News

Rain ರಾಜ್ಯದ ಹಲವೆಡೆ ಧಾರಾಕಾರ ಮಳೆ: ಯೆಲ್ಲೋ ಅಲರ್ಟ್‌ ಘೋಷಣೆ!

29 September, 2023 6:02 PM IST By: Hitesh
Torrential rain in many parts of the state: Yellow alert announced!

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ.

ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

1. ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ: ಬಹುತೇಕ ಶಾಂತಿಯುತ
2. ಅನ್ನಭಾಗ್ಯ ಯೋಜನೆ: ರಾಜ್ಯದ ಜನತೆಗೆ ಸರ್ಕಾರದಿಂದ ಬಂಪರ್‌ ಸುದ್ದಿ
3. ಬೆಳಗಾವಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೋಡ ಬಿತ್ತನೆ
4. ರಾಜ್ಯದ ಹಲವೆಡೆ ಧಾರಾಕಾರ ಮಳೆ: ಯೆಲ್ಲೋ ಅಲರ್ಟ್‌ ಘೋಷಣೆ
5. ಹಸಿರುಕ್ರಾಂತಿಯ ರುವಾರಿ: ಎಂ.ಎಸ್. ಸ್ವಾಮಿನಾಥನ್ ಇನ್ನಿಲ್ಲ

ಸುದ್ದಿಗಳ ವಿವರ ಈ ರೀತಿ ಇದೆ. 

1. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ   

ವಿವಿಧ ಕನ್ನಡ ಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು,

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ

ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಸಂಚಾರ ಆರಂಭವಾಗಿದೆಯಾದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.  

ರೈಲು ಸೇವೆಯು ಎಂದಿನಂತೆ ಇದೆ. ಉಳಿದಂತೆ ಆಸ್ಪತ್ರೆ, ಔಷಧಾಲಯದ ಸೇರಿದಂತೆ ಎಲ್ಲ ರೀತಿಯ ಅಗತ್ಯ ಸೇವೆಗಳಲ್ಲಿ    

ಯಾವುದೇ ಅಡಚಣೆ ಕಂಡುಬಂದಿಲ್ಲ. ಬಂದ್‌ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ

ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಬಂದ್‌ಗೆ ಕರೆ ನೀಡಲಾಗಿದೆ.

ಹೀಗಾಗಿ, ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ರಾಜ್ಯದಲ್ಲಿ ಬಂದ್‌ ಬಹುತೇಕ ಶಾಂತಿಯುತವಾಗಿತ್ತು.  
------------------
2. ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಈಗಾಗಲೇ ಕಾಂಗ್ರೆಸ್‌ ಸರ್ಕಾರವು ಘೋಷಿಸಿರುವ ಪ್ರಮುಖ ಐದು ಗ್ಯಾರಂಟಿ ಯೋಜನೆಗಳಲ್ಲಿ

ಅನ್ನಭಾಗ್ಯ ಯೋಜನೆಯೂ ಪ್ರಮುಖವಾಗಿದ್ದು, ಅಕ್ಕಿ ನೀಡದೆ ಇರುವ ಕಡೆ ಹಣ ನೀಡಲಾಗುತ್ತಿತ್ತು.

ಇದೀಗ ಅನ್ನಭಾಗ್ಯ ಯೋಜನೆಯ ಅಡಿ ಮುಂದಿನ ತಿಂಗಳಿನಿಂದಲೇ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಅಲ್ಲದೇ ಬರಪೀಡಿತ ಎಂದು ಘೋಷಿಸಿದ ತಾಲ್ಲೂಕುಗಳಲ್ಲಿ

ಮೊದಲು ಅಕ್ಕಿ ಪೂರೈಸಲಾಗುವುದು ಎಂದಿದ್ದಾರೆ.
------------------ 

3. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ.

ಇದೀಗ ಬೆಳಗಾವಿ ಜಿಲ್ಲೆಯ ರೈತರಿಗಾಗಿ ಮಳೆ ಬರಿಸುವ ಪ್ರಯತ್ನವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ

ಶುಕ್ರವಾರದಿಂದ  ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
------------------
4. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ಎಲ್ಲ

ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಬೀದರ್‌ ಮತ್ತು ದಕ್ಷಿಣ ಒಳನಾಡಿನ

ಧಾರವಾಡ, ಬೆಳಗಾವಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ

ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಶುಕ್ರವಾರ ವಿವಿಧ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಅಲ್ಲದೇ ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆಯ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಮಿಂಚುಗುಡುಗು ಸಹಿತ ಮಳೆಯಾಗಲಿದೆ.

ಗರಿಷ್ಠ ಉಷ್ಣಾಂಶವು 29 ಮತ್ತು ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
------------------
5. ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್ ಸ್ವಾಮಿನಾಥನ್ ಅವರು ಗುರುವಾರ ವಿಧಿವಶರಾಗಿದ್ದಾರೆ.

ಅವರಿಗೆ 98 ವರ್ಷವಾಗಿತ್ತು. ಭಾರತದಲ್ಲಿ ಕಡಿಮೆ-ಆದಾಯದ ರೈತರಿಗೆ ಹೆಚ್ಚಿನ ಇಳುವರಿಯನ್ನು ನೀಡುವ ಭತ್ತದ

ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.    

ಸ್ವಾಮಿನಾಥನ್ ಅವರಿಗೆ 1987ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಅವರು ಚೆನ್ನೈನಲ್ಲಿ MS ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದರು.

ಅಲ್ಲದೇ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ಆಲ್ಬರ್ಟ್ ಐನ್‌ಸ್ಟೈನ್ ವರ್ಲ್ಡ್ ಸೈನ್ಸ್ ಪ್ರಶಸ್ತಿ ಸೇರಿದಂತೆ

ಹಲವು ಗೌರವ ಸಂದಿದೆ. ಭಾರತ ತೀವ್ರ ಬರಗಾಲದಲ್ಲಿ ಸಂದರ್ಭದಲ್ಲಿದ್ದಾಗ ಇವರು ಅಭಿವೃದ್ಧಿಪಡಿಸಿದ್ದ  

ಭತ್ತದ ತಳಿಗಳು ಭಾರತವನ್ನು ಆಹಾರಭದ್ರತಾ ರಾಷ್ಟ್ರವನ್ನಾಗಿ ಗುರುತಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು.

ಭಾರತ ಮತ್ತು ಜಗತ್ತಿನ ಅನ್ನದ ಬಟ್ಟಲನ್ನು ಸ್ವಾಮಿನಾಥನ್‌ ಅವರು ತುಂಬಿದ್ದರು.

ಸ್ವಾಮಿನಾಥನ್‌ ಅವರ ನಿಧನಕ್ಕೆ ಜಗತ್ತಿನ ಗಣ್ಯರು ಕಂಬನಿ ಮಿಡಿದಿದ್ದಾರೆ.