News

ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಿಎಫ್ಟಿಆರ್ಐ ತಾಂತ್ರಿಕತೆಗಳ ಕುರಿತು ಜುಲೈ 22ರಂದು ತರಬೇತಿ

21 July, 2021 8:39 PM IST By:

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜುಲೈ 22ರಂದು ಗುರುವಾರ ಬೆಳಗ್ಗೆ 11.30ಕ್ಕೆ ‘ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸಿಎಫ್‌ಟಿಆರ್‌ಐನ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿ’ ಕುರಿತು ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು (ಸಿಎಸ್‌ಐಆರ್-ಸಿಎಫ್‌ಟಿಆರ್‌ಐ) ಆಹಾರ ಸಂರಕ್ಷಣೆ ಮತ್ತು ಸಂಸ್ಕರಣೆಗೆ ಸಂಬಂಧಿಸಿದಂತೆ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಜೊತೆಗೆ ಕೃಷಿ ಕ್ಷೇತ್ರದಲ್ಲಿ ಬಳಕೆಯಾಗುವ ಉಪಯುಕ್ತ ತಂತ್ರಜ್ಞಾನಗಳ ಅನ್ವೇಷಣೆಯಲ್ಲೂ ತನ್ನ ಛಾಪು ಮುಡಿಸಿದೆ. ಅಲ್ಲದೆ ಕೃಷಿಕರು ಬೆಳೆಯುವ ಧಾನ್ಯಗಳ ಒಣಗಿಸುವಿಕೆ, ಸಂರಕ್ಷಣೆಗೆ ಸಂಬಂಧಿಸಿದಂತೆಯೂ ಸಿಎಫ್‌ಟಿಆರ್‌ಐ ಯಂತ್ರೋಪಕರಣಗಳನ್ನು ಸಿದ್ಧಪಡಿಸಿದೆ. ಹೀಗಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ, ಪರಿಚಯಿಸಿರುವ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ ಕುರಿತಂತೆ ರೈತ ಸಮುದಾಯಕ್ಕೆ ಮಾಹಿತಿ ನೀಡುವ ಉದ್ದೇಶದಂದ ಈ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಗುರುವಾರ (ಜು.22) ಬೆಳಗ್ಗೆ 11.30ಕ್ಕೆ ಸರಿಯಾಗಿ ಗೂಗಲ್ ಮೀಟ್ ವೇದಿಕೆಯಲ್ಲಿ ಆರಂಭವಾಗುವ ತರಬೇತಿ ಕಾರ್ಯಾಗಾರವು ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ಟಿಟಿಬಿಟಿ ವಿಭಾಗದ ಪ್ರಧಾನ ತಾಂತ್ರಿಕ ಅಧಿಕಾರಿಗಳಾಗಿರುವ ಡಾ. ಗಿರಿಯಪ್ಪ ಕೊಲ್ಲನ್ನವರ್ ಅವರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿಎಫ್‌ಟಿಆರ್‌ಐ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳ ಕುರಿತು ರೈತ ಬಾಂಧವರಿಗೆ ಮಾಹಿತಿ ನೀಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿಯಯು ನಡೆಯಲಿದ್ದು, ಆಸಕ್ತ ರೈತರು http/:meet.google.com/ttx-fqbb-eym  ಈ ಲಿಂಕ್ ಅನ್ನು ಬಳಸಿಕೊಂಡು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ವಿಶೇಷವಾಗಿ ಕೃಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿರುವ ಯುವ ಉದ್ಯಮಿಗಳು, ರೈತರು, ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸಂಸ್ಥೆಗಳ ಸದಸ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರೆ ಉಪಯುಕ್ತ ಮಾಹಿತಿ ಹಾಗೂ ಉತ್ತೇಜನ ದೊರೆಯಲಿದೆ. ಹಿಗಾಗಿ ಕಾರ್ಯಾಗಾರ ನಡೆಯಲಿರುವ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ತಲುಪಿಸಿ ಹೆಚ್ಚು ಮಂದಿ ತರಬೇತಿಯಲ್ಲಿ ಪಾಲ್ಗೊಳ್ಳಲು ಸಹಕರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು ಎಂದು ತರಳಬಾಳು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಸಿಎಫ್‌ಟಿಆರ್‌ಐ ಪರಿಚಯ

ಮೈಸೂರಿನಲ್ಲಿರುವ ಸಿಎಸ್‌ಐಆರ್ - ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) (ನವದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಒಂದು ಪ್ರಯೋಗಾಲಯ ಘಟಕ), 1950ರಲ್ಲಿ ಸ್ಥಾಪನೆಯಾಗಿದೆ. ಸಂಸ್ಥಾಪಕರ ದೂರದೃಷ್ಟಿ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುಂದುವರಿಸುವ ಆಕಾಂಕ್ಷೆಯನ್ನು ಹೊಂದಿರುವ, ಸ್ಪೂರ್ತಿದಾಯಕ ಮತ್ತು ಸಮರ್ಪಿತ ವಿಜ್ಞಾನಿಗಳ ಜಾಲದ ಸಹಯೋಗದೊಂದಿಗೆ ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದೆ. ಎಂಜಿನಿಯರಿAಗ್ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ, ಟ್ರಾನ್ಸಲೇಷನಲ್ ಸಂಶೋಧನೆ, ಆಹಾರ ಸಂರಕ್ಷಣೆ ಮತ್ತು ಸುರಕ್ಷತೆ ಕ್ಷೇತ್ರಗಳಲ್ಲಿ ಸಿಎಸ್‌ಐಆರ್- ಸಿಎಫ್‌ಟಿಆರ್‌ಐ ಸಂಶೋಧನೆ ನಡೆಸುತ್ತಿದೆ.