತೆ ವಿವಿಧ ತರಕಾರಿ ಹಾಗೂ ಗೆಡ್ಡೆ ರೂಪದ ಬೆಳೆಗಳಿಗೆ ಗೊಣ್ಣೆ ಹುಳುಗಳ ಕಾಟ ವಿಪರೀತವಾಗಿದೆ. ಅದರಲ್ಲೂ ಬೆಳಗಾವಿ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದು, ಈ ಗೊಣ್ಣೆ ಹುಳುಗಳ ಕಾಟದಿಂದ ಕಬ್ಬು ಬೆಳೆಗಾರರು ಬೇಸತ್ತು ಹೋಗಿದ್ದಾರೆ. ಮುಖ್ಯವಾಗಿ ಬೆಳೆಯ ಬೇರಿನ ಮೇಲೆ ದಾಳಿ ಮಾಡುವ ಗೊಣ್ಣೆ ಹುಳುಗಳನ್ನು ನಿಯಂತ್ರಿಸುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಈ ಬೆಳೆ ನಾಶಕ ಹುಳುಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಕುರಿತು ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಆನ್‌ಲೈನ್ ತರಬೇತಿ ಕಾರ್ಯಾಗಾಯ ಆಯೋಜಿಸಲಾಗಿದೆ.

ವಿವಿಧ ಬೆಳೆಗಳಲ್ಲಿ ಗೊಣ್ಣೆ ಹುಳುಗಳ ಸಮಗ್ರ ನಿರ್ವಹಣೆ’ ಎಂಬುದು ತರಬೇತಿ ಕಾರ್ಯಾಗಾರದ ವಿಷಯವಾಗಿದೆ. ಜೂನ್ 22ರಂದು ಬೆಳಗ್ಗೆ 11.30ಕ್ಕೆ ಸರಿಯಾಗಿ ಕಾರ್ಯಾಗಾರ ಆರಂಭವಾಗಲಿದ್ದು, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕೀಟಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ವಿಷಯ ತಜ್ಞರಾಗಿರುವ ಡಾ.ರಾಮನಗೌಡ ಅವರು ಕಾರ್ಯಾಗಾರದಲ್ಲಿ ಭಾಗವಹಿಸಿ ಗೊಣ್ಣೆ ಹುಳುಗಳನ್ನು ನಿಯಂತ್ರಿಸಲು ರೈತರು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬಹುದು ಮತ್ತು ಈ ಹುಳುಗಳ ಸಮಗ್ರ ನಿರ್ವಹಣೆ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತ ಬಾಂಧವರು https://meet.google.com/jxx-stzw-soe ಈ ಲಿಂಕ್ ಬಳಸಿಕೊಳ್ಳುವ ಮೂಲಕ ತರಬೇತಿಯಲ್ಲಿ ಭಾಗವಹಿಸಬಹುದು. ಜೊತೆಗೆ ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ ಅನುಮಾನಗಳಿದ್ದರೆ ರೈತರು ಕಾರ್ಯಾಗಾರದ ಕೊನೆಯಲ್ಲಿ ತಜ್ಞರನ್ನು ಕೇಳಿ ಪರಿಹರಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಗೊಣ್ಣೆ ಹುಳುಗಳ ಪರಿಚಯ

ಗೊಣ್ಣೆ ಹುಳುಗಳ ಜಿವನ ಚಕ್ರದಲ್ಲಿ ಮೂರು ಹಂತಗಳಿವೆ. ಮೊದಲನೇ ಹಂತದಲ್ಲಿ ಮರಿ ಹುಳುಗಳು ಭೂಮಿಯೊಳಗಿನ ಸಾವಯವ ವಸ್ತುಗಳನ್ನು ತಿಂದು ಬದುಕುತ್ತವೆ. ಎರಡು ಹಾಗೂ ಮೂರನೆಯ ಹಂತದ ಮರಿ ಹುಳುಗಳು ಸುಮಾರು ಮೂರು ಅಥವಾ ನಾಲ್ಕು ತಿಂಗಳುಗಳ ಕಾಲ ವಿವಿಧ ಬೆಳೆಗಳ ಬೇರುಗಳನ್ನು ತಿನ್ನುತ್ತವೆ. ಇದರಿಂದ ಬೆಳೆ ಹಾನಿಯಾಗುತ್ತದೆ. ಸಾಮಾನ್ಯವಾಗಿ ಮೇ ತಿಂಗಳಿAದ ಆರಂಭವಾಗಿ ಅಕ್ಟೋಬರ್ ತಿಂಗಳವರೆಗೂ ಗೊಣ್ಣೆ ಹುಳುವಿನ ಬಾಧೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಜನವರಿ ತಿಂಗಳಿನವರೆಗೂ ಇರುತ್ತದೆ. ನಂತರ ಕೋಶಾವಸ್ಥೆ ತಲುಪುತ್ತವೆ. ಹತ್ತರಿಂದ ಹನ್ನೆರಡು ದಿನಗಳ ಕಾಲ ಕೋಶಾವಸ್ಥೆಯಲ್ಲಿರುವ ಹುಳುಗಳು, ನಂತರ ದುಂಬಿಗಳಾಗುತ್ತವೆ. ಮುಂಗಾರು ಹಂಗಾಮಿನ ಮೊದಲ ಮಳೆ ಬೀಳುವವರೆಗೂ ದುಂಬಿ ಹೊರಗೆ ಬರದೆ ಮಣ್ಣಿನಲ್ಲೇ ಇರುತ್ತದೆ.

ಮೇ ತಿಂಗಳಲ್ಲಿ ಮೊದಲ ಮಳೆ ಬಿದ್ದಾಗ ಕಾಣಿಸಿಕೊಳ್ಳುವುದರಿಂದ ಗೊಣ್ಣೆ ಹುಳುಗಳಿಗೆ ಇಂಗ್ಲಿಷ್‌ನಲ್ಲಿ ‘ಮೇ ಬೀಟಲ್ಸ್’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಹಗಲು ವೇಳೆ ಮಣ್ಣಿನಲ್ಲಿ ಅವಿತು ಕುಳಿತುಕೊಳ್ಳುವ ಗೊಣ್ಣೆ ಹುಳುಗಳು ರಾತ್ರಿ ವೇಳೆ ಭೂಮಿಯ ಮೇಲ್ಪದರಕ್ಕೆ ಬರುತ್ತವೆ. ಹಾಗೇ ರಾತ್ರಿಹೊತ್ತಿನಲ್ಲೇ ಸಕ್ರಿಯಯವಾಗಿ ಕೆಲಸ ಮಾಡುವ ಇವು, ಬೆಳೆಯ ಬೇರುಗಳನ್ನು ತಿಂದು ಬೆಳೆ ನಾಶಪಡಿಸುತ್ತವೆ. ಇದರಿಂದ ಬೆಳೆಯು ಸಂಪೂರ್ಣ ಒಣಗಿ ಸುಟ್ಟಂತಾಗುತ್ತದೆ. ಜೊತೆಗೆ ಈ ಕೀಟವು ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಸುಂಚರಿಸುವುದರಿAದ ತೀವ್ರ ಬೆಳೆ ಹಾನಿ ಮಾಡುತ್ತದೆ. ಹೀಗಾಗಿ ಸೂಕ್ತ ವಿಧಾನಗಳ ಮೂಲಕ ಇವುಗಳನ್ನು ಹತೋಟಿ ಮಾಡುವುದು ಅತಿ ಮುಖ್ಯ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು. ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.