Today's news for your reading: ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
- ಮನೆ ಯಜಮಾನಿಗೆ 2000 ಸಾವಿರ ನೀಡುವ ಗೃಹಲಕ್ಷ್ಮೀ ಯೋಜನೆಯ ಅರ್ಜಿಗೆ ಡೇಟ್ ಫಿಕ್ಸ್!
- ಕರಾವಳಿ ಸೇರಿ ವಿವಿಧ ಜಿಲ್ಲೆಯಲ್ಲಿ ಮುಂದುವರಿದ ಮಳೆ
- ಈಜುಕೊಳವಾದ ಮಂಗಳೂರಿನ ಪಂಪ್ ವೆಲ್ ಸರ್ಕಲ್!
- ರಾಜ್ಯದ 1,500 ಎಕರೆ ಪ್ರದೇಶದಲ್ಲಿ 2 ಲಕ್ಷ ಗಿಡ ನೆಡಲು ಸಿದ್ಧತೆ!
- ಕೇರಳದಲ್ಲಿ ನಂದಿನಿ ಹಾಲು, ಉತ್ಪನ್ನ ಮಾರಾಟಕ್ಕೆ ತಾತ್ಕಾಲಿಕ ಹಿನ್ನಡೆ
- ಪ್ರಮುಖ ವಸ್ತುಗಳ ಜಿಎಸ್‌ಟಿ ಕಡಿತ ಮಾಡಿದ ಕೇಂದ್ರ ಸರ್ಕಾರ
ಸುದ್ದಿಗಳ ವಿವರ ಈ ರೀತಿ ಇದೆ.
- ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮನೆಯ ಯಜಮಾನಿಗೆ 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಶೀಘ್ರ ಪ್ರಾರಂಭಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಜಾರಿ ಸಂಬಂಧ ಮಾತನಾಡಿರುವ ಅವರು, ಜುಲೈ 14ರಿಂದ ಅರ್ಜಿ ಸಲ್ಲಿಕೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ. ಅಲ್ಲದೇ ಇನ್ನು 2 ರಿಂದ 3 ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯನ್ನೂ ಹೊರಡಿಸುವುದಾಗಿ ತಿಳಿಸಿದ್ದಾರೆ. ಈ ಯೋಜನೆಯ ಫಲಾನುಭವಿಗಳಾಗಲು ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅರ್ಜಿಗಳ ಪರಿಶೀಲನೆ ಹಾಗೂ ತಂತ್ರಾಂಶ ಅಭಿವೃದ್ಧಿಪಡಿಸಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ.
----------------------
- ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಭಾರೀ ಮಳೆ ಮುನ್ನೆಚ್ಚರಿಕೆ: ರಾಜ್ಯ ಎಲ್ಲ ಭಾಗದಲ್ಲಿಯು ಬಹುತೇಕ ಮಳೆ ಮುಂದುವರಿದಿದ್ದು, ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಕೊಡಗು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ಗುರುವಾರದ ವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ದಾವಣಗೆರೆ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಹಾವೇರಿ, ತುಮಕೂರು ಹಾಗೂ ಚಿತ್ರದುರ್ಗದ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
- ಕರವಾಳಿಯ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರಿನ ಪಂಪ್‌ವೆಲ್ ಸರ್ಕಲ್ ಭಾರೀ ಮಳೆಯಿಂದ ಜಲಾವೃತ
ವಾಗಿತ್ತು. ಮಳೆಯಿಂದ ಮಂಗಳೂರಿನ ಪಂಪ್ ವೆಲ್ ಸರ್ಕಲ್ ಈಜು
ಕೊಳದಂತೆ ಬದಲಾಗಿದೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಪಂಪ್‌ವೆಲ್ ಮೇಲ್ಸೇತುವೆ ಅಡಿಭಾಗ ಸುತ್ತಲು ನೀರು ತುಂಬಿದ್ದು, ವ್ಯಕ್ತಿಯೊಬ್ಬರು ಪಂಪ್‌ವೆಲ್ ಸರ್ಕಲ್‌ನಲ್ಲಿ ಈಜುತ್ತಿರುವ ದೃಶ್ಯ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
----------------------
- ಬಬಲೇಶ್ವರದ ಮಮದಾಪುರಕೆರೆ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ 5 ಸಾವಿರ ಸಸಿಗಳನ್ನು ನೆಟ್ಟು ಬೆಳಸಲು ಡಾ.ಎಂ.ಬಿ ಪಾಟೀಲ ಅವರು ಮುಂದಾಗಿದ್ದಾರೆ. ಇಲ್ಲಿ ಅರಳಿ, ಬೇವು, ಬಸರಿ, ಹುಣಸೆ, ಮುಂತಾದ ಜಾತಿಯ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಹಂತ ಹಂತವಾಗಿ ಸುಮಾರು 2ಲಕ್ಷ ಮರಗಳನ್ನು ಅರಳಿಸುವ ಗುರಿಯಿದೆ ಎಂದು ಅವರು ತಿಳಿಸಿದ್ದಾರೆ.
----------------------
- ಕೇರಳದಲ್ಲಿ ನಂದಿನಿ ಹಾಲಿ ಉತ್ಪನ್ನ ಹಾಗೂ ಡೈರಿಯ ವಿಸ್ತರಣೆಗೆ ಮುಂದಾಗಿದ್ದ ಕೆಎಂಎಫ್ಗೆ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ. ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟದ ಕುರಿತು ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಂದಿನಿ ಡೈರಿ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕೇರಳ ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ಸಚಿವ ಜೆ ಚಿಂಚುರಾಣಿ ಅವರು ಮಾಹಿತಿ ನೀಡಿದ್ದು, ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಸಿಇಒ ಅವರಿಂದ ಕೇರಳದ ಹಾಲಿನ ಡೈರಿಗಳಲ್ಲಿ ನಂದಿನಿ ಬ್ರಾಂಡ್ನ ಹಾಲುಗಳನ್ನು ಮಾರಾಟದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದಿದ್ದಾರೆ. ಕೇರಳದ ಮಿಲ್ಮಾ ಹಾಗೂ ಕರ್ನಾಟಕದ ನಂದಿನಿ ಹಾಲು ಎರಡೂ ಸಹ ಸರ್ಕಾರ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಎರಡೂ ಸಹ ರೈತರಿಂದ ಹಾಲು ಖರೀದಿಸಿ ಮಾರಾಟ ಮಾಡುತ್ತಿವೆ. ಕೇರಳದಲ್ಲಿ ನಂದಿನಿ ಡೈರಿ ವಿಸ್ತರಿಸಬಾರದು ಹಾಗೂ ಮಳಿಗೆಗಳ ಪ್ರಾರಂಭಕ್ಕೆ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು ಎಂದು ಸಚಿವ ಜೆ ಚಿಂಚುರಾಣಿ ಈಚೆಗೆ ಹೇಳಿದ್ದರು.
----------------------
- ಕೇಂದ್ರ ಸರ್ಕಾರವು ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ಮೊತ್ತವನ್ನು ಕಡಿತ ಮಾಡಿದೆ. ಈ ಜಿಎಸ್‌ಟಿ ಕಡಿತ ನಿರ್ಧಾರ ಜುಲೈ ಮೊದಲ ದಿನ ಜಾರಿಗೆ ಬಂದಿದೆ. ಈಚೆಗೆ ಎಲೆಕ್ಟ್ರಾನಿಕ್ ಸರಕುಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯಲ್ಲಿ ಕಡಿತ ಮಾಡಲಾಗಿತ್ತು. 32 ಇಂಚಿಗೂ ಮೀರಿದ ಟಿವಿಗಳ ಮೇಲಿನ ಜಿಎಸ್‌ಟಿ ಮೊತ್ತವನ್ನು ಇದೀಗ ಶೇಕಡಾ 31.3 ರಿಂದ ಶೇಕಡಾ 18ಕ್ಕೆ ಇಳಿಸಲಾಗಿದೆ. ಮಿಕ್ಸರ್ ಮತ್ತು ಜ್ಯೂಸರ್‌ಗಳ ಜಿಎಸ್‌ಟಿ ದರ ಶೇ.31.3ರಷ್ಟಿತ್ತು. ಈಗ ಅದನ್ನು ಶೇ.18ಕ್ಕೆ ಇಳಿಸಲಾಗಿದೆ. ಎಲ್ಇಡಿ ಬಲ್ಪ್‌ಗಳ ಜಿಎಸ್ಟಿ ದರವನ್ನು 15ರಿಂದ 12ಕ್ಕೆ ಇಳಿಸಲಾಗಿದೆ. ಎಲ್‌ಪಿಜಿ ಸ್ಟೌವ್‌ಗಳು ಮತ್ತು ಹೊಲಿಗೆ ಯಂತ್ರಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಗಣನೀಯವಾಗಿ ಕಡಿತಗೊಳಿಸಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.