News

ಟೊಮೆಟೊ…ಟೊಮೆಟೊ…ಟೊಮೆಟೊ : ಚಿತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾದ ಜನತೆ!

11 July, 2023 3:30 PM IST By: Kalmesh T
Tomato...Tomato...Tomato: The people who witnessed the film's strange events!

Tomato...Tomato...Tomato: ಇತ್ತೀಚಿಗೆ ದೇಶದಲ್ಲಿ ಟೊಮೆಟೊ ದರ ಏರಿಕೆಯಾದ ಬೆನ್ನಲ್ಲೆ ಸಾಕಷ್ಟು ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆ. ಇವೆಲ್ಲವನ್ನು ಕಂಡು ನಗಬೇಕೊ.. ಅಳಬೇಕು ಎಂದು ತಿಳಿಯದೇ ಜನ ಕಂಗಾಲಾಗಿದ್ದಂತೂ ಸತ್ಯ. ಇಲ್ಲಿದೆ ಈ ಕುರಿತಾದ ಇಂಟ್‌ರೆಸ್ಟಿಂಗ್‌ ಸ್ಟೋರಿಸ್‌

ಹಲವಾರು ಕಾರಣಗಳಿಂದ ದೇಶದಾದ್ಯಂತ ಟೊಮೆಟೊ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೆಷ್ಟೊ ಜನ ಟೊಮೆಟೊ ಕೊಳ್ಳುವುದನ್ನೆ ನಿಲ್ಲಿಸಿದ್ದಾರೆ ಕೂಡ. ಇ ಎಲ್ಲವುಗಳ ನಡುವೆ ದೇಶದಲ್ಲಿ ಟೊಮೆಟೊ ವಿಚಾರದಲ್ಲಿ ವಿಚಿತ್ರ ಸಂಗತಿಗಳು ಕೂಡ ನಡೆದಿವೆ.

ಸಿನಿಮೀಯ ರೀತಿಯಲ್ಲಿ ಟೊಮೆಟೊ ಸಹಿತ ವಾಹನದ ಕಳ್ಳತನ

ಬೆಂಗಳೂರಿನ ತುಮಕೂರು ರಾಷ್ಟ್ರೀಯ ಹೆದ್ದಾರಿ ಬಳಿ ಟೊಮೆಟೊ ತುಂಬಿಕೊಂಡು ಹೊರಟಿದ್ದ ವಾಹನವನ್ನ ಕಳ್ಳುರು ಕದ್ದೊಯ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರದ ಶಿವಣ್ಣ ಎಂಬುವವರ ವಾಹನದಲ್ಲಿ ಹಿರಿಯೂರಿನ ಮಲ್ಲೇಶ್ ಎಂಬುವವರು ಕೋಲಾರದ ಎಪಿಎಂಸಿಗೆ ಟೊಮೆಟೊ ಮಾರಾಟಕ್ಕೆ ಹೋಗುತ್ತಿದ್ದರು.

ಅವರ ವಾಹನ ಹಿಂಬಾಲಿಸಿಕೊಂಡು ಬಂದ ಮೂವರು, 210 ಟ್ರೇಗಳ ಟೊಮೆಟೊ ಸಹಿತ ವಾಹನವನ್ನು ಕೂಡ ಕಳವು ಮಾಡಿದ್ದಾರೆ. ಒಟ್ಟು ಟೊಮೆಟೊ ಮೌಲ್ಯವೇ ಬರೋಬ್ಬರಿ 1 ಲಕ್ಷ 50 ಸಾವಿರದವರೆಗೆ ಎಂದು ಅಂದಾಜಿಸಲಾಗಿದೆ.

ಟೊಮೆಟೊವನ್ನು ಕೊಂಡೊಯ್ಯುತ್ತಿದ್ದ ಬುಲೆರೋ ವಾಹನವನ್ನು ದಾರಿಯುದ್ದಕ್ಕೂ ಹಿಂಬಾಲಿಸಿಕೊಂಡೆ ಬರಲಾಗುತ್ತಿತ್ತು. ಈ ನಡುವೆ ಮಾರ್ಗ ಮಧ್ಯದಲ್ಲಿ ಹೆಬ್ಬಾಳ ಕಡೆಗೆ ತೆರಳುವ ಸಮಯದಲ್ಲಿ ಟೀ ಕುಡಿಯಲು ವಾಹನ ನಿಲುಗಡೆ ಮಾಡಿದ್ದರು. ಇಲ್ಲಿ ಕೂಡ ಆ ಮೂವರು ಅವರ ಹಿಂದೆಯೇ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದರು.

ಅದಾದ ಮೇಲೆ ಸಿನಿಮೀಯ ರೀತಿಯಲ್ಲಿ ಮಾರ್ಗ ಮಧ್ಯದಲ್ಲಿ ವಾಹನ ಅಡ್ಡಗಟ್ಟಿದ ಕಳ್ಳರು ತಮ್ಮ ಗಾಡಿಗೆ ಟೊಮೆಟೊ ಒಯ್ಯುತ್ತಿರುವ ಗಾಡಿ ತಾಗಿಸಿದ್ದಾರೆ ಎಂದು ಸುಖಾಸುಮ್ಮನೆ ಜಗಳ ತೆಗೆದಿದ್ದಾರೆ. ಇಷ್ಟೆಲ್ಲ ನಾಟಕಗಳ ನಡುವೆ ಪರಿಹಾರವಾಗಿ 15,000 ರೂಪಾಯಿ ನೀಡುವಂತೆ ರೈತ ಮಲ್ಲೇಶ್ ಅವರಿಗೆ ಬೇಡಿಕೆ ಇಟ್ಟಿದ್ದಾರೆ.

ರೈತ ಮಲ್ಲೇಶ್‌ ಹಣ ಕೊಡಲು ನೀರಾಕರಿಸಿ, ತಮ್ಮ ಬಳಿ ಹಣವಿಲ್ಲವೆಂದು ಹೇಳಿದ ಮೇಲೆ ವಾಹನದಲ್ಲಿರುವ ಟೊಮೆಟೊ ಕಂಡು, ಆ ಇಬ್ಬರು ಕಳ್ಳರು ರೈತರ ವಾಹನ ಹತ್ತಿ ಅವರೇ ಚಲಾಯಿಸಿಕೊಂಡು ಹೋಗಿದ್ದಾರೆ.

ಅಲ್ಲಿಂದ ಮುಂದೆ ಚಿಕ್ಕಜಾಲದ ಸಮೀಪ ರೈತ ಮತ್ತು ಗಾಡಿ ಚಾಲಕನನ್ನು ರಸ್ತೆ ಮಧ್ಯೆ ಇಳಿಸಿ ವಾಹನ ಸಹಿತ ಪರಾರಿಯಾಗಿದ್ದಾರೆ.

ತುಟ್ಟಿ ಟೊಮೆಟೊ ರಕ್ಷಣೆಗೆ ಬೌನ್ಸರ್‌ಗಳ ನೇಮಕ

ಬೆಲೆ ಏರಿಕೆಯಾಗಿರುವುದು ಗೊತ್ತಿದ್ದರೂ ಅಂಗಡಿಗೆ ಬರುವ ಗ್ರಾಹಕರು ಕಡಿಮೆ ಬೆಲೆಗೆ ನೀಡುವಂತೆ ಕೇಳಿ, ಜಗಳ ಮಾಡುತ್ತಿದ್ದರು. ಅಲ್ಲದೇ ಟೊಮೆಟೊಗಳನ್ನ ಕಳುವು ಕೂಡ ಮಾಡುತ್ತಿದ್ದರಂತೆ.

ಇದರಿಂದ ಬೇಸತ್ತ ಉತ್ತರ ಪ್ರದೇಶದ ವಾರಾಣಸಿಯ ತರಕಾರಿ ವ್ಯಾಪಾರಿಯೊಬ್ಬರು ಗ್ರಾಹಕರಿಂದ ತಮ್ಮ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಅಂಗಡಿಯಲ್ಲಿ ಇಬ್ಬರು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾರೆ.

ಈ ಮೂಲಕ ಸದ್ಯ ಸುದ್ದಿಯಲ್ಲಿರುವ ವ್ಯಾಪಾರಿ, ಅಜಯ್‌ ಫೌಜಿ, ‘ಟೊಮೆಟೋ ಬೆಲೆ ಗಣನೀಯ ರೂಪದಲ್ಲಿ ಹೆಚ್ಚಾಗಿದೆ. ಹೀಗಾಗಿ ಅಂಗಡಿಗೆ ಬರುವ ಗ್ರಾಹಕರು ಬೆಲೆ ಕುರಿತು ಕಡಿಮೆ ಮಾಡುವಂತೆ ವಾಗ್ವಾದ ಆರಂಭಿಸುತ್ತಾರೆ. ಅಷ್ಟೇ ಅಲ್ಲದೇ ಟೊಮೆಟೋ ಕಳ್ಳತನವನ್ನು ಕೂಡ ಮಾಡುತ್ತಾರೆ.

ವ್ಯಾಪರವನ್ನೆ ನೆಚ್ಚಿಕೊಂಡು ಬದುಕುವ ನಾನು ಇದರಿಂದ ಸುಸ್ತಾಗಿ ಹೋಗಿದ್ದೇವೆ. ಹೀಗಾಗಿ ಬೇರೆ ಉಪಾಯ ತಿಳಿಯದೇ  ಬೌನ್ಸರ್‌ಗಳನ್ನು ನೇಮಕ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಟೊಮೆಟೊ ಕಾಯಲು ಬೌನ್ಸರ್‌ಗಳನ್ನ ನೇಮಕ ಮಾಡಿಕೊಂಡಿರುವ ಫೌಜಿ, ಬೌನ್ಸರ್‌ಗಳಿಗೆ ನೀಡುತ್ತಿರುವ ಸಂಬಳದ ಕುರಿತು ಯಾವುದೇ ಮಾಹಿತಿ ತಿಳಿಸಿಲ್ಲ.  

ಹೊಟೆಲ್‌ ರೆಸ್ಟೊರೆಂಟ್‌ಗಳ ಮೆನ್ಯುವಿನಲ್ಲಿ ಕಾಣೆಯಾದ ಟೊಮೆಟೊ

ಟೊಮೆಟೊ ದರ ಹೆಚ್ಚಳವಾದ ನಂತರ ಬಹುತೇಕ ಹೊಟೆಲ್‌, ರೆಸ್ಟೊರೆಂಟ್‌, ಕ್ಯಾಂಟಿನ್‌ಗಳು ಟೊಮೆಟೊ ಬಳಸಿ ಮಾಡುವ ತಿಂಡಿ, ಊಟಗಳನ್ನು ಮಾಡುತ್ತಿಲ್ಲ.

ಅಷ್ಟೇ ಅಲ್ಲದೇ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಪಿಜ್ಜಾ ಬರ್ಗರ್ ನಲ್ಲೂ ಟೊಮೆಟೋ ಮಾಯವಾಗಿದೆ. ಪ್ರಸಿದ್ದ ಮೆಕ್‌ಡೊನಾಲ್ಡ್ ತನ್ನ ಮೆನುವಿನಿಂದ ಟೊಮೆಟೊಗಳನ್ನು ತೆಗೆದುಹಾಕಿದೆ ಎಂಬ ಸುದ್ದಿ ಕೂಡ ಇದೆ.

ಸ್ಮಾರ್ಟ್‌ ಫೋನ್‌ ಖರೀದಿಸಿದ್ರೆ 2 Kg ಟೊಮೆಟೊ ಫ್ರೀ!

ಈ ನಡುವೆ ಮೊಬೈಲ್ ಷೋ ರೂಮ್‌ ಉದ್ಯಮಿಯೊಬ್ಬರು ವಿನೂತನ ಉಪಾಯ ಮಾಡಿದ್ದಾರೆ. ಯಾರಾದರೂ ತಮ್ಮ ಸೆಲ್ ಫೋನ್ ಅಂಗಡಿಯಿಂದ ಸ್ಮಾರ್ಟ್ ಫೋನ್ ಖರೀದಿಸಿದರೆ ಅವರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಮಧ್ಯಪ್ರದೇಶದ ಅಶೋಕ್ ನಗರದಲ್ಲಿರುವ ಮೊಬೈಲ್ ಶೋರೂಂನಲ್ಲಿ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ 2 ಕೆಜಿ  ಟೊಮೇಟೊವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಇದು ಸ್ಮಾರ್ಟ್‌ಫೋನ್‌ ಖರೀದಿ ಮಾಡುವವರಿಗೆ ಮಾತ್ರ ಎನ್ನುತ್ತಾರೆ ಶೋರೂಮ್‌ ಮಾಲೀಕ ಅಭಿಷೇಕ್ ಅಗರ್‌ವಾಲ್‌. ಈ ಯೋಜನೆ ಜಾರಿಯಾದ ತಕ್ಷಣ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಹೆಚ್ಚು ಮೊಬೈಲ್ ಮಾರಾಟ ಮಾಡುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಕೂಡ.

ಅದೇ ಸಮಯದಲ್ಲಿ, ಟೊಮ್ಯಾಟೊವನ್ನು ಉಚಿತವಾಗಿ ನೀಡುವುದರಿಂದ ಗ್ರಾಹಕರು ಕೂಡ ಸಂತೋಷಪಟ್ಟಿದ್ದಾರೆ ಎನ್ನಲಾಗಿದೆ.

ಹೊಲಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ

ಬೆಲೆ ಏರಿಕೆ ಬೆನ್ನಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಾರು 1 ಲಕ್ಷ 5 ಸಾವಿರ ರೂಪಾಯಿ ಮೌಲ್ಯದ ಟೊಮ್ಯಾಟೋ ಬೆಲೆ ಕಳ್ಳತನವಾಗಿದ್ದು, ಜಮೀನಿನ ಮಾಲೀಕ ಸೋಮಶೇಖರ್ ಹಾಗೂ ಅವರ ಪುತ್ರ ಧರಣಿ ಹಳೇಬೀಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಮೀನಿನ ಮಾಲೀಕ ಸೋಮಶೇಖರ್ ಅನಾರೋಗ್ಯದಿಂದ ಬಳಲುತ್ತಿದ್ದರು ಸಹ ಟೊಮ್ಯಾಟೋ ಬೆಲೆಯನ್ನು ಬೆಳೆದಿದ್ದರು. ಕಳೆದ ಮೂರು ದಿನಗಳಿಂದ ಟೊಮ್ಯಾಟೋವನ್ನು ಕೊಯ್ದು ಮಾರಾಟ ಮಾಡುತ್ತಿದ್ದರು.

ಬಾಕಿ ಉಳಿದಿರುವ ಬೆಳೆಯನ್ನು ಬುಧವಾರ ಕಟಾವು ಮಾಡಲು ಯೋಜಿಸಿದ್ದರು. ಆದರೆ, ಬುಧವಾರ ಬೆಳಗ್ಗೆ ಸೋಮಶೇಖರ್​ ಅವರ ಪುತ್ರ ಧರಣಿ ಜಮೀನಿಗೆ ತೆರಳಿದಾಗ ಕಳ್ಳತನವಾದ ವಿಷಯ ತಿಳಿದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‌- ಮೀಮ್ಸ್‌ಗಳ ಹಾವಳಿ

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‌- ಮೀಮ್ಸ್‌ಗಳ ಹಾವಳಿ

ಟೊಮೆಟೊ ದರ ಹೆಚ್ಚಳದ ಕುರಿತು ಅಷ್ಟೊಂದು ಗಂಭೀರವಾದ ಘಟನೆಗಳು ನಡೆದಿದ್ದರೂ ಕೂಡ ಇನ್ನೊಂದೆಡೆ ಸೋಷಿಯಲ್‌ ಮಿಡಿಯಾದಲ್ಲಿ ಟೊಮೆಟೊ ಕುರಿತಂತೆ ಸಾಕಷ್ಟು ವೆರೈಟಿ ವೆರೈಟಿ ಟ್ರೋಲ್‌ಗಳು, ಮೀಮ್ಸ್‌ಗಳು ಕೂಡ ಬರುತ್ತಿವೆ.

ನೀವೂ ಕೂಡ ಇಂತಹ ಯಾವುದಾದರೂ ಘಟನೆಗಳನ್ನ ಕಂಡಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ ನಮಸ್ಕಾರ.