News

Bengaluru Mysuru Expressway : ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಶುಲ್ಕ ಸೇವಾ ರಸ್ತೆ ಲಭ್ಯ

03 August, 2023 10:28 AM IST By: Maltesh
Toll Free Service Road along Bengaluru – Mysuru

ಬೆಂಗಳೂರು - ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ 01.08.2023  ರಿಂದ  ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಸಂಚಾರವನ್ನು ನಿಷೇಧಿಸಿದೆ.

ಈ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಪ್ರವೇಶ ನಿಯಂತ್ರಿತ ಹೆದ್ದಾರಿಯ, ಎರಡೂ ಬದಿಯಲ್ಲಿ ಒದಗಿಸಲಾದ ಏಳು-ಮೀಟರ್ ಅಗಲದ, ದ್ವಿಪಥದ ಸೇವಾ ರಸ್ತೆಯನ್ನು ನಿಶುಲ್ಕವಾಗಿ ಬಳಸಬಹುದು.

ಪ್ರಸ್ತುತ, ಬಿಡದಿ, ರಾಮನಗರ ಮತ್ತು ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆಗಳಿಂದಾಗಿ ಸೇವಾ ರಸ್ತೆಯಲ್ಲಿ ಮೂರು ರಸ್ತೆದಾಟು ವ್ಯವಸ್ಥೆಗಳಿವೆ.

ಈ ರಸ್ತೆದಾಟು ವ್ಯವಸ್ಥೆಗಳಲ್ಲಿ ವಾಹನಗಳು ಹಳೆಯ ಮೈಸೂರು ರಸ್ತೆಯನ್ನು ಬಳಸಬಹುದು.  ಹೀಗಾಗಿ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಸೇವಾ ರಸ್ತೆಯಲ್ಲಿ 79.6 ಕಿಮೀ ಮತ್ತು ಹಳೆಯ ಮೈಸೂರು ರಸ್ತೆಯಲ್ಲಿ 35.4 ಕಿಮೀ.

ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಈ ಮೂರು ಪಟ್ಟಣಗಳಿಗೆ ಹೋಗಲು ಬಯಸಿದರೆ ಕೂಡಾ ಅವರಿಗೆ ಆಗ ಸೇವಾ ರಸ್ತೆ ಲಭ್ಯವಿದೆ. 118 ಕಿಮೀ ಉದ್ದದ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಸೇವಾ ರಸ್ತೆಯನ್ನು ಪೂರ್ತಿ ರಸ್ತೆಯುದ್ದಕ್ಕೂ ಮಾಡಲು, ಸೇವಾ ರಸ್ತೆಯಲ್ಲಿ ಮೂರು ಆರ್‌.ಒ.ಬಿ.ಗಳ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.  ಹಳೆಯ ಮೈಸೂರು ಬೆಂಗಳೂರು ರಸ್ತೆಯ ಬೈಪಾಸ್ ಭಾಗವನ್ನು ಸಹ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಧಾರಿಸಿ ಮಾರ್ಪಾಡು ಮಾಡಲಿದೆ.

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಅತಿವೇಗದ ರಹದಾರಿಯಾಗಿ (ಹೈ-ಸ್ಪೀಡ್ ಕಾರಿಡಾರ್) ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ರೀತಿಯ ಮೋಟಾರು ವಾಹನಗಳಿಗೆ ಗಂಟೆಗೆ 80 - 100 ಕಿಮೀ ವೇಗದ ಮಿತಿಗಳಿವೆ. 

ಹೆಚ್ಚಿನ ವೇಗದ ವಾಹನಗಳ ಚಲನೆಯು ತುಲನಾತ್ಮಕವಾಗಿ ನಿಧಾನವಾಗಿ ಚಲಿಸುವ ವಾಹನಗಳ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಬಹುದು.  ಆದ್ದರಿಂದ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಂತಹ ನಿಧಾನವಾಗಿ ಚಲಿಸುವ ವಾಹನಗಳು ಕಾರಿಡಾರ್ ಅನ್ನು ಬಳಸುವುದನ್ನು ನಿಷೇಧಿಸಲಾಗಿದೆ, ಇದು ರಾಷ್ಟ್ರೀಯ ಹೆದ್ದಾರಿ-275 ರ ಭಾಗವನ್ನು ಒಳಗೊಂಡಿದೆ.

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಕಳೆದ ಆರು ತಿಂಗಳ ಅಪಘಾತದ ಮಾಹಿತಿಯ ಆಧಾರದ ಮೇಲೆ, ಸುಮಾರು 30% ಅಪಘಾತಗಳಲ್ಲಿ ದ್ವಿಚಕ್ರದ ವಾಹನಗಳು ಇದ್ದರೆ, ಅವುಗಳಲ್ಲಿ ಹೆಚ್ಚಿನವು ಮಾರಣಾಂತಿಕ ಅಥವಾ ಗಂಭೀರವಾದ ಗಾಯಗಳಾಗಿವೆ. 

65-75% ರಷ್ಟು ಕಾರುಗಳು / ಬೈಕ್‌ಗಳಂತಹ ವಾಹನಗಳು 160 ಕಿಮೀ ವೇಗದಲ್ಲಿ ಚಲಿಸಿ ಅತಿ ವೇಗದ ಅಪಘಾತಗಳಲ್ಲಿ ಭಾಗಿಯಾಗಿವೆ. 25% ಅಪಘಾತ ಪ್ರಕರಣಗಳು ಹಿಂಬದಿಯ ವಾಹನಗಳು ಹೊಡೆತದಿಂದಾದ ಘರ್ಷಣೆ-ಅವಘಡಗಳನ್ನು ಒಳಗೊಂಡಿವೆ, ಮುಖ್ಯವಾಗಿ ನಿಧಾನವಾಗಿ ಚಲಿಸುವ ವಾಹನಗಳು ಬಲಬದಿಯ ಲೇನ್ ಅನ್ನು ಆಕ್ರಮಿಸಿಕೊಂಡಿರುವುದು ಮತ್ತು ರಸ್ತೆಯ ದಾರಿ (ಲೇನ್) ಶಿಸ್ತನ್ನು ಅನುಸರಿಸದಿರುವುದು, ಬಹುತೇಕ ವಾಹನ ಅಪಘಾತಗಳಿಗೆ ಕಾರಣಗಳಾಗಿವೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆಯನ್ನು ಕಾಪಾಡುವುದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ)  ಹೆಚ್ಚಿನ ಆದ್ಯತೆಯಾಗಿದೆ. ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.